ಕೊಟ್ಟೂರು ಪಪಂಗೆ ರು. 3.90 ಕೋಟಿ
ಕೊಟ್ಟೂರು: ಇಲ್ಲಿನ ಪಟ್ಟಣ ಪಂಚಾಯಿತಿಗೆ ಎಸ್ಎಫ್ಸಿ ಯೋಜನೆಯಡಿ ರಾಜ್ಯ ಸರ್ಕಾರ ರು. 3.90 ಕೋಟಿ ಅನುದಾನ ಮಂಜೂರು ಮಾಡಿದೆ ಎಂದು ಪಪಂ ಮುಖ್ಯಾಧಿಕಾರಿ ಹನುಮಂತಮ್ಮ ತಿಳಿಸಿದರು.
ಮಂಗಳವಾರ ಕನ್ನಡಪ್ರಭದೊಂದಿಗೆ ಮಾತನಾಡಿದ ಅವರು, ಈ ಅನುದಾನದ ಪೈಕಿ ರು. 38.5 ಲಕ್ಷ ವೆಚ್ಚದಲ್ಲಿ ಪಟ್ಟಣದ ಆರಾದ್ಯದೈವ ಶ್ರೀಗುರುಕೊಟ್ಟೂರೇಶ್ವರ ಸ್ವಾಮಿಯ ಮೂರು ಪ್ರಮುಖ ಮಠಗಳಿಗೆ ತೆರಳುವ ರಸ್ತೆಯನ್ನು ಹೈಟೆಕ್ ಮಾದರಿಯಲ್ಲಿ ಅಭಿವೃದ್ಧಿಪಡಿಸಲು ಕ್ರಿಯಾಯೋಜನೆ ರೂಪಿಸಲಾಗಿದೆ. ಮೂರು ದೇವಸ್ಥಾನಗಳನ್ನು ಸಂಪರ್ಕಿಸಲು ರಸ್ತೆ ಅಬಿವೃದ್ಧಿ ಕಾಮಗಾರಿಯನ್ನು ಬುದ್ಧ ಸರ್ಕಲ್ನಿಂದ ಆರಂಭಿಸಿ ಹಿರೇಮಠ, ತೊಟ್ಟಿಲುಮಠ ಮತ್ತು ಗಚ್ಚಿನಮಠದವರೆಗೂ ವಿಸ್ತರಿಸಲಾಗುತ್ತದೆ. ರಸ್ತೆಯೊಂದಿಗೆ ಸುಸಜ್ಜಿತ ಫುಟ್ಪಾಥ್ ನಿರ್ಮಿಸಲಾಗುವುದು ಎಂದರು.
ಕಳೆದ ಸಾಲಿನಲ್ಲಿ ಈ ರಸ್ತೆ ಅಭಿವೃದ್ಧಿಗೆ ರು. 17.5 ಲಕ್ಷ ಮೀಸಲಿರಿಸಲಾಗಿತ್ತು. ಆದರೆ ಶಾಸಕ ಎಸ್. ಭೀಮಾನಾಯ್ಕ ಈ ಕಾಮಗಾರಿಗೆ ಮತ್ತಷ್ಟು ಬಗೆಯ ಅನುದಾನ ತೆಗೆದಿರಿಸುವಂತೆ ಸೂಚಿಸಿ ಅತ್ಯುತ್ತಮ ಮಟ್ಟದ ರಸ್ತೆ ನಿರ್ಮಿಸಲು ಪಟ್ಟಣ ಪಂಚಾಯಿತಿಗೆ ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ರಸ್ತೆ ಅಭಿವೃದ್ಧಿಯನ್ನು ರು. 38.5 ಲಕ್ಷ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗುವುದು. ಈಗಾಗಲೇ ಈ ಸಂಬಂಧ ರೂಪಿಸಲಾದ ಕ್ರಿಯಾಯೋಜನೆಯನ್ನು ಜಿಲ್ಲಾಧಿಕಾರಿಗಳ ಅನುಮೋದನೆಗೆ ಕಳುಹಿಸಿಕೊಡಲಾಗುವುದು, ಒಪ್ಪಿಗೆ ದೊರೆತ ನಂತರ ಟೆಂಡರ್ ಪ್ರಕ್ರಿಯೆ ಮೂಲಕ ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತದೆ ಎಂದು ಹೇಳಿದರು.