ಪಡಿತರ ಅಕ್ಕಿ ಅಕ್ರಮ ಮಾರಾಟ
ಹೂವಿನಹಡಗಲಿ: ತಾಲೂಕಿನ ಇಟ್ಟಿಗಿ ಗ್ರಾಮದ ಹೊರವಲಯದ ಅಂಗಡಿಯೊಂದರ ಪಕ್ಕದಲ್ಲಿ ಸೊಸೈಟಿಗೆ ಸೇರಿದ್ದು ಎನ್ನಲಾದ ಪಡಿತರ ಅಕ್ಕಿಯನ್ನು ವ್ಯಕ್ತಿಯೋರ್ವ ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಸಂದರ್ಭದಲ್ಲಿ ಪೊಲೀಸರು ದಾಳಿ ಮಾಡಿ ಆರೋಪಿಯನ್ನು ಬಂಧಿಸಿದ್ದಾರೆ.
ಇಟ್ಟಿಗಿ ಗ್ರಾಮದ ಬಂಧಿತ ಆರೋಪಿ ಹನುಮಂತ ಶೆಟ್ಟಿ 50 ಕೆಜಿ ತೂಕದ 15 ಚೀಲ ಅಕ್ಕಿಯನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ವೇಳೆ ಇಟ್ಟಿಗಿ ಪೊಲೀಸ್ ಠಾಣೆ ಪಿಎಸ್ಐ ಮಹಮದ್ ರಫಿ ಮತ್ತು ಸಿಬ್ಬಂದಿ ದಾಳಿ ಮಾಡಿ 15 ಚೀಲ ಅಕ್ಕಿಯನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಇಲಾಖೆಗೆ ಒಪ್ಪಿಸಲಾಗಿದೆ. ಈ ಕುರಿತು ಠಾಣೆಯಲ್ಲಿ ದೂರು ದಾಖಲಿಸಲಾಗಿದೆ ಎಂದು ಪಿಎಸ್ಐ ಮಹಮದ್ ರಫಿ ಅವರು ತಿಳಿಸಿದ್ದಾರೆ.
ಬಾಕಿ ವೇತನ ನೀಡಲು ಆಗ್ರಹ
ಹೊಸಪೇಟೆ: ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು ಹಂಪಿಯಲ್ಲಿ ದಿನಗೂಲಿ ನೌಕರರಿಗೆ ಜನವರಿ ತಿಂಗಳಿಂದ ವೇತನ ನೀಡಿಲ್ಲ. ತಕ್ಷಣ ಬಾಕಿ ವೇತನ ಪಾವತಿಸಬೇಕು ಎಂದು ಎಐಟಿಯುಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ.ಆರ್.ಎಂ. ಇಸ್ಮಾಯಿಲ್ ಆಗ್ರಹಿಸಿದ್ದಾರೆ. ಹಂಪಿಯಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಸಂರಕ್ಷಣೆ ಹಾಗೂ ಉತ್ಖನನ ವಿಭಾಗದಲ್ಲಿ ನೂರಾರು ಜನ ದಿನಗೂಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಕಾರ್ಮಿಕರು ಅನೇಕ ವರ್ಷಗಳಿಂದಲೂ ಕಾರ್ಯನಿರ್ವಹಿಸುತ್ತಿದ್ದು, ನಾಲ್ಕು ವರ್ಷದಿಂದ ಸಾವಿರ ರು.ಗಳಿಗೆ ಸ್ಪೆಷಲ್ ಇನ್ಕ್ರಿಮೆಂಟ್ ನೀಡುತ್ತಾ ಬರುತ್ತಿದ್ದು, ಇದನ್ನು ಈಗಿರುವ ಭಾರತೀಯ ಪುರಾತತ್ವ ಇಲಾಖೆಯ ಸಿನೀಯರ್ ಅಸಿಸ್ಟೆಂಟ್ ಸಂರಕ್ಷಣಾಧಿಕಾರಿ ತೇಜಸ್ವಿ ನಿರಾಕರಿಸಿದ್ದಾರೆ. ಬಳ್ಳಾರಿ ಕೇಂದ್ರ ಕಾರ್ಮಿಕ ಇಲಾಖೆಯ ಆಯುಕ್ತರು ವೇತನ ಪಾವತಿ ಮಾಡುವಂತೆ ಆದೇಶಿಸಿದ್ದರೂ ವೇತನ ನೀಡದೆ ಕಾರ್ಮಿಕರನ್ನು ಸತಾಯಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ತಕ್ಷಣ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಂಡು, ಸ್ಪೆಷಲ್ ಇನ್ಕ್ರಿಮೆಂಟ್ ಸಹಿತ ವೇತನವನ್ನು ಕೂಡಲೇ ಪಾವತಿಸಬೇಕೆಂದು ಭಾರತೀಯ ಪುರಾತತ್ವ ಇಲಾಖೆಯ ಬೆಂಗಳೂರು ವಲಯಾಧಿಕಾರಿಗೆ ಮನವಿ ಮಾಡಲಾಗಿದೆ ಎಂದು ಇಸ್ಮಾಯಿಲ್, ಎಐಟಿಯುಸಿ ತಾಲೂಕು ಅಧ್ಯಕ್ಷ ಶ್ರೀನಿವಾಸಲು, ಸಂಘದ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹೇಳಿದ್ದಾರೆ.
ಹೊಸಹಳ್ಳಿ: ಇಂದು ಪುಸ್ತಕ ಬಿಡುಗಡೆ
ಕೂಡ್ಲಿಗಿ: ತಾಲೂಕಿನ ಹೊಸಹಳ್ಳಿ ಕಲ್ಲೇಶ್ವರ ದೇವಸ್ಥಾನದಲ್ಲಿ ಜು. 13ರಂದು ಮಧ್ಯಾಹ್ನ 2 ಗಂಟೆಗೆ ಕನ್ನಡ ಸಾಹಿತ್ಯ ಪರಿಷತ್ ಹೊಸಹಳ್ಳಿ ಹೋಬಳಿ ಘಟಕದ ಆಶ್ರಯದಲ್ಲಿ ಲೇಖಕ ವಿರೂಪಾಕ್ಷ ಗುರು ಅವರ ಗಗನ ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ. ಕಾನಮಡುಗು ದಾಸೋಹ ಮಠದ ಐಮಡಿ ಶರಣಾರ್ಯರು ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ಕಸಾಪ ಹೋಬಳಿ ಅಧ್ಯಕ್ಷ ಡಾ. ಎ. ಕರಿಬಸಪ್ಪ ಅಧ್ಯಕ್ಷತೆ ವಹಿಸಲಿದ್ದು, ತಾಲೂಕು ಕಸಾಪ ಅಧ್ಯಕ್ಷ ಎಸ್.ಎಂ. ಗುರುಪ್ರಸಾದ್, ನಿಕಟಪೂರ್ವ ಅಧ್ಯಕ್ಷ ಎನ್.ಎಂ. ರವಿಕುಮಾರ್, ಪ್ರಾಚಾರ್ಯ ಕೆ. ಮಹಾಸ್ವಾಮಿ, ಗ್ರಾಪಂ ಮಾಜಿ ಅಧ್ಯಕ್ಷ ಎಸಿ ಚನ್ನಬಸಪ್ಪ, ಸಿನಿಮಾ ಸಿದ್ದನಗೌಡ, ಎಚ್.ಕೆ. ವೆಂಕಟೇಶ್ವರ ರಾವ್, ಅಯ್ಯನಹಳ್ಳಿ ಎಚ್. ಚಿದಾನಂದಪ್ಪ, ನಿವೃತ್ತ ಬಿಡಿಒ ಎಸ್.ಎಂ. ಕೊಟ್ರಯ್ಯ, ಕೆ.ಎನ್. ಭೀಮಣ್ಣ, ಚುಸಾಪ ಜಿಲ್ಲಾಧ್ಯಕ್ಷ ಯು. ನಾಗೇಶ್, ಶರಣಗೌಡ, ಕುಂಬಾರ ತಿಪ್ಪೇಸ್ವಾಮಿ, ಧನಂಜಯ ಗುಡಿ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಸಹಾಯಕಿ ಹುದ್ದೆಗೆ ಅರ್ಜಿ ಆಹ್ವಾನ
ಬಳ್ಳಾರಿ: ಬಳ್ಳಾರಿ (ನಗರ) ಶಿಶು ಅಭಿವೃದ್ಧಿ ಯೋಜನೆ ವ್ಯಾಪ್ತಿಯ 27ನೇ ವಾರ್ಡ್ ಆದೋನಿ ಕೇರಿ ಅಂಗನವಾಡಿ ಕೇಂದ್ರದಲ್ಲಿ ಖಾಲಿಯಿರುವ 1 ಅಂಗನವಾಡಿ ಸಹಾಯಕಿ ಹುದ್ದೆಗಾಗಿ ಅರ್ಹ ಸ್ಥಳೀಯ ಮಹಿಳೆಯರಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲಿಚ್ಛಿಸುವ ಅಭ್ಯರ್ಥಿಗಳು 18ರಿಂದ 44 ವರ್ಷದೊಳಗಿನವರಾಗಿದ್ದು, ಸ್ಥಳೀಯ ಮಹಿಳೆಯಾಗಿರಬೇಕು. ಅಂಗನವಾಡಿ ಸಹಾಯಕಿಯರ ಹುದ್ದೆಗೆ ಅಭ್ಯರ್ಥಿಯು ಕನಿಷ್ಠ 4ನೇ ತರಗತಿ, ಗರಿಷ್ಠ ಎಸ್ಸೆಸ್ಸೆಲ್ಸಿ ವಿದ್ಯಾರ್ಹತೆ ಹೊಂದಿರಬೇಕು. ಬಡತನ ರೇಖೆಗಿಂತ ಕೆಳಗಿನ ಕುಟುಂಬಕ್ಕೆ ಸೇರಿದ್ದು, ಸಂಬಂಧಿಸಿದ ಬಿಪಿಎಲ್ ಕಾರ್ಡಿನ ಪ್ರತಿ ಸಲ್ಲಿಸಬೇಕು. ಬಿಪಿಎಲ್ ಅಭ್ಯರ್ಥಿಗಳಿಂದ ಅರ್ಜಿ ಬಾರದಿದ್ದಲ್ಲಿ ಎಪಿಎಲ್ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು. ಆಸಕ್ತ ಮಹಿಳೆಯರು ಅರ್ಜಿಯೊಂದಿಗೆ ವಿದ್ಯಾರ್ಹತೆ ಅಂಕಪಟ್ಟಿ, ಜನನ, ಜಾತಿ ಪ್ರಮಾಣ ಪತ್ರ, 6 ತಿಂಗಳ ಒಳಗೆ ತಹಸೀಲ್ದಾರರಿಂದ ಪಡೆದ ವಾಸಸ್ಥಳ ಪ್ರಮಾಣ ಪತ್ರ ಹಾಗೂ ಮತ್ತಿತರ ದಾಖಲೆಗಳ ಝೆರಾಕ್ಸ್ ಪ್ರತಿಗಳನ್ನು ಲಗತ್ತಿಸಿ ಜು. 25ರೊಳಗಾಗಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿ, ಬಳ್ಳಾರಿ (ನಗರ) ಇವರಿಗೆ ಸಲ್ಲಿಸುವಂತೆ ಪ್ರಕಟಣೆ ತಿಳಿಸಿದೆ.