ಬಜೆಟ್‌ನಲ್ಲಿ ದೇವದಾಸಿಯರ ಕಡೆಗಣನೆ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಜು. 15
ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ ಬಜೆಟ್‌ನಲ್ಲಿ ದೇವದಾಸಿ ಮಹಿಳೆಯರ ಬೇಡಿಕೆಗಳನ್ನು ಸಂಪೂರ್ಣವಾಗಿ ಕಡೆಗಣಿಸಿದ್ದು, ರಾಜ್ಯ ಸರ್ಕಾರದ ನಿರ್ಲಕ್ಷ್ಯತನ, ಅನ್ಯಾಯ ಖಂಡಿಸಿ ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘದ ಜಿಲ್ಲಾ ಸಮಿತಿಯು ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಸೋಮವಾರ ಪ್ರತಿಭಟನೆ ನಡೆಸಿತು.
ಪ್ರತಿಭಟನಾ ಧರಣಿ ನೇತೃತ್ವ ವಹಿಸಿ ಮಾತನಾಡಿದ ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘದ ಅಧ್ಯಕ್ಷೆ ಬಿ. ಮಾಳಮ್ಮ, ಮುಖ್ಯಮಂತ್ರಿಗಳಾಗಿ ತಮ್ಮ ಚೊಚ್ಚಲ ಬಜೆಟ್ ಮಂಡಿಸಿದ ಸಿದ್ದರಾಮಯ್ಯ ಅವರು ದೇವದಾಸಿ ಮಹಿಳೆಯರಿಗೆ ಪುನರ್ವಸತಿ, ಅವರ ಅಭಿವೃದ್ಧಿ ಹಿತವನ್ನು ನಿರ್ಲಕ್ಷಿಸಿದ್ದಾರೆ. ಈಗ ನೀಡಲಾಗುತ್ತಿರುವ ರು. 400ಗಳಿಗೆ ಬದಲಾಗಿ ರು. 500ಗಳಿಗೆ ಸಹಾಯ ಧನವನ್ನು ಹೆಚ್ಚಿಸಲಾಗಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜೀವನ ನಡೆಸುವುದೇ ದುಸ್ತರವಾಗಿರುವ ಇಂದಿನ ದಿನಗಳಲ್ಲಿ ದೇವದಾಸಿಯರಿಗೆ ಕೇವಲ ರು. 500 ಸಹಾಯಧನ ಯಾವುದಕ್ಕೂ ಸಾಲದಾಗಿದೆ. ಇದನ್ನು ತಿಂಗಳಿಗೆ ಕನಿಷ್ಠ ರು. 1,500ಗಳಿಗೆ ಹೆಚ್ಚಿಸಬೇಕು. ಜೀವನ ಭದ್ರತೆಗಾಗಿ ಬಡ್ಡಿ ರಹಿತ ರು. 1 ಲಕ್ಷಗಳ ಸಾಲ ಹಾಗೂ ನಿವೇಶನ ನೀಡಬೇಕು. ಮನೆ ಕಟ್ಟಿಕೊಳ್ಳಲು ರು. 2 ಲಕ್ಷ ನೀಡುವಂತೆ ಅವರು ಆಗ್ರಹಿಸಿದರು.
ಸಹಾಯ ಧನ: ದೇವದಾಸಿಯರು ಈ ಸಮಾಜದಲ್ಲಿ ಕಟ್ಟಕಡೆಯ ಮಹಿಳೆಯರಾಗಿದ್ದಾರೆ. ದಲಿತ ಕುಟುಂಬಗಳಿಗೆ ಸೇರಿದವರಾಗಿದ್ದಾರೆ. ದೇವದಾಸಿ ಎನ್ನುವ ಅನಿಷ್ಟ ಪದ್ಧತಿಗೆ ಸಿಲುಕಿ, ಇಡೀ ಜೀವನವನ್ನೇ ಶೋಷಿತರಾಗಿ, ನೋವುಂಡು ಕಳೆಯುತ್ತಿದ್ದಾರೆ. ನಿವೇಶನ, ಮನೆ, ಭೂಮಿ ಮುಂತಾದ ಸವಲತ್ತುಗಳಿಂದ ವಂಚಿತರಾಗಿದ್ದಾರೆ ಎಂದರು. ದೇವದಾಸಿ ಮಹಿಳೆಯರಿಗೆ ವಯಸ್ಸಿನ ಮಿತಿ ಕೈಬಿಟ್ಟು, ಸರ್ವೆ ಪಟ್ಟಿಯಲ್ಲಿರುವ ಎಲ್ಲ ದೇವದಾಸಿ ಮಹಿಳೆಯರಿಗೆ ಸಹಾಯಧನ-ನಿವೇಶನ-ಮನೆ-ಸಾಲಸೌಲಭ್ಯ ನೀಡಬೇಕು. ಈಗ ನೀಡುತ್ತಿರುವ ರು. 20 ಸಾವಿರ ಸಾಲದ ಬದಲಿಗೆ ರು. 1 ಲಕ್ಷ ಸಾಲ ನೀಡಬೇಕು. ಎಲ್ಲ ದೇವದಾಸಿ ಮಹಿಳೆಯರಿಗೆ ಬಿಪಿಎಲ್ ಕಾರ್ಡುಗಳನ್ನು ಕಡ್ಡಾಯವಾಗಿ ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ದೇವದಾಸಿ ಮಹಿಳೆಯರ ವಿವಿಧ ಬೇಡಿಕೆಗಳ ಮನವಿ ಪತ್ರವನ್ನು ಜಿಲ್ಲಾಧಿಕಾರಿಗಳ ಮುಖಾಂತರ ರಾಜ್ಯದ ಮುಖ್ಯಮಂತ್ರಿಗಳಿಗೆ ಕಳುಹಿಸಿಕೊಡಲಾಯಿತು. ಪ್ರತಿಭಟನಾ ಧರಣಿಯಲ್ಲಿ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘದ ಜಿಲ್ಲಾಧ್ಯಕ್ಷ ಬಿ. ಅಡಿವೆಪ್ಪ, ಕಾರ್ಯದರ್ಶಿ ಕೆ. ನಾಗರತ್ನಮ್ಮ, ಖಜಾಂಚಿ ಎಚ್.ಎಂ. ವಿಶ್ವನಾಥಸ್ವಾಮಿ ಇದ್ದರು.