ಪ್ರತಿ ನೌಕರನಿಗೆ ಇಲಾಖೆ ಬಗ್ಗೆ ಮಾಹಿತಿ ಇರಲಿ
ಕನ್ನಡಪ್ರಭ ವಾರ್ತೆ, ಹೊಸಪೇಟೆ, ಜು. 12
ಪ್ರತಿಯೊಬ್ಬ ನೌಕರ ತನ್ನ ಸೇವಾವಧಿಯನ್ನು ಯಶಸ್ವಿಯಾಗಿ ಪೂರೈಸಲು ತನ್ನ ಇಲಾಖೆ ಬಗ್ಗೆ ಮತ್ತು ಸೇವಾ ನಿಯಮಗಳ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಂಡಿರಬೇಕು. ಅದರಲ್ಲೂ ಖಜಾನೆಯಿಂದ ಹಣ ಸೆಳೆಯುವ ಸಂದರ್ಭದಲ್ಲಿ ಅತ್ಯಂತ ಜಾಗರೂಕತೆಯಿಂದ ವ್ಯವಹರಿಸಬೇಕು ಎಂದು ನಿವೃತ್ತ ಪ್ರಾಚಾರ್ಯ ಶ್ರೀಹರಿ ಹೇಳಿದರು.
ಇಲ್ಲಿನ ತಹಸೀಲ್ದಾರ್ ಕಚೇರಿ ಆವರಣದಲ್ಲಿ ಉಪ ಖಜಾನೆ ಹೊಸಪೇಟೆ ಕಚೇರಿಯಿಂದ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಅಧಿಕಾರಿ ಮತ್ತು ಸಿಬ್ಬಂದಿಗೆ ಖಜಾನೆ ಇಲಾಖೆಗೆ ಸಂಬಂಧಿಸಿದಂತೆ ಹಾಗೂ ನೌಕರರ ಸೇವಾ ನಿಯಮಗಳಿಗೆ ಸಂಬಂಧಿಸಿದಂತೆ ಎರಡು ದಿನಗಳ ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡಿದರು.
ಸರ್ಕಾರಿ ನೌಕರರು ಹಾಗೂ ವಿವಿಧ ಇಲಾಖೆಗಳ ಅನುದಾನಿತ ನೌಕರರು ಸರ್ಕಾರದಿಂದ ಪ್ರತಿ ತಿಂಗಳು ವೇತನ ಮತ್ತು ವೇತನೇತರ ಬಿಲ್ಗಳನ್ನು ಖಜಾನೆಗೆ ಸಲ್ಲಿಸಿ ಹಣ ಪಡೆಯುವುದು ರೂಢಿಯಲ್ಲಿದೆ. ಅದಕ್ಕೆ ತಕ್ಕ ಹಾಗೆ ಅಗತ್ಯವಿರುವ ಆದೇಶ, ಪ್ರಮಾಣ ಪತ್ರಗಳನ್ನು ಒದಗಿಸುವುದು ಅಧಿಕಾರಿಗಳ ಆದ್ಯ ಕರ್ತವ್ಯ. ಖಜಾನೆಗೆ ಸಲ್ಲಿಸುವ ಪ್ರತಿ ಬಿಲ್ಗಳನ್ನು ಸಂಪೂರ್ಣವಾಗಿ ಭರ್ತಿ ಮಾಡಿ, ಸರಿಯಿದೆಯೆಂದು ಖಾತರಿಪಡಿಸಿಕೊಂಡು ಸಲ್ಲಿಸಬೇಕು. ಹಾಗೆ ಸಲ್ಲಿಸಿದ ಬಿಲ್ಗಳಲ್ಲಿ ಸಂಬಂಧಪಟ್ಟವರ ಹೆಸರಿನಲ್ಲಿ ಮಾತ್ರ ಚೆಕ್ ಕೋರಿ ಅನುಬಂಧ- ಅ ಲಗತ್ತಿಸತಕ್ಕದ್ದು. ಅವಶ್ಯವಿರುವ ಸಂದರ್ಭದಲ್ಲಿ ಸಕ್ಷಮ ಪ್ರಾಧಿಕಾರದ ಮೇಲು ರುಜು, ಅನುಮೋದನೆ, ಮಂಜೂರಾತಿ ಆದೇಶಗಳನ್ನು ಹಾಗೂ ಅಗತ್ಯ ದಾಖಲೆಗಳ್ನು ಅಧಿಕಾರಿಗಳು ಒದಗಿಸುವುದು ಕರ್ತವ್ಯವಾಗಿರುತ್ತದೆ ಎಂದರು.
ಆದೇಶಗಳನ್ನು ಓದಿ: ಇತ್ತೀಚೆಗೆ ಎಚ್ಆರ್ಎಂಎಸ್ನಲ್ಲಿ ತಯಾರಿಸಿದ ಬಿಲ್ಗಳನ್ನು ಮಾತ್ರ ಸಲ್ಲಿಸುವುದು ಕಡ್ಡಾಯವಾಗಿರುವುದರಿಂದ ಎಲ್ಲಾ ಇಲಾಖೆಗಳು ಹಾಗೆ ತಯಾರಿಸಿದ ಬಿಲ್ಗಳನ್ನು ಮಾತ್ರ ಸಲ್ಲಿಸುವುದು. ಅಲ್ಲದೆ ಎಚ್ಆರ್ಎಂಎಸ್ನಲ್ಲಿ ತಯಾರಿಸಿದೆ ಎಂದ ಮಾತ್ರಕ್ಕೆ ಎಲ್ಲ ಸರಿಯಿದೆ ಎಂದು ಭಾವಿಸುವುದು, ಎನ್ಪಿಎಸ್ಗೆ ಸಂಬಂಧಿಸಿದಂತೆ 01, ಎಪ್ರಿಲ್ 2006ರಿಂದ ಈಚೆಗೆ ಸೇವೆಗೆ ಸೇರಿರುವ ನೌಕರರು ಕಡ್ಡಾಯವಾಗಿ ಎನ್ಪಿಎಸ್ ಮುರುವಳಿಯೊಂದಿಗೆ ಬಿಲ್ಗಳನ್ನು ಸಲ್ಲಿಸಬೇಕು.
ಈ ಬಗ್ಗೆ ಕೆಸಿಎಸ್ಆರ್, ಎಂಸಿಇ, ಕೆಟಿಸಿ, ಕೆಎಫ್ಸಿ ಹಾಗೂ ಕಾಲಕಾಲಕ್ಕೆ ಸರ್ಕಾರ ಹೊರಡಿಸುವ ಆದೇಶಗಳನ್ನು ಓದಿ ತಿಳಿದು ನಿಯಮಗಳನ್ನು ಪಾಲಿಸುವುದು ಎಲ್ಲ ಅಧಿಕಾರಿ ಮತ್ತು ನೌಕರನ ಆದ್ಯ ಕರ್ತವ್ಯವಾಗಿದೆ ಎಂದು ಹೇಳಿದರು. ಉಪ ಖಜಾನಾಧಿಕಾರಿ ವಿ. ಹರಿನಾಥಬಾಬು ಸೇರಿದಂತೆ ಇತರರು ಸಭೆಯಲ್ಲಿ ಉಪಸ್ಥಿತರಿದ್ದರು.
ಸರ್ಕಾರದಿಂದ ಪ್ರತಿ ತಿಂಗಳು ವೇತನ ಮತ್ತು ವೇತನೇತರ ಬಿಲ್ಗಳನ್ನು ಖಜಾನೆಗೆ ಸಲ್ಲಿಸಿ ಹಣ ಪಡೆಯುವುದು ರೂಢಿಯಲ್ಲಿದೆ. ಅದಕ್ಕೆ ತಕ್ಕ ಹಾಗೆ ಅಗತ್ಯವಿರುವ ಆದೇಶ, ಪ್ರಮಾಣ ಪತ್ರಗಳನ್ನು ಒದಗಿಸುವುದು ಅಧಿಕಾರಿಗಳ ಆದ್ಯ ಕರ್ತವ್ಯ. ಖಜಾನೆಗೆ ಸಲ್ಲಿಸುವ ಪ್ರತಿ ಬಿಲ್ಗಳನ್ನು ಸಂಪೂರ್ಣವಾಗಿ ಭರ್ತಿ ಮಾಡಿ, ಸರಿಯಿದೆಯೆಂದು ಖಾತರಿಪಡಿಸಿಕೊಂಡು ಸಲ್ಲಿಸಬೇಕು.
- ಶ್ರೀಹರಿ
ನಿವೃತ್ತ ಪ್ರಾಚಾರ್ಯ