ಶಾಲಾ ಸಮೀಪದ ಮದ್ಯದಂಗಡಿ ತೆರವು
ಹೊಸಪೇಟೆ: ಶಾಲಾ-ಕಾಲೇಜುಗಳ ಸಮೀಪದಲ್ಲಿರುವ ಮದ್ಯದಂಗಡಿಗಳ ಕುರಿತು ಸಾರ್ವಜನಿಕರಿಂದ ದೂರು ಬಂದಲ್ಲಿ ತಕ್ಷಣವೇ ಅಂಥ ಮದ್ಯದಂಗಡಿಗಳನ್ನು ತೆರೆವುಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಅಬಕಾರಿ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸಾರ್ವಜನಿಕರಿಂದ ಮತ್ತು ವಿದ್ಯಾರ್ಥಿಗಳು ಯಾವ ಪ್ರದೇಶದ ಮದ್ಯದ ಅಂಗಡಿ ಮೇಲೆ ದೂರು ನೀಡಿದ್ದಾರೆ ಎಂಬುದನ್ನು ನೋಡಿಕೊಂಡು ಮದ್ಯದ ಅಂಗಡಿಯನ್ನು ತೆರವುಗೊಳಿಸಲಾಗುವುದು ಎಂದರು. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾದ ತಕ್ಷಣವೇ ರಾಜ್ಯದಲ್ಲಿ ಅಗ್ಗದ ಮದ್ಯವನ್ನು ಜಾರಿಗೆ ತರಲಾಗುವುದು ಎಂದು ಎಲ್ಲೂ ಹೇಳಿಲ್ಲ. ಅಗ್ಗದ ಮದ್ಯವನ್ನು ಮಾರುಕಟ್ಟೆಗೆ ತರುವ ಯಾವುದೇ ಉದ್ದೇಶ ಸರ್ಕಾರದ ಮುಂದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಸರ್ಕಾರದ ಒಡೆತನದ ಎಂಎಸ್ಐಎಲ್ ಮದ್ಯದ ಅಂಗಡಿಗಳಲ್ಲಿ ಬಾಕ್ಸ್ಗಟ್ಟಲೆ ಮದ್ಯ ತೆಗೆದುಕೊಂಡು ಹೋಗಿ ಕೆಲವರು ತಮ್ಮ ಗ್ರಾಮಗಳಲ್ಲಿ ಅಕ್ರಮವಾಗಿ ಮಾರುತ್ತಿರುವ ಬಗ್ಗೆ ರಾಜ್ಯಾದ್ಯಂತ ದೂರುಗಳು ಕೇಳಿ ಬರುತ್ತಿವೆ. ಈ ಕುರಿತು ಗಂಭೀರವಾಗಿ ಪರಿಣಿಸಿ ಅಕ್ರಮ ಮದ್ಯ ಮಾರಾಟವನ್ನು ತಡೆಗಟ್ಟಲಾಗುವುದು. ಅಕ್ರಮ ಮದ್ಯ ಮಾರುವ ವ್ಯಕ್ತಿಗಳ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.