ಅಂಕಕ್ಕಿಂತ ಅರಿವು ಪ್ರಧಾನವಾಗಲಿ
ಕನ್ನಡಪ್ರಭ ವಾರ್ತೆ, ಕುರುಗೋಡು, ಜು. 14
ಅಂಕ ಪ್ರಧಾನವಾದ ವಿದ್ಯೆಗಿಂತ ಅರಿವು ಪ್ರಧಾನ ವಿದ್ಯೆ ಮನುಷ್ಯನ ಜೀವನಕ್ಕೆ ಅಗತ್ಯ ಎಂದು ಡಾ. ಪಂಡಿತಾರಾಧ್ಯ ಅರಳಲಿಮಠ ತಿಳಿಸಿದರು.
ಪಟ್ಟಣದ ಮಾನವ ಧರ್ಮ ಮಕ್ಕಳ ಮಂಟಪದಲ್ಲಿ ಶನಿವಾರ ನಡೆದ 192ನೇ ಮಾಸಿಕ ಜ್ಞಾನವಾಹಿನಿ ಕಾರ್ಯಕ್ರಮದಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ನಂತರ ಮಾತನಾಡಿದರು.
ವಿದ್ಯೆ ಕೇವಲ ಅಕ್ಷರ ಜ್ಞಾನಕ್ಕೆ ಮಾತ್ರ ಸೀಮಿತವಾಗಬಾರದು ಅದು ಜ್ಞಾನದ ಅಭಿವೃದ್ಧಿಗೆ ಪೂರಕವಾಗಿರಬೇಕು. ಇಂದಿನ ಯುಗದಲ್ಲಿ ಅಂಕ ಕೇವಲ ಕೆಲಸ ಪಡೆಯಲು ಸಹಕಾರಿ ಆದರೆ ಜೀವನ ನಡೆಸಲು ಅರಿವಿನ ಶಿಕ್ಷಣ ಮುಖ್ಯ ಎಂದ ಹೇಳಿದರು.
ಇತಿಹಾಸ ಸಂಶೋಧಕ ನಾಡಗೌಡರ ತಿಪ್ಪೇರುದ್ರಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಅತಿ ಹೆಚ್ಚು ಅಂಕ ಪಡೆದ ಪ್ರಾಥಮಿಕ ಶಾಲೆಯ ರಮೇಶ್, ಲಾವಣ್ಯ, ಜಯಶ್ರಿ, ಅಫ್ರಿನ್, ಓಬಳೇಶ್, ಪ್ರೌಢಶಾಲೆಯ ಶಿವಕುಮಾರ್, ಮೇಟಿ ಶಿವಶಂಕರ್, ಪವನ್, ಉಮಾದೇವಿ ಮಲ್ಲಿಕಾರ್ಜುನ, ಸಹನಾ ಹಾಗೂ ಆದರ್ಶ ವಿದ್ಯಾರ್ಥಿ ಶೃತಿ, ಅಕ್ಷಯ್ ಹಾಗೂ ಕರಡಿ ಬಸವ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಶಿಕ್ಷಣ ಸಂಯೋಜಕ ಕೆ. ಗಾದಿಲಿಂಗಪ್ಪ, ಶಾರದ ಚೆನ್ನಳ್ಳಿ, ಮುಖ್ಯ ಶಿಕ್ಷಕ ಎಚ್.ಎಂ. ತಿಪ್ಪೇಸ್ವಾಮಿ, ಬಳ್ಳಾರಿ ಮಹಾನಗರ ಪಾಲಿಕೆ ಸಿಬ್ಬಂದಿ ಶಾರದಮ್ಮ, ಗ್ರಾಮಲೆಕ್ಕಿಗ ಎಸ್. ನಾಗರಾಜ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಶಿಕ್ಷಕಿ ಶಾಂತ, ವ್ಯವಸ್ಥಾಪಕರಾದ ನಾಡಗೌಡರ ಮರೇಗೌಡ, ಮಂಜುಳ ವಂದಿಸಿದರು. ಜೆ. ಬಸವನಗೌಡ ಕಾರ್ಯಕ್ರಮ ನಿರ್ವಹಿಸಿದರು. ಈ ಸಂದರ್ಭದಲ್ಲಿ ಎಲ್ಲ ಶಾಲೆ ವಿದ್ಯಾರ್ಥಿ, ಪಾಲಕರು ಎಸ್ಡಿಎಂಸಿ ಸದಸ್ಯರು, ಶಿಕ್ಷಕರು ಭಾಗವಹಿಸಿದ್ದರು.