ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಅಂಧರ ಬಾಳಿಗೆ ಬೆಳಕಾದ ಅಶ್ವಿನಿ

Lingaraj Badiger
Updated On : 18 Jul 2013, 11:59 am

ಬಳ್ಳಾರಿ: ಹೆಣ್ಣಾಗಿ ಹುಟ್ಟಿದರೇ ನಿಕೃಷ್ಟವಾಗಿ ಕಾಣುವ ಇಂದಿನ ಸಮಾಜದಲ್ಲಿ, ಅಂಧ ಹೆಣ್ಣು ಮಗುವೊಂದು ಅದೂ ಬಡ ಕುಟುಂಬದಲ್ಲಿ ಹುಟ್ಟಿದರೆ ಕಥೆ ಏನು? ಪೋಷಕರೂ ನಿರ್ಲಕ್ಷಿಸಲು ಆರಂಭಿಸುತ್ತಾರೆ.
ಆದರೆ, ಇಲ್ಲೊಬ್ಬ ಅಂಧ ಹೆಣ್ಣುಮಗಳೊಬ್ಬಳು ತನ್ನ ಅಂಗವೈಕಲ್ಯದ ನಡುವೆಯೂ ಇಡೀ ಜಗತ್ತೇ ತನ್ನತ್ತ ನೋಡುವಂತೆ ಮಾಡಿದ್ದಾಳೆ.
ಹೌದು. ಅಂಧ ಮಗಳು ಹುಟ್ಟಿದಳು ಎಂದು ವ್ಯಥೆ ಪಡುತ್ತಿದ್ದ ಹೊಟೇಲ್‌ನಲ್ಲಿ ಸರ್ವರ್ ಆಗಿ ದುಡಿಯುತ್ತಿದ್ದವರ ಮಗಳೀಗ ವಿಶ್ವಸಂಸ್ಥೆಯ ಪ್ರಶಸ್ತಿಗೆ ಭಾಜನಳಾಗಿದ್ದಾಳೆ. ಆ ಮೂಲಕ ಮನಸ್ಸು ಮಾಡಿದರೆ ಯಾರು  ಏನನ್ನು ಬೇಕಾದರೂ ಸಾಧಿಸಬಹುದು ಎಂಬುದನ್ನು ಸಾಬೀತುಪಡಿಸಿದ್ದಾಳೆ. ವಿಶ್ವಸಂಸ್ಥೆಯ ಪ್ರತಿಷ್ಠಿತ ಗಾರ್ಡನ್ ಬ್ರೌನ್ ಯುವ ಸಾಧಕ ಪ್ರಶಸ್ತಿಗೆ ಭಾಜನಳಾದ ಅಶ್ವಿನಿ ಜೀವನದ ಹಿಂದೆ ಕಣ್ಣೀರಿನ ಕಥೆ ಇದು.
ರಾಜ್ಯದ ಗಡಿಗೆ ಹೊಂದಿಕೊಂಡ ಬಳ್ಳಾರಿ ತಾಲೂಕಿನ ಚೇಳ್ಳಗುರ್ಕಿ ಗ್ರಾಮದ ಪ್ರಕಾಶ್ ಅವರಿಗೆ ಕಿತ್ತು ತಿನ್ನುವ ಬಡತನ. 1980ರಲ್ಲಿಯೇ ಉಟ್ಟ ಬಟ್ಟೆಯಲ್ಲಿಯೇ ಯಾರಿಗೂ ಹೇಳದೇ ಹೊಟ್ಟೆ ತುಂಬಿಸಿಕೊಳ್ಳಲು ಊರು ಬಿಟ್ಟು ಬೆಂಗಳೂರಿಗೆ ಹೋದರು. ಎಸ್ಸೆಸ್ಸೆಲ್ಲಿ ಓದಿದ ಇವರು ಮೊದಲಿಗೆ ಹೊಟೇಲ್‌ನಲ್ಲಿ ದುಡಿದರು. ನಂತರ  ಬಜಾರ್‌ನಲ್ಲಿ ಮಜ್ಜಿಗೆ ಮಾರಿ, ಬೀದಿ ಬದಿ ಹಣ್ಣು ಮಾರುವ ಮೂಲಕ ಜೀವನದಲ್ಲಿ ಲಯ ಕಂಡುಕೊಂಡರು.
1986ರಲ್ಲಿ ಮದುವೆಯಾದ ಪ್ರಕಾಶ್‌ಗೆ ಒಬ್ಬ ಮಗನ ನಂತರ ಮಗಳು ಅಶ್ವಿನಿ ಹುಟ್ಟಿದಳು. ಆಕೆ ಹುಟ್ಟುತ್ತಲೇ ಅಂಧಳಾಗಿರುವ ವಿಷಯ ತಿಳಿದ ಕೂಡಲೇ ಪ್ರಕಾಶ್ ದಂಪತಿಗೆ ಆಕಾಶವೇ ಮೇಲೆ ಬಿದ್ದಂತಾಗಿತ್ತು. ಆದರೂ 'ಹೆತ್ತವರಿಗೆ ಹೆಗ್ಗಣವೂ ಮುದ್ದು' ಎನ್ನುವಂತೆ ಅಶ್ವಿನಿ ಎಂದರೆ ಪೋಷಕರಿಗೆ ಪ್ರೀತಿ ಇತ್ತು. ಇವಳ ಭವಿಷ್ಯದ ಜೀವನ ಹೇಗೆ ಎಂಬ ಚಿಂತೆ ಜೊತೆ ಬಡತನದಲ್ಲೇ ದಿನ ದೂಡುತ್ತಿದ್ದರು.
ಅಶ್ವಿನಿಗೆ 5 ವರ್ಷವಾದಾಗ ಮಗಳ ಶಿಕ್ಷಣ ಹೇಗೆ ಎಂಬ ಪ್ರಶ್ನೆ ಪೋಷಕರನ್ನು ಕಾಡುತ್ತಿತ್ತು.  ಶಾಲೆಗೆ ಸೇರಿಸಿದರೂ ಪ್ರತಿದಿನ ಕರೆದುಕೊಂಡು ಹೋಗಿ ಬರುವುದು ಕಷ್ಟವಾಗುತ್ತದೆ ಎಂದು ಚಿಂತಿಸಿದರು. ಕೆಲವರ ಸಲಹೆ ಮೇರೆಗೆ ಬೆಂಗಳೂರಿನ ಜೆಪಿ ನಗರದ ರಮಣ ಮಹರ್ಷಿ ಬ್ಲೈಂಡ್ ಶಾಲೆಗೆ ಸೇರಿಸಿದರು.
ನಂತರ ಎಲ್ಲವೂ ಸುಗಮವಾಗಿಯೇ ಸಾಗಿತು. ಅಶ್ವಿನಿ ಎಲ್ಲರಿಗಿಂತ ಮುಂದು ಎನ್ನುವುದನ್ನು 10ನೇ ತರಗತಿಯಲ್ಲಿ ಶೇ.83.52ರಷ್ಟು ಅಂಕ ಪಡೆದು ತೋರಿಸಿದಳು. ಮಗಳು ಪಡೆದ ಅಂಕಗಳನ್ನು ಕಂಡ ತಂದೆ ಪ್ರಕಾಶ್‌ಗೆ ಮಗಳ ಪ್ರತಿಭೆ ನೋಡಿ ಹೇಗಾದರೂ ಮಾಡಿ, ಎಷ್ಟೇ ಖರ್ಚಾದರೂ ಸರಿ ಮಗಳಿಗೆ ಉನ್ನತ ಶಿಕ್ಷಣ ಕೊಡಿಸಬೇಕೆಂದು ಪಣತೊಟ್ಟರು.
ಸಾಫ್ಟ್‌ವೇರ್ ಕಂಪನಿ ಬಿಟ್ಟು ಸಮಾಜ ಸೇವೆ: ಎಸ್ಸೆಸ್ಸೆಲ್ಸಿ ನಂತರ ಬೆಂಗಳೂರಿನ ಎನ್‌ಎಂಕೆಆರ್‌ವಿ ಕಾಲೇಜಿನಲ್ಲಿ ಪಿಯುಸಿ ಕಲಾ ವಿಭಾಗದಲ್ಲಿ ಶೇ.65ರಷ್ಟು, ಮಹಾರಾಣಿ ಕಾಲೇಜಿನಲ್ಲಿ ಶೇ.70.6ರಷ್ಟು ಅಂಕದೊಂದಿಗೆ ಪದವಿ ಪೂರ್ಣಗೊಳಿಸಿದಳು. ತಂದೆ ಪ್ರಕಾಶ್ ಸ್ವಂತ ಆಟೋ ಖರೀದಿಸಿ, ನಂತರ ಟ್ರಾವೆಲ್ಸ್ ಬಿಸಿನೆಸ್‌ನೊಂದಿಗೆ ಜೀವನ ಸ್ವಲ್ಪ ಸುಧಾರಿಸಿತ್ತು. ಆಗ ಅಶ್ವಿನಿ ಪದವಿ ನಂತರ ಕಂಪ್ಯೂಟರ್ ತರಬೇತಿ ಪಡೆದು, ಸಾಫ್ಟ್‌ವೇರ್ ಕಂಪನಿಯಲ್ಲಿ ಕೆಲಸಕ್ಕೂ ಸೇರಿಕೊಂಡಳು. ಕಂಪನಿಯಲ್ಲಿ ಕೆಲಸ ಮಾಡಿದರೆ ಕೇವಲ ವೈಯಕ್ತಿಕ ಬದುಕು ಸುಧಾರಿಸುತ್ತದೆ. ಆದರೆ, ತನ್ನಂಥ ಅಂಧರಿಗೆ ಬೆಳಕಾಗಲು ಸಾಧ್ಯವಿಲ್ಲ ಎನ್ನುವ ಚಿಂತೆ ಆಕೆಯನ್ನು ಕಾಡುತ್ತಿತ್ತು.
ಆಗ ಲಿಯೋನಾರ್ಡ್ ಚೆಶೈರ್ ಡಿಸೆಬಿಲಿಟಿ ಸಂಸ್ಥೆಯಲ್ಲಿ ಯಂಗ್ ವಾಯ್ಸ್‌ನ ಸದಸ್ಯೆಯಾದಳು. ಅಲ್ಲಿಂದ ಸ್ವತಃ ವಿವಿಧ ಕಾಲೇಜುಗಳಲ್ಲಿ ಅಂಗವಿಕಲರ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುವುದರೊಂದಿಗೆ ಸಮಾಜ ಸೇವೆಗೆ ಮುಂದಾದಳು. ಬೆಂಗಳೂರಿನಲ್ಲಿ ನಡೆದ ಸೆಮಿನಾರ್‌ವೊಂದರಲ್ಲಿ ಈ ವಿಚಾರವಾಗಿಯೂ ವಿಷಯ ಮಂಡಿಸಿದ್ದಾಳೆ. ಯುಕೆಯಲ್ಲಿರುವ ಈ ಸಂಸ್ಥೆ ಅಶ್ವಿನಿಯ ಸೇವೆಯನ್ನು ಪರಿಗಣಿಸಿ, ವಿಶ್ವಸಂಸ್ಥೆಯ ಪ್ರತಿಷ್ಠಿತ ಗಾರ್ಡನ್ ಬ್ರೌನ್ ಯುವ ಸಾಧಕ ಪ್ರಶಸ್ತಿಗೆ ಅಶ್ವಿನಿಯನ್ನು ಆಯ್ಕೆ ಮಾಡಿತು.
-ಶಶಿಧರ ಮೇಟಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement