ಆರೋಪ, ಪ್ರತ್ಯಾರೋಪದಲ್ಲೇ ಮುಗಿದ ಸಭೆ
ಕನ್ನಡಪ್ರಭ ವಾರ್ತೆ, ಕೂಡ್ಲಿಗಿ, ಜು. 15
ಕೂಡ್ಲಿಗಿ ತಾಪಂ ವರ್ಷದಿಂದ ಸದಾ ಸುದ್ದಿಯಲ್ಲಿದ್ದು, ಒಂದಲ್ಲ ಒಂದು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿಕೊಂಡು ಸಭೆಗಳು ವ್ಯರ್ಥ ಆರೋಪ, ಪ್ರತ್ಯಾರೋಪಗಳಿಗೆ ಬಲಿಯಾಗುತ್ತಿದ್ದು, ಸೋಮವಾರದ ಸಾಮಾನ್ಯ ಸಭೆಯಲ್ಲಿ ಅಧಿಕಾರಿಯೊಬ್ಬರಿಗೆ ಹಾಲಿ ತಾಪಂ ಅಧ್ಯಕ್ಷೆ ಪತಿ ಕಿರುಕುಳ ನೀಡಿರುವುದನ್ನು ಖಂಡಿಸಿ ರೈತ ಸಂಘದ ಪದಾಧಿಕಾರಿಗಳು ತಾಪಂ ಆವರಣದಲ್ಲಿ ಪ್ರತಿಭಟನೆ ನಡೆಸಿದ್ದರಿಂದ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು.
ತಾಪಂ ಅಧ್ಯಕ್ಷರ ಪತಿ ಕೆಲ ದಿನಗಳ ಹಿಂದೆ ಕೂಡ್ಲಿಗಿ ತಾಲೂಕು ಹಾಲು ಒಕ್ಕೂಟ ಅಧಿಕಾರಿಗೆ ದೂರವಾಣಿ ಮೂಲಕ ಅವಾಚ್ಯ ಶಬ್ದಗಳಿಂದ ನಿಂದಿಸಿ, ತೊಂದರೆ ಕೊಟ್ಟಿದ್ದಾರೆಂದು ಆರೋಪಿಸಿ ಹಾಲು ಉತ್ಪಾದನ ಸಂಘ, ರೈತ ಸಂಘದ ನೂರಾರು ಕಾರ್ಯಕರ್ತರು ಧರಣಿ ನಡೆಸಿ ಕ್ರಮಕ್ಕೆ ಒತ್ತಾಯಿಸಿ ಇಓಗೆ ಮನವಿ ಸಲ್ಲಿಸಿ ತಪ್ಪಿತಸ್ಥರಿಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದರಿಂದ ತಾಪಂ ಆವರಣ ವಿವಾದಗಳ ಗೂಡಾಗುತ್ತಿರುವುದು ಕಂಡು ಬಂತು. ನಂತರ ಸಭೆಯಲ್ಲಿ ಜೆಸ್ಕಾಂ ಅಧಿಕಾರಿ ಉಮಾಮಹೇಶ್ವರಗೆ ತಾಪಂ ಸದಸ್ಯ ಉಜ್ಜಿನಿ ಬಸವರಾಜಪ್ಪ ಲಂಚದ ಆರೋಪ ಮಾಡುತ್ತಿದ್ದಂತೆ ಸಭೆಯಲ್ಲಿ ಗದ್ದಲ, ಕೋಲಾಹಲ ಉಂಟಾಯಿತು. ಅಧಿಕಾರಿ ತಿರುಗೇಟಿನ ಉತ್ತರ ನೀಡಿ, ನೀವು ಸಾಬೀತು ಪಡಿಸಿದರೆ ಈ ಸಭೆಯಲ್ಲೇ ವೃತ್ತಿಗೆ ರಾಜಿನಾಮೆ ಕೊಡುತ್ತೇನೆ ಎಂದರು. ಆಗ ಕೆಲವು ಸದಸ್ಯರು ಅಧಿಕಾರಿ ಬೆಂಬಲಕ್ಕೆ ನಿಂತು ಮೊದಲು ಲಂಚ ಪಡೆದಿರುವ ಬಗ್ಗೆ ಸಾಕ್ಷಿ ಸಮೇತ ತೋರಿಸಿದರೆ ಕ್ರಮ ಕೈಗೊಳ್ಳಬಹುದು. ಕೇವಲ ಬಾಯಿಮಾತಿನ ಆರೋಪ ಸರಿಹೊಂದಲಾರದು ಎಂದು ಇಬ್ಬರನ್ನು ತಣ್ಣಗಾಗಿಸಿದರು. 2 ವರ್ಷಗಳಿಂದ ಕೇಳುತ್ತಿರುವ ಸರ್ಕಾರದ ಗಂಗಾ ಕಲ್ಯಾಣ ಫಲಾನುಭವಿಗಳ ಆಯ್ಕೆ ಪಟ್ಟಿ ಯಾವಾಗ ಕೊಡುತ್ತೀರಿ ಎಂದು ತಾಲೂಕು ಎಸ್ಸಿ-ಎಸ್ಟಿ ಅಧಿಕಾರಿಯನ್ನು ತಾಪಂ ಸದಸ್ಯ ಎ.ಎಂ. ಗುರುಪ್ರಸಾದ ತೀವ್ರ ತರಾಟೆಗೆ ತೆಗೆದುಕೊಂಡರು. ಆಯ್ಕೆ ಪಟ್ಟಿಯಲ್ಲಿ ಗೋಲ್‌ಮಾಲ್ ಮಾಡಿರಬಹುದೆಂಬುದು ನಿಮ್ಮ ವಿಳಂಬ ಧೋರಣೆಯಿಂದ ತಿಳಿಯುತ್ತದೆ ಎಂದರು.
ತಾಪಂ ಸಭೆ ದಿನ ಮಾತ್ರ ಗುಡೇಕೋಟೆಯಲ್ಲಿ ಕುಡಿವ ನೀರು ಸರಬರಾಜು ಚನ್ನಾಗಿರುತ್ತೆ. ನಂತರ 15 ದಿನಗಳಿಗೊಮ್ಮೆ ನೀರು ಕಾಣುವ ಪರಿಸ್ಥಿತಿ ಎಂದು ಹಾಸ್ಯ ಚಟಾಕಿ ಮೂಲಕ ಸಮಸ್ಯೆ ವಿವರಿಸಿದರು ವಿಶಾಲಾಕ್ಷಿ. ಆರೋಗ್ಯ ಇಲಾಖೆಯ ಡಾ.ಮಧು, ತಾಲೂಕಿನ ಪ್ರತಿ ಗ್ರಾಮದಲ್ಲಿ ಲಾರ್ವಾ ಸಮೀಕ್ಷೆ ನಡೆಯುತ್ತಿದೆ. ಅದರಿಂದ ಡೆಂಘೀ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲು ಸಹಕಾರಿಯಾಗುತ್ತದೆ ಎಂದರು. ಕೃಷಿ, ಶಿಕ್ಷಣ, ಜಿಲ್ಲಾ ಪಂಚಾಯತ್ ಎಂಜಿನಿಯರಿಂಗ್, ಸಮಾಜ ಕಲ್ಯಾಣ ಸೇರಿದಂತೆ ಎಲ್ಲ ಇಲಾಖೆ ಸಭೆಯಲ್ಲಿ ಪ್ರಗತಿ ವರದಿ ಮಂಡಿಸಿದರು. ತಾಪಂ ಅಧ್ಯಕ್ಷೆ ವಿ. ಮಂಗಳಮ್ಮ ಚಿನ್ನಾಪುರಪ್ಪ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಎಚ್. ಮಹೇಶ್, ಉಪ ತಹಸೀಲ್ದಾರ್ ಪ್ರಮೋದ್ ಇದ್ದರು. ತಾಪಂ ಸದಸ್ಯರು, ವಿವಿಧ ಇಲಾಖೆ ಅಧಿಕಾರಿಗಳು, ಗ್ರಾಪಂ ನಾಮನಿರ್ದೇಶಿತ ಸದಸ್ಯರು, ಪಿಡಿಓ ಇದ್ದರು.