ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಚಿಕ್ಕು ಬೆಳೆದವನ ಬದುಕು ಚೊಕ್ಕ

Vishwanath S
Updated On : 13 Jul 2013, 11:13 am

ಕನ್ನಡಪ್ರಭ ವಾರ್ತೆ, ಹೂವಿನಹಡಗಲಿ, ಜು. 12
ಗಗನಕ್ಕೇರಿದ ರಸಗೊಬ್ಬರ, ಕೃಷಿ ಕೂಲಿ ಕಾರ್ಮಿಕರ ಕೊರತೆ, ಅತಿಯಾದ ಔಷಧಿ ಬಳಕೆಯಿಂದ ಕೃಷಿ ನಿರ್ವಹಣೆ ವೆಚ್ಚ ಭರಿಸಲಾಗದೆ ರೋಸಿ ಹೋದ ಹೊಳಲು ಗ್ರಾಮದ ರೈತ ಕುರುವತ್ತೆಪ್ಪ ಸಾವಯವ ತೋಟಗಾರಿಕೆಗೆ ಮಾರು ಹೋಗಿದ್ದಾನೆ.
ತೋಟಗಾರಿಕೆ ಬೆಳೆಗಳಿಗೆ ಉತ್ತೇಜನ ನೀಡಲು ಇಲಾಖೆ ಜಾರಿಗೆ ತಂದ ರಾಷ್ಟ್ರೀಯ ಕೃಷಿ ಮಿಷನ್ ಯೋಜನೆಯಡಿ ಸಹಾಯಧನ ಪಡೆದು ವಿವಿಧ ಹಣ್ಣು ಮತ್ತು ಇತರೆ ತೋಟಗಾರಿಕೆ ಬೆಳೆಗಳನ್ನು ಬೆಳೆಯುತ್ತಿದ್ದಾನೆ.
14 ಎಕರೆಯಲ್ಲಿ ಬೆಳೆ: ಸರ್ಕಾರದ ಸಹಾಯಧನವಿಲ್ಲದೆ ಅವಿದ್ಯಾವಂತ ರೈತ ಕುರುವತ್ತೆಪ್ಪ ಸಾವಯವ ಕೃಷಿ ಮೈಗೂಡಿಸಿಕೊಂಡು ಆರಂಭದಲ್ಲಿ 10 ಎಕರೆ, ಅನಂತರ 4 ಎಕರೆ ಸೇರಿ ಒಟ್ಟು 14 ಎಕರೆ ಪ್ರದೇಶದಲ್ಲಿ ಸಪೋಟ (ಚಿಕ್ಕು) ಬೆಳೆಯುತ್ತಿದ್ದಾರೆ. ಉಷ್ಣವಲಯ ಪ್ರದೇಶಗಳಿಗೆ ಹೊಂದಿಕೊಳ್ಳುವ ಮಧ್ಯಮ ಕಪ್ಪು ಮಣ್ಣಿನಲ್ಲಿ ವರ್ಷಕ್ಕೆ ಎರಡು ಬಾರಿ ಫಲ ನೀಡುವ ಕ್ರಿಕೆಟ್ ಬಾಲ್ ತಳಿಯನ್ನು ನಾಟಿ ಮಾಡಿರುವ ಕುರುವತ್ತೆಪ್ಪ, ಹೆಚ್ಚಾಗಿ ರಸಗೊಬ್ಬರ ಬಳಸದೆ ತೋಟದಲ್ಲಿ ಬಿದ್ದ ಕಸ ಕಡ್ಡಿಯಿಂದ ಸಾವಯವ ಗೊಬ್ಬರ ತಯಾರಿಸಿ ಅದನ್ನೇ ಸಪೋಟ ಗಿಡಗಳಿಗೆ ಬಳಕೆ ಮಾಡುತ್ತಾ, ಭೂಮಿಯ ಫಲವತ್ತತೆ ಹೆಚ್ಚಿಸಿಕೊಂಡು ಹಣ್ಣು ಬೆಳೆಯುತ್ತಿದ್ದಾರೆ.
ವರ್ಷಕ್ಕೆ 200 ಕ್ವಿಂಟಲ್: ಸಪೋಟ ನಾಟಿ ಮಾಡಿ 6 ವರ್ಷಗಳ ಬಳಿಕ ಫಲ ನೀಡುತ್ತದೆ. ಗಿಡಗಳು ದೊಡ್ಡದಾಗಿ ಬೆಳೆದಂತೆ ವರ್ಷಕ್ಕೆ 200 ಕ್ವಿಂಟಲ್‌ಗೂ ಹೆಚ್ಚು ಫಲ ನೀಡುತ್ತದೆ. ಆದರೆ ಬೆಳೆದ ಹಣ್ಣಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಇಲ್ಲದ ಕಾರಣ ಕೆಲ ವ್ಯಾಪಾರಸ್ಥರೊಂದಿಗೆ ಒಪ್ಪಂದ ಮಾಡಿಕೊಂಡು ಮಾರಾಟ ಮಾಡುತ್ತಿದ್ದೇವೆ. ಇದರಿಂದ ರೈತರಿಗೆ ಹೆಚ್ಚಿನ ಆದಾಯ ಬರುವುದಿಲ್ಲ. ಮಧ್ಯವರ್ತಿಗಳ ಹಾವಳಿಯಿಂದ ಮಾರುಕಟ್ಟೆಗೆ ತಕ್ಕಂತೆ ಸೂಕ್ತ ಬೆಲೆ ಸಿಗುವುದಿಲ್ಲ. ಆದ್ದರಿಂದ ಸರ್ಕಾರ ಮತ್ತು ಇಲಾಖೆಯ ಅಧಿಕಾರಿಗಳು ಸೂಕ್ತ ಹರಾಜು ಮಾರುಕಟ್ಟೆ ವ್ಯವಸ್ಥೆ ಮಾಡಿದರೆ ಮಾತ್ರ ರೈತರು ತೋಟಗಾರಿಕೆ ಬೆಳೆಯನ್ನು ಹೆಚ್ಚಾಗಿ ಅಳವಡಿಸಿಕೊಳ್ಳುಬಹುದು.
ಮಾರುಕಟ್ಟೆಯಲ್ಲಿ ರು. 20ಗೆ ಕೆಜಿಯಂತೆ ಬೆಲೆ ದೊರೆತರೆ ಮಾತ್ರ ಹೆಚ್ಚಿನ ಆದಾಯ ನಿರೀಕ್ಷೆ ಮಾಡಲು ಸಾಧ್ಯ. 10 ಎಕರೆಯಲ್ಲಿ ಬೆಳೆಯುತ್ತಿರುವ ಸಪೋಟದಿಂದ ವರ್ಷಕ್ಕೆ ರು. 3 ಲಕ್ಷ ಆದಾಯ ಬರುತ್ತಿದೆ. ಇತರೆ ವಾಣಿಜ್ಯ ಬೆಳೆಗಳಾದ ಮೆಕ್ಕೆಜೋಳ, ಸೂರ್ಯಕಾಂತಿ ಗೆ ಹೋಲಿಸಿದರೆ ತೋಟಗಾರಿಕೆ ಬೆಳೆ ಕಡಿಮೆ ವೆಚ್ಚ, ಹೆಚ್ಚು ಆದಾಯ ನೀಡುತ್ತದೆ ಎನ್ನುತ್ತಾರೆ ರೈತ ಕುರುವತ್ತೆಪ್ಪ.
ಹೆಕ್ಟೇರ್‌ಗೆ 10-15 ಟನ್: ಒಂದು ಸಪೋಟ ಸಾಮಾನ್ಯವಾಗಿ 1,000-1,500 ಹಣ್ಣುಗಳನ್ನು ಬಿಡುತ್ತದೆ. ಹೆಕ್ಟೇರ್‌ಗೆ 10-15 ಟನ್ ಇಳುವರಿ ಸಿಗುತ್ತದೆ. ಜತೆಗೆ ಸವಳು ಮತ್ತು ಜವಳು ಭೂಮಿಯಲ್ಲಿ ಸಪೋಟ ಬೆಳೆಯುವುದರಿಂದ ಸವಳಾಗುವುದನ್ನು ನಿಯಂತ್ರಿಸುತ್ತದೆ. ಸರ್ಕಾರ ತೋಟಗಾರಿಕೆ ಬೆಳೆಗಳಿಗೆ ಉತ್ತೇಜನ ನೀಡಲು ಹೆಕ್ಟೇರ್‌ವೊಂದಕ್ಕೆ ರು. 25 ಸಾವಿರ ಸಹಾಯಧನ ನೀಡುತ್ತಿದೆ. ಆದರೆ ರೈತರು ಬೆಳೆದ ಹಣ್ಣುಗಳಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಮಾಡಲು ಇಲಾಖೆಯಲ್ಲಿ ಯಾವುದೇ ವಿನಾಯ್ತಿ ಯೋಜನೆಗಳಿಲ್ಲ. ಕೃಷಿ ಉತ್ಪನ್ನ ಮಾರುಕಟ್ಟೆಯವರು ಇದರ ವ್ಯವಸ್ಥೆ ಮಾಡಬೇಕು ಎನ್ನುತ್ತಾರೆ ಇಲಾಖೆ ಸಹಾಯಕ ಉಪನಿರ್ದೇಶಕ ಯೋಗಾನಂದ.
ಒಟ್ಟಾರೆ ಚಿಕ್ಕು ಹಣ್ಣು ಬೆಳೆದ ರೈತ ಕುರುವತ್ತೆಪ್ಪನ ಬದುಕು ಹಣ್ಣಿನಷ್ಟೇ ಸಿಹಿಯಾಗಿದೆ. ಆದರೆ ಸರ್ಕಾರ ರೈತರಿಗೆ ಹೆಚ್ಚು ಸೌಲಭ್ಯಗಳನ್ನು ನೀಡಬೇಕಿದೆ.
 ಅನುದಾನ ನೀಡಿಲ್ಲ...
ಸಪೋಟ, ಇತರ ಹಣ್ಣಗಳನ್ನು ಸಂಗ್ರಹಿಸಲು ಹಾಗೂ ಹಣ್ಣುಗಳು ಕೆಡದಂತೆ ಇಡಲು ತೋಟಗಾರಿಕೆ ಯೋಜನೆಯಡಿ ಪ್ಯಾಕ್‌ಹೌಸ್ ನಿರ್ಮಾಣ ಮಾಡಿಕೊಳ್ಳಿ, ಇದಕ್ಕೆ ಇಲಾಖೆಯಿಂದ ರು. 1.5 ಲಕ್ಷ ಸಹಾಯಧನ ನೀಡುತ್ತೇವೆಂದು ತೋಟಗಾರಿಕೆ ಇಲಾಖೆಯವರು ಹೇಳಿದ್ದರು. ಈ ಕುರಿತು ಅಗತ್ಯ ಎಲ್ಲ ದಾಖಲೆಗಳನ್ನು ನೀಡಿದ್ದರೂ ಈ ವರೆಗೂ ಅನುದಾನ ನೀಡಿಲ್ಲ. ಕಟ್ಟಡ ಪೂರ್ಣಗೊಂಡಿದೆ. ಇದರಲ್ಲಿ ಸಪೋಟ ಹಣ್ಣುಗಳನ್ನು ಸಂಗ್ರಹಿಸಲು ಬಳಸಲಾಗುತ್ತಿದೆ. ಹೀಗಾದರೆ ತೋಟಗಾರಿಕೆ ಇಲಾಖೆಯಿಂದ ತಮಗೆ ಏನು ಲಾಭವಿಲ್ಲ.
- ಕುರುವತ್ತೆಪ್ಪ, ಸಪೋಟ ಬೆಳಗಾರ
ಸಪೋಟ ಬೆಳೆಗಾರ ಕುರುವತ್ತೆಪ್ಪ ಇವರು ಪ್ಯಾಕ್‌ಹೌಸ್ ನಿರ್ಮಾಣ ಮಾಡಿಕೊಂಡಿದ್ದಾರೆ. ಆದರೆ ದಾಖಲೆಗಳನ್ನು ಸಮಯಕ್ಕೆ ಸರಿಯಾಗಿ ನೀಡಿಲ್ಲ. ಆದರೂ ಮೇಲಧಿಕಾರಿಗಳಿಗೆ ನೇರವಾಗಿ ದಾಖಲೆಗಳನ್ನು ನೀಡಿ ಜ್ಯೇಷ್ಠತೆ ಆಧಾರದ ಮೇಲೆ ಪ್ರೋತ್ಸಾಹ ಧನ ನೀಡುವಂತೆ ಅಧಿಕಾರಿಗಳಲ್ಲಿ ಮನವಿ ಮಾಡಿಕೊಳ್ಳಲಾಗಿದೆ.
- ಯೋಗಾನಂದ, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ
ಹೆಚ್ಚು ಪೌಷ್ಟಿಕಾಂಶ
ಸಪೋಟ ಹಣ್ಣಿನಲ್ಲಿ ಅಪಾರ ಪ್ರಮಾಣದಲ್ಲಿ ಕ್ಯಾಲ್ಸಿಯಂ ಇರುವುದರಿಂದ ಅದನ್ನು ಹೆಚ್ಚಾಗಿ ಬಳಕೆ ಮಾಡುವುದರಿಂದ ಮಾನವನ ಮೂಳೆ ಸವೆತ ಮತ್ತು ಇತರೆ ಮೂಳೆ ಸಮಸ್ಯೆಗಳಿಂದ ಮುಕ್ತಿ ಹೊಂದಬಹುದು. ಮಾನವನ ದೇಹಕ್ಕೆ ಶಕ್ತಿ ಉತ್ಪಾದನೆಗೆ ಸಪೋಟ ಹಣ್ಣು ಸಹಕಾರಿಯಾಗುತ್ತದೆ. ಅದರಲ್ಲಿ ಹೆಚ್ಚು ಪೌಷ್ಟಿಕಾಂಶಗಳಿವೆ.
- ಡಾ. ಈಶ್ವರ, ವೈದ್ಯ

-ಚಂದ್ರು ಕೊಂಚಿಗೇರಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement