ತುಂಗಭದ್ರಾ ಜಲಾಶಯ: ಲಭ್ಯತೆ ಅನುಸಾರ ಕಾಲುವೆಗೆ ನೀರು
ಬಳ್ಳಾರಿ: ಮುನಿರಾಬಾದಿನಲ್ಲಿ ಜು. 9ರಂದು ಜರುಗಿದ ತುಂಗಭದ್ರಾ ಯೋಜನೆ ಮತ್ತು ವಿಜಯನಗರ ಕಾಲುವೆಗಳ ನೀರಾವರಿ ಸಲಹಾ ಸಮಿತಿ ಸಭೆಯ ನಿರ್ಣಯದಂತೆ ತುಂಗಭದ್ರಾ ಜಲಾಶಯದಿಂದ ಮುಂಗಾರು ಹಂಗಾಮಿಗಾಗಿ ವಿವಿಧ ಕಾಲುವೆಗಳಿಗೆ ಲಭ್ಯತೆಯನುಸಾರ ನೀರು ಬಿಡಲಾಗುವುದು ಎಂದು ತುಂಗಭದ್ರಾ ಯೋಜನಾ ವೃತ್ತದ ಅಧೀಕ್ಷಕ ಎಂಜಿನಿಯರ್ ಎಸ್.ಎಚ್. ಮಂಜಪ್ಪ ತಿಳಿಸಿದ್ದಾರೆ.
ಮುಂಗಾರು ಹಂಗಾಮಿಗಾಗಿ ವಿವಿಧ ಕಾಲುವೆಗಳಿಗೆ ನೀರು ಹರಿಸಲಾಗುವ ವಿವರ ಇಂತಿದೆ. ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆಗೆ ಜು. 10ರಿಂದ ನವೆಂಬರ್ 30ರ ವರೆಗೆ ಸರಾಸರಿ 3,200 ಕ್ಯುಸೆಕ್‌ನಂತೆ, ತುಂಗಭದ್ರಾ ಬಲದಂಡೆ ಕೆಳಮಟ್ಟದ ಕಾಲುವೆಗೆ ಜು. 10ರಿಂದ ನವೆಂಬರ್ 30ರ ವರೆಗೆ ಸರಾಸರಿ 600 ಕ್ಯುಸೆಕ್‌ನಂತೆ, ತುಂಗಭದ್ರಾ ಬಲದಂಡೆ ಮೇಲ್ಮಟ್ಟದ ಕಾಲುವೆಗೆ ಜು. 10ರಿಂದ ನವೆಂಬರ್ 30ರ ವರೆಗೆ ಸರಾಸರಿ 1000 ಕ್ಯುಸೆಕ್‌ನಂತೆ, ರಾಯಾ ಬಸವಣ್ಣ ಕಾಲುವೆಗೆ ಜೂ. 1ರಿಂದ ಡಿಸೆಂಬರ್ 10ರ ವರೆಗೆ ಸರಾಸರಿ 180 ಕ್ಯುಸೆಕ್‌ನಂತೆ, ತುಂಗಭದ್ರಾ ಎಡದಂಡೆ ಮೇಲ್ಮಟ್ಟದ ಕಾಲುವೆಗೆ ಜು. 10ರಿಂದ ನವೆಂಬರ್ 30ರ ವರೆಗೆ ಸರಾಸರಿ 16 ಕ್ಯುಸೆಕ್‌ನಂತೆ ನೀರು ಒದಗಿಸಲಾಗುವುದು. ನಿಗದಿತ ಕಾಲಾವಧಿ ಅಥವಾ ಸದರಿ ಕಾಲುವೆಗಳಲ್ಲಿ ನೀರಿನ ಲಭ್ಯತೆ ಇರುವವರೆಗೆ ಮಾತ್ರ ಇದರಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ನೀರು ಬಿಡಲಾಗುವುದು ಎಂದಿದ್ದಾರೆ.
ಜು. 4ರ ಸಂಜೆಯಿಂದ ಜು. 9ರ ವರೆಗೆ 500 ಕ್ಯುಸೆಕ್‌ನಂತೆ ತುಂಗಭದ್ರಾ ಜಲಾಶಯದ ಕೆಳಭಾಗದಲ್ಲಿ ಬರುವ ನಗರ, ಹಳ್ಳಿಗಳಿಗೆ ಕುಡಿಯುವ ನೀರಿನ ಸಮಸ್ಯೆ ನೀಗಿಸುವ ಸಂಬಂಧ ನದಿ ಮೂಲಕ ನೀರನ್ನು ಹರಿಬಿಡಲಾದ ಕ್ರಮವನ್ನು ಸಭೆ ಸ್ಥಿರೀಕರಿಸಿದೆ. ಎಡದಂಡೆ ಮುಖ್ಯ ಕಾಲುವೆಯಡಿ ಬರುವ ಗಣೇಕಲ್ ಜಲಾಶಯ, ಸಿಂಧನೂರು ಕೆರೆ ಹಾಗೂ ಇತರೆ ಕೆರೆಗಳಿಗೆ ಕುಡಿಯುವ ನೀರಿಗಾಗಿ ಕೂಡಲೇ ಕೆರೆ ತುಂಬಿಸಲು ಜು. 20ರ ವರೆಗೆ ಕಾಲುವೆಯ ಮೇಲ್ಭಾಗದ ಎಲ್ಲ ಗೇಟ್‌ಗಳನ್ನು ನಿಯಂತ್ರಿಸಿ ಕ್ರಮ ಕೈಗೊಳ್ಳಲು ಸಭೆ ನಿರ್ಣಯಿಸಿದೆ ಎಂದು ಅವರು ತಿಳಿಸಿದ್ದಾರೆ.