ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ರು. 4 ಸಾವಿರ ಲಂಚ ಕೊಟ್ಟರೂ ಸಿಗಲಿಲ್ಲ ಮಾಸಾಶನ

Vishwanath S
Updated On : 13 Jul 2013, 11:15 am

ಹಗರಿಬೊಮ್ಮನಹಳ್ಳಿ: ಆತ ದೈಹಿಕ ಅಂಗವಿಕಲ, ಸರ್ಕಾರದಿಂದ ಬರುವ ಮಾಸಾಶನ ಪಡೆಯಲು ಹೆಣಗಾಡುತ್ತಿದ್ದ. ಕಚೇರಿಗೆಗಳಿಗೆ ಅಲೆದಾಡಿ ಕೊನೆಗೆ ಬೇಸತ್ತು ತನ್ನಿಂದಾಗದ ಕೆಲಸವನ್ನು ಮಧ್ಯವರ್ತಿಗೆ ಒಪ್ಪಿಸಿದ. ಆ ಕೆಲಸ ಮಾಡಲು ಮಧ್ಯವರ್ತಿಗೆ ಬರೋಬ್ಬರಿ ರು. 4 ಸಾವಿರ ಕೊಟ್ಟ, ಆದರೆ ಮಾಸಾಶನ ಮಾತ್ರ ಇದುವರೆಗೆ ಆತನಿಗೆ ಸಿಗಲೇ ಇಲ್ಲ.
ಇವತ್ತು ಮಾಸಾಶನ ಪ್ರಮಾಣ ಪತ್ರ ಬರುತ್ತೆ, ನಾಳೆ ಆರ್ಡರ್ ಕಾಪಿ ಸಿಗುತ್ತೆ, ಇನ್ನೆನು ಬಂದೇ ಬಿಡುತ್ತೆ ಎಂಬ ಮಧ್ಯವರ್ತಿಗಳ ಬಿಂಕದ ಮಾತುಗಳನ್ನು ನಂಬಿ ಮಾಸಾಶನ ನಿರೀಕ್ಷೆಯಲ್ಲಿ ಕೂಲಿ ಕಾರ್ಮಿಕನಾದ ಹಗರಿಬೊಮ್ಮನಹಳ್ಳಿ ತಾಲೂಕಿನ ಬಲ್ಲಾಹುಣ್ಸಿ ಗ್ರಾಮದ ಸಣ್ಣಕೊಟ್ರಗೌಡ ಬದುಕು ದೂಡುತ್ತಿದ್ದಾನೆ. ಈತನನ್ನು ಬಳ್ಳಾರಿಯ ದಕ್ಷ ಜಿಲ್ಲಾಧಿಕಾರಿ ಆಮ್ಲಾನ್ ಆದಿತ್ಯ ಬಿಸ್ವಾಸ್ ಅವರು ಮಧ್ಯವರ್ತಿಗಳ ಇಕ್ಕಳದಿಂದ ಪಾರುಮಾಡಿ, ಆತನಿಗೆ ಅಂಗವಿಕಲ ಮಾಸಾಶನ ಮಂಜೂರು ಮಾಡಿಸುವವರೇ ಎಂಬ ದೂರದ ಆಸೆಯನಿಟ್ಟುಕೊಂಡಿದ್ದಾನೆ ಸಣ್ಣಕೊಟ್ರಗೌಡ.
ರು. 4 ಸಾವಿರ ಕೊಟ್ಟ: 9ನೇ ತರಗತಿವರೆಗೂ ಕಲಿತಿರುವ ಸಣ್ಣಕೊಟ್ರಗೌಡ ದೈಹಿಕ ಬೆಳವಣಿಗೆಯಲ್ಲಿ ಕುಂಠಿತವಾಗಿದ್ದರಿಂದ  34 ವರ್ಷ ದಾಟಿದ್ದರೂ ಇನ್ನೂ ಹನ್ನೆರಡು ವರ್ಷದ ಬಾಲಕನಂತೆ ಕಾಣಿಸುತ್ತಾನೆ.
ಬದುಕಿನ ಬಂಡಿ ಎಳೆಯಲು ಗ್ರಾಮದಿಂದ ನಾಲೈದು ಕಿ.ಮೀ. ದೂರದಲ್ಲಿರುವ ಹಗರಿಬೊಮ್ಮನಹಳ್ಳಿ ಪಟ್ಟಣಕ್ಕೆ ಬಂದು, ಇಲ್ಲಿನ ಹೋಟೆಲ್‌ನಲ್ಲಿ ಕ್ಲೀನರ್ ಆಗಿ ಇಲ್ಲವೆ ಅಂಗಡಿಗಳಲ್ಲಿ ಕೂಲಿಯಾಗಿ ಕೆಲಸ ನಿರ್ವಹಿಸಿ ತನ್ನ ಬದುಕನ್ನು ಸಾಗಿಸುತ್ತಿದ್ದಾನೆ. ಇಷ್ಟೆಲ್ಲ ಕೂಲಿ ಮಾಡಿಯೇ ಮಾಸಾಶನ ಸೌಲಭ್ಯ ಪಡೆದುಕೊಳ್ಳಲು ಆ ಮಧ್ಯವರ್ತಿಗೆ ರು. 4 ಸಾವಿರ ಹೊಂದಿಸಿ ಕೊಟ್ಟಿದ್ದಾನೆ. ಮಾಸಾಶನ ಬಂದರೆ ತನ್ನ ಸಂಕಷ್ಟ ಸ್ವಲ್ಪ ಮಟ್ಟಿಗೆ ತಗ್ಗಬಹುದು ಎಂಬುದು ಆತನ ಮಹದಾಸೆ.
ಕಚೇರಿಗೆ ಸುತ್ತಿ ಸುಸ್ತಾದ: ಅಂಗವಿಕಲ ಮಾಸಾಶನಕ್ಕಾಗಿ ಸಂಬಂಧಿಸಿದ ಕಚೇರಿಗಳನ್ನೆಲ್ಲಾ ಸುತ್ತಾಡಿ ಸುಸ್ತಾಗಿರುವ ಈತನಿಗೆ ಮಾಸಾಶನ ಎಂಬುದು ಕನಸಾಗಿಯೇ ಉಳಿದಿದೆ. ಮಾಸಾಶನ ಪಡೆಯಲು ಆತನು ಸುತ್ತಿದ ರೀತಿಯನ್ನು ಕಂಡರೆ ಎಂಥವರಿಗೂ ಅಯ್ಯೋ ಎನಿಸುತ್ತದೆ.
ಮೊದಲೇ ಅಂಗವಿಕಲ ಅದರಲ್ಲೂ ಕೂಲಿ ಕೆಲ ಮಾಡಿ ಜೀವನ ಸಾಗಿಸುತ್ತಿರುವ ಬಡ ಜೀವಿ. ಆದರೆ ಭ್ರಷ್ಟ ವ್ಯವಸ್ಥೆಯಲ್ಲಿ ಬದುಕು ನಿರ್ವಹಿಸುತ್ತಿರುವ ಆತನಿಗೆ ಸರ್ಕಾರಿ ಕಚೇರಿ, ಅಧಿಕಾರಿಗಳ ಭ್ರಷ್ಟನೀತಿ ಮಾತ್ರ ಅರ್ಥವಾಗಿಲ್ಲ.
ಸಣ್ಣಕೊಟ್ರಗೌಡ ಓರ್ವ ಅಮಾಯಕ, ದೈಹಿಕ ನ್ಯೂನತೆ ಇರುವ ಯುವಕ. ಮಾಸಾಶನಕ್ಕಾಗಿ ಮಧ್ಯವರ್ತಿಗಳ ಇಕ್ಕಳದಲ್ಲಿ ಸಿಕ್ಕು ಜೇಬಿನಲ್ಲಿರುವ ಅಷ್ಟು ಹಣವನ್ನು ಕಳೆದುಕೊಂಡಿದ್ದಾನೆ. ಇದನ್ನೆಲ್ಲಾ ನೋಡಿದರೆ ಬಲ್ಲಾಹುಣ್ಸಿಯ ಸಣ್ಣಕೊಟ್ರಗೌಡನದು ಒಂದು ರೀತಿ ಪಿಂಚಣಿ ಹಣಕ್ಕಾಗಿ ಆಫೀಸ್‌ನಿಂದ ಆಫೀಸ್‌ಗೆ ಸುತ್ತಾಡಿದ ತಬರನ ಕಥೆಯಂತಾಗಿದೆ. ಈತನ ಸಮಸ್ಯೆಗೆ ದಕ್ಷ ಜಿಲ್ಲಾಧಿಕಾರಿಯಾದ ಬಿಸ್ವಾಸ್ ಪರಿಹಾರ ನೀಡುವರೆ? ಎಂದು ಕಾದು ನೋಡಬೇಕು.
ಹದಿನೈದು ನೂರು ರುಪಾಯಿ ಕೊಟ್ಟೆ...
ನಾನೇ ಸ್ವತಃ ಮಾಸಾಶನ ಪತ್ರ ಮಾಡಿಸಿಕೊಳ್ಳಬೇಕೆಂದು ನಿರ್ಧರಿಸಿ, ತಾಲೂಕು ಕಚೇರಿಗೆ ಹೋದೆ. ಆದರೆ ಅಲ್ಲಿನವರು ಜಿಲ್ಲಾಧಿಕಾರಿ ಕಚೇರಿಗೆ ಹೋದ್ರೆ ನಿನ್ನ ಕೆಲ್ಸ ಬೇಗ ಆಗತೈತೆ ಅಂದ್ರು, ಬಸ್‌ಚಾರ್ಜ್ ಜೋಡಿಸಿಕೊಂಡು ಬಳ್ಳಾರಿಗೆ ಹೋದೆ. ಅಲ್ಲಿ ನನ್ನನ್ನು ಯಾರೂ ಕ್ಯಾರೆ ಎನ್ನಲಿಲ್ಲ. ಅಲ್ಲಿ ಅಲೆದಾಡಿ ಜೇಬಿನಲ್ಲಿರುವ ಹಣ ಖರ್ಚು ಮಾಡಿಕೊಂಡು ಕೆಲಸವಾಗದೇ ಮನೆಗೆ ವಾಪಾಸ್ ಬಂದೆ. ಗ್ರಾಮ ಲೆಕ್ಕಾಧಿಕಾರಿ ಹಿಂದಿರುವ ತಳವಾರನೊಬ್ಬನನ್ನು ಹಿಡಿದುಕೊಂಡ್ರೆ ನಿನ್ನ ಕೆಲ್ಸ್ ಆಗತೈತೆ ಅಂದ್ರು. ಅದನ್ನು ನಂಬಿ ಆತನಿಗೆ ಲಂಚ ಕೊಟ್ಟೆ, ಅದ್ರೂ ನನ್ನ ಕೆಲ್ಸ ಆಗಲಿಲ್ಲ. ಕೊನೆಗೆ ಹದಿನೈದು ನೂರು ರುಪಾಯಿ ಕೊಟ್ಟರೆ ನಿನ್ನ ಕೆಲ್ಸ್ ಗ್ಯಾರಂಟಿ ಅಂದ್ರು, ಆಗ ದುಡಿದು ಕೂಡಿಟ್ಟ ಹಣದಲ್ಲಿ ಮಧ್ಯವರ್ತಿ ಕೈಗೆ ಅಷ್ಟೂ ಹಣವನ್ನು ಕೊಟ್ಟೆ, ಅಂಗವಿಕಲ ಮಾಸಾಶನ ಮಂಜೂರಾತಿ ಆಗುತ್ತೋ ಇಲ್ಲವೊ ಗೊತ್ತಿಲ್ಲ.
- ಸಣ್ಣಕೊಟ್ರಗೌಡ, ಅಂಗವಿಕಲ

-ಹುಳ್ಳಿ ಪ್ರಕಾಶ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement