ಜಿಲ್ಲೆಯೊಂದರಲ್ಲೇ ಹಾವು ಕಚ್ಚಿ 213 ಸಾವು
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಜು. 14
ದುರಂತ, ಅಪಘಾತ, ಪ್ರಕೃತಿ ವಿಕೋಪದಂತಹ ಹಲವು ಅವಘಡಗಳಿಂದ ಜರು ಸಾವನ್ನಪ್ಪುತ್ತಾರೆ. ಅದರಂತೆ ಜಿಲ್ಲೆಯಲ್ಲಿ ಹಾವು ಕಚ್ಚಿ ಬರೋಬ್ಬರಿ 213 ಜನರ ಮೂರುವರೆ ವರ್ಷದಲ್ಲಿ ಮೃತಪಟ್ಟಿದ್ದಾರೆ. ಸಾವನ್ನಪ್ಪಿರುವ ಪೈಕಿ ಹಲವರು ವಿಷಪೂರಿತ ಹಾವುಗಳು ಕಚ್ಚಿದ್ದರಿಂದ. ಅದರಲ್ಲೂ ಹುತೇಕ ರೈತರೆ ಮೃತರಾಗಿದ್ದಾರೆ. ಸಧ್ಯ ಮುಂಗಾರು ಮುಂದುವರೆದಿದ್ದು, ರೈತರು ತಮ್ಮ ಹೊಲದಲ್ಲಿ ಕೃಷಿ ಚಟುವಟಿಕೆ ಆರಂಭಿಸುವುದರಿಂದ, ಈ ಬಗ್ಗೆ ಕೊಂಚ ಎಚ್ಚರಿಕೆ ಇರಲೇಬೆಕು.
ಮಳೆ ಆರಂಭವಾಗಿರುವುದರಿಂದ ರೈತರು ಹೊತ್ತು ಗೊತ್ತು ಇಲ್ಲದೆ ಜಮೀನುಗಳಲ್ಲಿ ಕೆಲಸ ಮಾಡುತ್ತಿರುತ್ತಾರೆ, ಇಂತಹ ಸಂದರ್ಭದಲ್ಲಿ ಹಾವುಗಳ ಕಾಟವು ಹೆಚ್ಚಿರುತ್ತದೆ. ರೈತರು ಹಾವುಗಳ ಕಡಿತದಿಂದ ಎಚ್ಚರಿಕೆ ವಹಿಸಬೇಕಿರುವುದು ಅಗತ್ಯ. ರೈತರು ರಾತ್ರಿ ಹೊತ್ತಲ್ಲಿ ಬೆಳೆಗೆ ನೀರು ಹರಿಸುವಾಗ ಹಾವು ತುಳಿದ ಪರಿಣಾಮ ಹಾವು ಕಚ್ಚುವುದರಿಂದ ಕೆಲ ಸಂದರ್ಭದಲ್ಲಿ ಎಚ್ಚೆತ್ತು ಸೂಕ್ತ ಚಿಕಿತ್ಸೆಗೆ ಮುಂದಾಗದೆ, ನಿರ್ಲಕ್ಷ್ಯ ವಹಿಸುವ ಮೂಲಕ ಅಥವಾ ನಾಟಿ ಔಷಧಕ್ಕೆ ಮೊರೆ ಹೋಗಿ, ಸಾವು ತಂದುಕೊಳ್ಳುತ್ತಾರೆ. ಇಂತಹ ಅವಘಡಗಳ ಪೂರ್ವದಲ್ಲಿ ಎಚ್ಚರಿಕೆ ವಹಿಸಿದರೆ ಸಾವನ್ನು ತಪ್ಪಿಸಬಹುದು.
ಈ ಭಾಗದಲ್ಲಿರುವ ಹಾವುಗಳು: ಬಳ್ಳಾರಿ ಜಿಲ್ಲೆ ಮಟ್ಟಿಗೆ ಹೇಳುವುದಾದರೆ ನಾಗರ ಹಾವು, ಕೆರೆ ಹಾವು, ಮಂಡಲ ಹಾವು, ಕಂಕಣ ಹಾವು, ಕೆಟ್ಟಹುಳ, ಹಸಿರು ಹಾವು, ನೀರು ಹಾವು ಎಂಬ ವಿವಿಧ ಜಾತಿಯ ಹಾವುಗಳಿವೆ. ಇದರಲ್ಲಿ ನಾಗರ ಹಾವು, ಕಂಕಣ ಹಾವು, ಮಂಡಲ ಹಾವು ಕಡಿದಾಗ ಮಾತ್ರ ಸಾಯುವ ಸಾಧ್ಯತೆ ಇರುತ್ತದೆ. ಇಂತಹ ಹಾವುಗಳ ಕಡಿದಾಗ ನಿರ್ಲಕ್ಷ್ಯ ವಹಿಸಿದರೆ ಮಾತ್ರ ಸಾಯುವ ಸಾಧ್ಯತೆ ಹೆಚ್ಚಾಗಿರುತ್ತದೆ. ಇನ್ನು ಕೆರೆ ಹಾವು, ಕೆಟ್ಟ ಹುಳ, ನೀರಾವು ಕಚ್ಚಿದರೆ ಸಾಯುವ ಸಾಧ್ಯತೆಗಳು ಇಲ್ಲ. ಆದರೂ ವೈದ್ಯರನ್ನು ಸಂಪರ್ಕಿಸುವುದು ಉತ್ತಮ. ಇನ್ನು ಜನರಲ್ಲಿ ಹಾವು ಕಡಿದಾಕ್ಷಣ ಇನ್ನೇನು ಸಾವೇ ಗತಿ ಎಂಬ ಮನೋಭಾವನೆಯೇ ಕೆಲವೊಮ್ಮೆ ಹಾವು ಕಚ್ಚಿದ ವ್ಯಕ್ತಿಗೆ ಹೃದಯಾಘಾತವಾಗಿ ಸಾವಿನ ದವೆಡೆಗೆ ತಳ್ಳುವಂತೆ ಮಾಡುತ್ತದೆ.
ಹಾವು ಕಚ್ಚಿದಾಗ ಮುಂಜಾಗ್ರತೆ: ಹಾವು ಕಚ್ಚಿದಾಕ್ಷಣ ಆ ವ್ಯಕ್ತಿ ಓಡಾಡುವುದನ್ನು ನಿಲ್ಲಿಸಬೇಕು. ಅವನನ್ನು ಯಾರಾದರು ಎತ್ತಿಕೊಂಡು ಹೋಗಬೇಕಾಗುತ್ತದೆ. ಗಿಡ ಇಂಡಿಸುವಿಕೆ ಮತ್ತಿತರ ಕೆಲಸಕ್ಕೆ ಮುಂದಾಗಬಾರದು. ಹಾವು ಕಚ್ಚಿದ ತಕ್ಷಣ ಹಾವು ಕಚ್ಚಿದ ಜಾಗದಿಂದ ಮೇಲುಗಡೆ ರಕ್ತ ಸಂಚಲನ ಆಗದಂತೆ ತೆಳುವಾದ ಬಟ್ಟೆ ಅಥವಾ ದಾರ ಕಟ್ಟಬೇಕು. ಕೂಡಲೇ ಹತ್ತಿರದ ಆಸ್ಪೆತ್ರೆಗೆ ಹೋದರೆ ಅಲ್ಲಿ ಆಂಟಿ ಸ್ನೇಕ್ ವೇನಮ್ ಚಿಕಿತ್ಸೆ ಪಡೆಯಬೇಕು. ಯಾವ ಹಾವು ಕಚ್ಚಿದೆ ಎಂಬ ಮಾಹಿತಿ ವೈದ್ಯರಿಗೆ ಹೇಳಿದರೆ ಉತ್ತಮ. ಹಾವು ಕಚ್ಚಿದಾಕ್ಷಣ ಸಾಯುವುದಿಲ್ಲ, ನಾಗರ ಹಾವು ಕಡಿದಾಗ ಅರ್ಧ ಗಂಟೆಯಿಂದ ಒಂದು ಗಂಟೆಯವರೆಗೆ ಆಂಟಿ ಸ್ನೇಕ್ ವೆನಮ್, ಆಕ್ಸಿಜನ್ ವ್ಯವಸ್ಥೆ ಮಾಡಿದರೆ, ಸಾವಿನ ದವಡೆಯಿಂದ ಪಾರಾಗಬಹುದು.
ಎಚ್ಚರಿಕೆ ಅಗತ್ಯ: ನಾಗರ ಹಾವು ಕಚ್ಚಿದಾಗ ಅತ್ಯಂತ ಹೆಚ್ಚಿನ ಜಾಗೃತಿವಹಿಸಬೇಕು, ನಾಗರ ಹಾವಿನಲ್ಲಿ ನ್ಯೂರೋ ಟಾಕ್ಸಿನ್ ಎಂಬ ವಿಷದ ಅಂಶದ ಹೆಚ್ಚಾಗಿರುತ್ತದೆ. ನಾಗರ ಹಾವು ಕಚ್ಚಿದಾಗ ವಿಷದ ಅಂಶ ರಕ್ತದಲ್ಲಿ ಹರಡಿ ಕ್ರಮೇಣ ರಕ್ತ ಹೆಪ್ಪುಗಟ್ಟುವಂತೆ ಮಾಡುತ್ತದೆ. ಮುಂದುವರೆದು ಮೆದುಳಿಗೆ ಹೋಗಿ ಮೊದಲು ಉಸಿರಾಟ ನಿಲ್ಲಿಸುವಂತೆ ಮಾಡುತ್ತದೆ. ತಕ್ಷಣ ಹೃದಯ ಬಡಿತ ನಿಂತು ಕಚ್ಚಿಸಿಕೊಂಡವ ಸಾವನ್ನಪ್ಪುತ್ತಾನೆ.
ನಾಗರ ಹಾವು ಕಡಿದಾಗ ಹಾವು ಕಡಿದ ಸ್ಥಳದಲ್ಲಿ ನೋವು ಇರುತ್ತದೆ. ಕಣ್ಣು ರೆಪ್ಪೆಗಳು ಕೆಳಗೆ ಬೀಳುತ್ತವೆ, ಮಾತು ತೊದಲುತ್ತವೆ. ನಂತರ ಉಸಿರಾಟದ ತೊಂದರೆಯ ಅನುಭವ ಆಗುತ್ತದೆ. ಇನ್ನು ಮಂಡಲ ಹಾವು ಕಚ್ಚಿದಾಗ, ಕಚ್ಚಿದ ಸ್ಥಳದಲ್ಲಿ ರಕ್ತಸ್ರಾವ ಆಗುತ್ತದೆ. ಈ ಹಾವು ಕಚ್ಚಿದಾಗ ಸಾವನ್ನಪ್ಪುವ ಸಾಧ್ಯತೆಗಳು ಕಡಿಮೆ. ಈ ಹಾವು ಕಚ್ಚಿದ 2-3 ದಿನಗಳಲ್ಲಿ ಸಾವನ್ನಪ್ಪುತ್ತಾನೆ ಎನ್ನುತ್ತಾರೆ ತಜ್ಞರು. ಹಾವುಗಳ ವಿಷದಲ್ಲಿ ನ್ಯೂರೋ ಟಾಕ್ಸಿನ್ ಹಾಗೂ ಹಿಮೋ ಟಾಕ್ಸಿನ್ ವಿಷ ಇರುತ್ತದೆ. ನಾಗರಹಾವಿನಲ್ಲಿ ನ್ಯೂರೋ ಟಾಕ್ಸಿನ್ ಅಂಶ ಇರುತ್ತದೆ. ಕಂಕಣ ಹಾವಿನಲ್ಲಿ ನ್ಯೂರೋ ಟಾಕ್ಸಿನ್, ಹಿಮೋ ಟಾಕ್ಸಿನ್ ಎರಡು ಇರುತ್ತದೆ.
ಮೂರುವರೆ ವರ್ಷದಲ್ಲಿ 213 ಸಾವು: ಬಳ್ಳಾರಿ ಜಿಲ್ಲೆಯಲ್ಲಿ 2010ರಿಂದ 2013 ಮೇ ತಿಂಗಳ ಅಂತ್ಯದವರೆಗೆ ಮೂರುವರೆ ವರ್ಷದ ಅವಧಿಯಲ್ಲಿ ಹಾವು ಕಚ್ಚಿ 213 ಜನರು ಮೃತಪಟ್ಟಿದ್ದಾರೆ. ಅದರಲ್ಲಿ 133 ಪುರುಷರು ಹಾಗೂ 81 ಮಹಿಳೆಯರು ಇದ್ದಾರೆ. 2010ರಲ್ಲಿ 87, 2011ರಲ್ಲಿ 65, 2012ರಲ್ಲಿ 53, 2013ರ ಮೇ ಅಂತ್ಯದವರೆಗೆ 8 ಜನರು ಹಾವು ಕಡಿದು ಸಾವನ್ನಪ್ಪಿದ್ದಾರೆ. ಸಾವನ್ನಪ್ಪಿರುವವರಲ್ಲಿ ಬಹುತೇಕರು ರೈತರಾಗಿದ್ದಾರೆ. ಹಾವು ಕಚ್ಚಿರುವ ಬಗ್ಗೆ ನಿರ್ಲಕ್ಷ್ಯದಿಂದ ಗಿಡ ಇಂಡಿಸುವುದು ಇನ್ನಿತರ ಪದ್ಧತಿಗಳ ಮೊರೆ ಹೋಗಿಯೇ ಪ್ರಾಣ ಬಿಟ್ಟಿದ್ದಾರೆ. ಹಾವು ಕಚ್ಚಿದಾಗ ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೋಗಿ ಆಂಟಿ ಸ್ನೇಕ್ ವೇನಮ್ ಹಾಕಿಸಿಕೊಂಡರೆ ಉತ್ತಮ, ಇದರಿಂದ ಪ್ರಾಣಾಯದಿಂದ ಪಾರಾಗಬಹುದು. ಈ ಹಿನ್ನೆಲೆಯಲ್ಲಿ ಪ್ರತಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆಂಟಿ ಸ್ನೇಕ್ ವೇನಮ್ ವ್ಯವಸ್ಥೆ ಅನಿವಾರ್ಯ.
ಎಚ್ಚರಿಕೆ ಅಗತ್ಯ...
ಎಲ್ಲಾ ಹಾವುಗಳು ಕಚ್ಚಿದರೆ ಮನುಷ್ಯ ಸಾಯುವುದಿಲ್ಲ, ನಾಗರ ಹಾವು, ಮಂಡಲ, ಕಂಕಣ ಹಾವು ಕಚ್ಚಿದಾಗ ಮಾತ್ರ ಮೃತಪಡುವ ಸಾಧ್ಯತೆ ಹೆಚ್ಚು. ಹಾವು ಕಚ್ಚಿದಾಕ್ಷಣ ನಾಟಿ ಔಷಧ ಎಂದು ಗಿಡ ಹಿಂಡಿಸುವುದು ಇತರ ವ್ಯವಸ್ಥೆಗೆ ಮೊರೆ ಹೋಗದೆ, ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆಂಟಿ ಸ್ನೇಕ್ ವೇನಮ್ ಮೊರೆ ಹೋಗಬೇಕು. ಕಡಿದಾಕ್ಷಣ ಎಚ್ಚರಿಕೆ ವಹಿಸಿ ಆಸ್ಪತ್ರೆಗೆ ಬರಬೇಕಾಗುತ್ತದೆ. ಹಾವು ಕಚ್ಚಿದ ಸ್ಥಳದ ಮೇಲ್ಭಾಗದಲ್ಲಿ ತೆಳುವಾದ ಬಟ್ಟೆಯನ್ನು ಕಟ್ಟಬೇಕು. ಶೀಘ್ರದಲ್ಲೇ ಎಚ್ಚೆತ್ತುಕೊಂಡು ಚಿಕಿತ್ಸೆ ಪಡೆದರೆ ಶೇ. 99ರಷ್ಚು ಜನರು ಹಾವು ಕಚ್ಚಿದವರು ಸಾವನ್ನಪ್ಪುವುದಿಲ್ಲ, ಆದರೆ ನಿರ್ಲಕ್ಷ್ಯ ತೋರಬಾರದು.
- ಡಾ. ವಿಶ್ವನಾಥ, ನರ ಮತ್ತು ಮೆದುಳು ರೋಗ ತಜ್ಞ.
- ಶಶಿಧರ ಮೇಟಿ