ಬೇಡಿಕೆಗಳ ಈಡೇರಿಕೆಗೆ ಕಾರ್ಯಕರ್ತೆಯರ ಆಗ್ರಹ
ಬಳ್ಳಾರಿ: ಐಸಿಡಿಎಸ್‌ನ್ನು ಕ್ರಮಬದ್ಧಗೊಳಿಸಿ ಅದನ್ನೊಂದು ಪ್ರತ್ಯೇಕ ಇಲಾಖೆಯನ್ನಾಗಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬಳ್ಳಾರಿ ಜಿಲ್ಲಾ ಅಂಗನವಾಡಿ ನೌಕರರ ಸಂಘದ ಕಾರ್ಯಕರ್ತೆಯರು ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿದರು. ಜಿಲ್ಲೆಯ ವಿವಿಧೆಡೆಗಳಿಂದ ಆಗಮಿಸಿದ್ದ ನೂರಾರು ಕಾರ್ಯಕರ್ತೆಯರು ನಗರದ ಗಾಂಧಿ ಭವನದ ಬಳಿ ಜಮಾಯಿಸಿ, ಅಲ್ಲಿಂದ ಪ್ರತಿಭಟನಾ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಸಂಘದ ಅಧ್ಯಕ್ಷೆ ಕೆ. ನಾಗರತ್ನಮ್ಮ ಮಾತನಾಡಿ, ದೇಶದಲ್ಲಿ 1.8 ಕೋಟಿ ಮಹಿಳೆಯರು ಮತ್ತು 8 ಕೋಟಿ ಮಕ್ಕಳನ್ನು ಫಲಾನುಭವಿಗಳಾಗಿ ಹೊಂದಿರುವ ಮಾನವ ಸಂಪನ್ಮೂಲಗಳ ಅಭಿವೃದ್ಧಿಗೆ ಪೂರಕವಾದ ಬೃಹತ್ ಯೋಜನೆ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯಾಗಿದೆ. ಈ ಯೋಜನೆಯನ್ನು ಖಾಸಗೀಕರಣಗೊಳಿಸಬಾರದು. ಜತೆಗೆ 12ನೇ ಪಂಚವಾರ್ಷಿಕ ಯೋಜನೆಯಲ್ಲಿ ಐಸಿಡಿಎಸ್‌ಗಾಗಿ ರು. 3 ಲಕ್ಷ ಕೋಟಿ ಮೀಸಲಿಡಬೇಕು. ಎಲ್ಲ ಅಂಗನವಾಡಿ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಿ ಅಂಗನವಾಡಿ ಕೇಂದ್ರ ಮತ್ತು ಶಿಶು ವಿಹಾರಗಳನ್ನಾಗಿಸಬೇಕು. ಯಾವುದೇ ರೀತಿಯಲ್ಲೂ ಸರ್ಕಾರೇತರ ಸಂಘಟನೆಗಳ ಸಹ ಪಾಲುದಾರಿಕೆಯ ಹೆಸರಿನಲ್ಲಿ ಅಥವಾ ಖಾಸಗಿ-ಸರ್ಕಾರಿ ಪಾಲುದಾರಿಕೆಯ ಖಾಸಗೀಕರಣ ಮಾಡಬಾರದು ಎಂದು ಸರ್ಕಾರವನ್ನು ಒತ್ತಾಯಿಸಿದರು. ಜಿಲ್ಲಾ ಅಂಗನವಾಡಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಎಂ. ಎರ್ರೆಮ್ಮ, ಖಜಾಂಚಿ ಲೀಲಾವತಿ, ಉಮಾದೇವಿ, ಸೌಭಾಗ್ಯ, ಜಿ. ಶಕುಂತಲಾ, ಗೀತಾ, ಮೀನಾಕ್ಷಿ, ಜೆ. ರೇಣುಕಾ, ಈರಮ್ಮ, ಕೆ. ಸುಮಂಗಳಾ, ಸುವರ್ಣಮ್ಮ, ಇಂದಿರಾ, ವಿಜಯಲಕ್ಷ್ಮಿ ಸೇರಿದಂತೆ ಸಿಐಟಿಯು ಧುರೀಣರಾದ ಆರ್.ಎಸ್. ಬಸವರಾಜ, ಜೆ. ಸತ್ಯಬಾಬು ಇನ್ನಿತರೆ ಪ್ರಮುಖರು ಭಾಗವಹಿಸಿದ್ದರು.