ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಕೃಷಿ ಸಾಧಕರಿಗೆ ಸುಕೃತ ಪ್ರಶಸ್ತಿ

Rashmi Kasaragodu
Updated On : 16 Jul 2013, 1:35 am

ಕ.ಪ್ರ.ವಾರ್ತೆ   ಬಳ್ಳಾರಿ   ಜು.15
ಕೃಷಿಯ ಉತ್ತಮ ಮಾದರಿಗಳನ್ನು ಪ್ರೋತ್ಸಾಹಿಸುವ ಮೂಲಕ ಕೃಷಿ ರಂಗದಲ್ಲಿ ಗುಣಾತ್ಮಕ ಬದಲಾವಣೆ ತರುವ ಆಶಯದಿಂದ ಸುಕೋ ಬ್ಯಾಂಕ್ ಇದೇ ಪ್ರಥಮ ಬಾರಿಗೆ ರಾಜ್ಯದ ಕೃಷಿ ಸಾಧಕರಿಗೆ 'ಸುಕೃತ' ಪ್ರಶಸ್ತಿ ವಿತರಿಸಲು ನಿರ್ಧರಿಸಿದೆ.
ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಸುಕೋ ಬ್ಯಾಂಕ್ ಅಧ್ಯಕ್ಷ ಮನೋಹರ ಮಸ್ಕಿ, ಪ್ರಸ್ತುತ ದಿನಗಳಲ್ಲಿ ಅನ್ನದ ನೆಲದಲ್ಲಿ ಆತಂಕದ ಛಾಯೆ ಕವಿಯುತ್ತಿದೆ. ಕೃಷಿಯಲ್ಲಿ ಏನೂ ಇಲ್ಲ ಎಂಬುವುದಕ್ಕಿಂತ ಎಷ್ಟೊಂದು ವಿಶೇಷತೆಗಳಿವೆ ಎಂಬುದನ್ನು ಪರಿಚಯಿಸಬೇಕು. ಮಣ್ಣಿನ ಕಾಯಕದತ್ತ ಗಮನ ಸೆಳೆದು ಸಕಾರಾತ್ಮಕ ಚಿಂತನೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕೃಷಿ ಸಾಧಕರಿಗೆ ಸುಕೃತ ಕೃಷಿ ಪ್ರಶಸ್ತಿ, ಕೃಷಿ ತಂತ್ರಜ್ಞಾನ ಕ್ಷೇತ್ರದ ಸಾಧನೆಗೆ ಸುಕೃತ ಕೃಷಿ ತಂತ್ರಜ್ಞಾನ ಪ್ರಶಸ್ತಿ ಹಾಗೂ ಕೃಷಿ ಮಾಧ್ಯಮ ಸಂಶೋಧನೆಗೆ ಸುಕೃತ ಕೃಷಿ ಮಾಧ್ಯಮ ಫೆಲೋಶಿಪ್ ನೀಡಲಾಗುತ್ತಿದೆ ಎಂದರು.
ಸುಕೃತ ಕೃಷಿ ಪ್ರಶಸ್ತಿ: ಆಹಾರ, ತೋಟಗಾರಿಕೆ ಅಥವಾ ವಾಣಿಜ್ಯ ಬೆಳೆಗಳಲ್ಲಿ ಸಾಧನೆ ಮಾಡಿದ ಆಯ್ದ ಒಬ್ಬ ಕೃಷಿಕರಿಗೆ ಈ ಪ್ರಶಸ್ತಿ ನೀಡಲಾಗುವುದು. ಒಂದೇ ಬೆಳೆ, ಸಮ್ಮಿಶ್ರ ಬೆಳೆ, ಹೊಸ ಬೆಳೆ ಪರಿಚಯಿಸುವ ಪ್ರಯತ್ನ, ವಿಶೇಷ ತಳಿ ಸಂರಕ್ಷಣೆ ಕೆಲಸಗಳನ್ನು ಗಮನಿಸಲಾಗುತ್ತದೆ. ಮಣ್ಣು, ನೀರು, ಕೃಷಿ, ಜೀವಲೋಕ ಉಳಿಸುವ ಕಾರ್ಯವನ್ನೂ ಪ್ರಶಸ್ತಿಗೆ ಪರಿಗಣಿಸಲಾಗುವುದು ಎಂದರು.
ಕೃಷಿ ತಂತ್ರಜ್ಞಾನ ಪ್ರಶಸ್ತಿ: ಕೃಷಿ ತಂತ್ರಜ್ಞಾನದಲ್ಲಿ ವಿಶೇಷ ಸಾಧನೆ ಮಾಡಿದವರಿಗೆ ಈ ಪ್ರಶಸ್ತಿ ನೀಡಲಾಗುತ್ತದೆ. ದೈನಂದಿನ ಕೃಷಿ ಬಳಕೆಗೆ ಬರುವ ಉಪಯುಕ್ತ ತಂತ್ರಗಳಾದ ಕಳೆ ಕಟಾವು, ಬತ್ತ ನಾಟಿ, ಕಬ್ಬು ಕಟಾವು, ಕೃಷಿ ಉತ್ಪನ್ನ ಸಾಗಣೆ, ಹಾಲು ಕರೆಯುವುದು, ಅಡಕೆ ಸುಲಿಯುವುದು, ಮರವೇರುವುದು, ಔಷಧಿ ಸಿಂಪಡಣೆ, ಬೆಳೆ ರಕ್ಷಣೆ ಸಲಕರಣೆಗಳನ್ನು ರೂಪಿಸಿದವರು, ನೀರಾವರಿಯಲ್ಲಿ ವಿದ್ಯುತ್ ಮಿತ ಬಳಕೆ, ನೀರಾವರಿ ಸುಧಾರಣೆ, ಜಲ ಸಂರಕ್ಷಣೆ ತಂತ್ರ ರೂಪಿಸಿದವರನ್ನು ಈ ಪ್ರಶಸ್ತಿಗೆ ಪರಿಗಣಿಸಲಾಗುತ್ತದೆ ಎಂದರು.
ಸುಕೃತ ಕೃಷಿ ಮಾಧ್ಯಮ ಫೆಲೋಶಿಪ್: ಕೃಷಿಯಲ್ಲಿ ಯುವಶಕ್ತಿ ಉಳಿಸಿಕೊಳ್ಳುವುದು ಹೇಗೆ ಎಂಬ ವಿಷಯದ ಕುರಿತು ಈ ವರ್ಷ ಮಾಧ್ಯಮ ಅಧ್ಯಯನ  ಫೆಲೋಶಿಪ್ ನೀಡಲಾಗುವುದು. ಕೃಷಿ ರಂಗದಲ್ಲಿ ಯುವಕರ ಸಾಧನೆ, ನಗರ ವಲಸೆ ಸಮಸ್ಯೆಯಿಂದ ಉದ್ಭವಿಸಿದ ಕೃಷಿ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಬೇಕು. ಈ ಮೂರೂ ಪ್ರಶಸ್ತಿಗಳು ರು. 1 ಲಕ್ಷ ನಗದು ಹೊಂದಿರುತ್ತವೆ ಎಂದರು. ಇದಲ್ಲದೆ ಸೂಚಿತ ವಿಷಯದ ಅಧ್ಯಯನ, ಕ್ಷೇತ್ರ ಭೇಟಿ ಹಾಗೂ ವೀಡಿಯೋ ಚಿತ್ರೀಕರಣ ದಾಖಲಾತಿ ವೆಚ್ಚಗಳಿಗೆ 50 ಸಾವಿರ ನೀಡಲಾಗುತ್ತದೆ. ಪತ್ರಿಕೋದ್ಯಮ ವಿದ್ಯಾರ್ಥಿಗಳು, ಸಂಶೋಧಕರು, ಹವ್ಯಾಸಿ ಪತ್ರಕರ್ತರು, ಕಾರ್ಯನಿರತ ಪತ್ರಕರ್ತರು ಹಾಗೂ ಬರಹಗಾರರು ಫೆಲೋಶಿಪ್‌ಗೆ ಅರ್ಜಿ ಸಲ್ಲಿಸಬಹುದು ಎಂದರು. ಪ್ರಶಸ್ತಿಗೆ ಅರ್ಹರನ್ನು ಗುರುತಿಸಿದವರು, ಅರ್ಜಿ ಸಲ್ಲಿಸುವವರು ಆ.31ರ ಒಳಗಾಗಿ ಸಂಪೂರ್ಣ ವಿವರವನ್ನು ಸುಕೋ ಬ್ಯಾಂಕ್, ಕೃಷಿ ಪ್ರಶಸ್ತಿ ಸಂಚಾಲನಾ ಸಮಿತಿ, ಸಿಂಧೂರು, 384/ಎ ಆರ್‌ಎಂವಿ ಲೇ ಔಟ್, 2ನೇ ಹಂತ, 2ನೇ ಬ್ಲಾಕ್ ಬೆಂಗಳೂರು ಇಲ್ಲಿಗೆ ಕಳುಹಿಸಿಕೊಡಬಹುದು. ಹೆಚ್ಚಿನ ಮಾಹಿತಿಗೆ ಶಿವಾನಂದ ಕಳವೆ-9449796014, 9448023715, ಇ-ಮೇಲ್ ಡ್ಡ್ಞ್ಠ್ಝಡಿಛಛಢಿಛ್ಠಜಅ್ಜಟಛ್ಝಟ.್ಛ್ಟಟ ಗೆ ಸಂಪರ್ಕಿಸಿ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement