ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಸುಗಮವಾಗಿ ಶೈಕ್ಷಣಿಕ ಸಾಲ ನೀಡಲು ಆಗ್ರಹ

Vishwanath S
Updated On : 14 Jul 2013, 12:12 pm

ಕನ್ನಡಪ್ರಭ ವಾರ್ತೆ, ಹೊಸಪೇಟೆ, ಜು. 13
ಸಿಇಟಿ ಮೂಲಕ ಆಯ್ಕೆಯಾದ ಅರ್ಹ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬ್ಯಾಂಕ್‌ಗಳಲ್ಲಿ ಸುಗಮವಾಗಿ ಶೈಕ್ಷಣಿಕ ಸಾಲ ಸೌಲಭ್ಯ ಒದಗಿಸಬೇಂದು ಒತ್ತಾಯಿಸಿ ಜಿಲ್ಲಾ ಹಿಂದುಳಿದ ವರ್ಗಗಳ ಒಕ್ಕೂಟದ ಪದಾಧಿಕಾರಿಗಳು ನಗರದಲ್ಲಿ ಪ್ರತಿಭಟನೆ ನಡೆಸಿ ತಹಸೀಲ್ದಾರ್‌ಗೆ ಮನವಿಪತ್ರ ಸಲ್ಲಿಸಿದರು.
ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಜಿಲ್ಲಾ ಹಿಂದುಳಿದ ವರ್ಗಗಳ ಒಕ್ಕೂಟದ ಜಿಲ್ಲಾಧ್ಯಕ್ಷ ವೈ. ಯಮುನೇಶ್, ರಾಜ್ಯದಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಸಿಇಟಿ ಮೂಲಕ ಅಭ್ಯರ್ಥಿಗಳು ಗಳಿಸಿದ ರ್ಯಾಂಕ್ ಆಧಾರದ ಮೇಲೆ ಎಂಜಿನಿಯರಿಂಗ್, ಮೆಡಿಕಲ್, ಡೆಂಟಲ್ ಕಾಲೇಜುಗಳಿಗೆ ಆಯ್ಕೆ ಪ್ರಕ್ರಿಯೆ ನಡೆದಿದೆ. ಕೌನ್ಸೆಲಿಂಗ್ ಮೂಲಕ ಆಯ್ಕೆಯಾದ ಬಡ ಮತ್ತು ಮಧ್ಯಮ ವರ್ಗದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಮುಂದುವರಿಕೆಗೆ ಸಾಲ ಸೌಲಭ್ಯದ ಅಗತ್ಯವಿದೆ. ಆದರೆ ನಗರದ ಕೆಲ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಲ್ಲದ ನೆಪವೊಡ್ಡಿ ಸಾಲ ನೀಡಲು ನಿರಾಕರಿಸುತ್ತಿದ್ದಾರೆ. ಇದು ಸಾಮಾಜಿಕ ನ್ಯಾಯಕ್ಕೆ ವಿರೋಧವಾಗಿದೆ ಎಂದು ಆರೋಪಿಸಿದರು.
ಕ್ರಮ ಕೈಗೊಳ್ಳಿ: ರಾಷ್ಟ್ರೀಕೃತ ಮತ್ತು ಶೆಡ್ಯೂಲ್ಡ್ ಬ್ಯಾಂಕ್ ಅಧಿಕಾರಿಗಳು ಕೇಂದ್ರ ಸರ್ಕಾರದ ಆದೇಶ ಮತ್ತು ನಿಯಮನುಸಾರ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಲ ಸಿಗುವಂತೆ ಕ್ರಮ ಕೈಗೊಳ್ಳಬೇಕು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಾಲ ಯೋಜನೆಯ ನಿಯಮಗಳ ಪ್ರಕಾರ ರು. 4 ಲಕ್ಷವರೆಗೆ ಸಾಲ ನೀಡಬಹುದಾಗಿದೆ. ವಿದ್ಯಾರ್ಥಿಯ ಜತೆಗೆ ಪೋಷಕರು ಸಹ ಸಾಲಗಾರರಾದರೆ ಸಾಕು. 3ನೇ ವ್ಯಕ್ತಿ ಜಾಮೀನು ನೀಡುವ ಅಗತ್ಯವಿಲ್ಲ. ಸಾಲ ಪಡೆಯಲು ಯಾವುದೇ ಆಸ್ತಿ ಭದ್ರತೆ ಇಡುವ ಅಗತ್ಯವಿಲ್ಲ. ಮಾರ್ಜಿನ್ ಹಣ, ಸೇವಾ ಶುಲ್ಕವನ್ನು ನೀಡಬೇಕಿಲ್ಲ ಎಂದು ವಿವಿರಿಸಿದರು.
ಶಿಕ್ಷಣ ಅರ್ಧಕ್ಕೆ ನಿಲ್ಲಿಸಿದ್ದಾರೆ: ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಸಾಲ ಯೋಜನೆ ನಿಯಮಗಳಿಗೆ ವ್ಯತಿರಿಕ್ತವಾಗಿ ಅರ್ಹ ವಿದ್ಯಾರ್ಥಿಗಳಿಗೆ ಸಾಲ-ಸೌಲಭ್ಯ ನಿರಾಕರಿಸಲಾಗುತ್ತಿದೆ. ವಿದ್ಯಾರ್ಥಿ-ಪೋಷಕರ ಆಸ್ತಿಯ ದಾಖಲಾತಿಗಳನ್ನು ತರುವಂತೆ ಒತ್ತಾಯಿಸಲಾಗುತ್ತಿದೆ. ಮೂರನೇ ವ್ಯಕ್ತಿಯ ಜಾಮೀನು ಬೇಕೆಂದು ಹೇಳುತ್ತಿದ್ದಾರೆ. ಹೀಗೆ ಅನಗತ್ಯ ನಿರ್ಬಂಧಗಳಿಂದ ಸಾಲ-ಸೌಲಭ್ಯದಿಂದ ಬಡ ವಿದ್ಯಾರ್ಥಿಗಳು ವಂಚಿತರಾಗುತ್ತಿದ್ದಾರೆ. ಶೈಕ್ಷಣಿಕ ಸಾಲ ಯೋಜನೆ ನಿಯಮಗಳಿಗೆ ವ್ಯತಿರಿಕ್ತವಾದ ಬ್ಯಾಂಕಿನ ಅಧಿಕಾರಿಗಳ ವರ್ತನೆಯಿಂದಾಗಿ ಎಷ್ಟೋ ಪ್ರತಿಭಾವಂತ ವಿದ್ಯಾರ್ಥಿಗಳು ತಮ್ಮ ಶಿಕ್ಷಣ ಅರ್ಧಕ್ಕೆ ನಿಲ್ಲಿಸುಂತಾಗಿದೆ ಎಂದು ಅವರು ಬ್ಯಾಂಕ್ ಅಧಿಕಾರಿಗಳ ವಿರುದ್ಧ ಕಿಡಿ ಕಾರಿದರು.
ಒಕ್ಕೂಟದ ಜಿಲ್ಲಾ ಉಪಾಧ್ಯಕ್ಷ ಬಸವರಾಜ್ ನಲತ್ವಾಡ, ಪ್ರಧಾನ ಕಾರ್ಯದರ್ಶಿ ಯು. ನೀಲಕಂಠ, ಒಕ್ಕೂಟದ ಪದಾಧಿಕಾರಿಗಳಾದ ಗೌಳಿ ಕುಮಾರ್, ಬಿಸಾಟಿ ಗುರುಮೂರ್ತಿ, ಯು. ಅಶ್ವಥಪ್ಪ, ಯು. ವೆಂಕಟೇಶ, ಮೈಲಾರಪ್ಪ, ಫಣಿ ಜೈನ್, ಡಿ. ಕುಬೇರಪ್ಪ, ರವಿಶಂಕರ್, ಪ್ರಕಾಶ ಕಾಕುಬಾಳು, ಶಂಕರಾಚಾರ್ಯ, ಅಗಳಿ ಭಾಸ್ಕರ್, ಟಾಪ್ಸೆ ವಿಠ್ಠಲರಾವ್, ಶೈಲಜಾ, ಗೀತಾ, ಎಂ. ಜಂಬಯ್ಯ, ಜೆ. ವೆಂಕಟೇಶ್, ಅಯ್ಯಪ್ಪ ಸೇರಿದಂತೆ ಇತರರು ಪ್ರತಿಭಟನೆಯಲ್ಲಿದ್ದರು.
ಪ್ರತಿಭಟನಾ ರ್ಯಾರಿಯು ನಗರದ ಗಂಗಾ ಪರಮೇಶ್ವರಿ ಸಮುದಾಯ ಭವನದಿಂದ ಆರಂಭಗೊಂಡು ಹಳೆ ಬಸ್ ನಿಲ್ದಾಣ, ನಗರಸಭೆ ಕಚೇರಿ ಮೂಲಕ ಹಾದು ತಹಸೀಲ್ದಾರ್ ಕಚೇರಿ ತಲುಪಿತು. ನಂತರ ತಹಸೀಲ್ದಾರ್‌ಗೆ ಮನವಿಪತ್ರ ಸಲ್ಲಿಸಿ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement