ಕೊಟ್ಟೂರು: ಬ್ಯಾಂಕ್ ಗ್ರಾಹಕರಿಗೆ ತಪ್ಪದ ಗೋಳು
ಕನ್ನಡಪ್ರಭ ವಾರ್ತೆ, ಕೊಟ್ಟೂರು, ಜು. 17
ಪಟ್ಟಣದ ಸಾವಿರಾರು ಗ್ರಾಹಕರು ತಮ್ಮ ಖಾತೆಯಲ್ಲಿನ ಹಣ ಪಡೆಯಲು ಪರದಾಡಬೇಕಾದ ದುಸ್ಥಿತಿ ಬಂದೊದಗಿದೆ. ಗಾರಹಕರ ಈ ಸಮಸ್ಯೆ ದಿನ ದಿನಕ್ಕೂ ಹೆಚ್ಚಾಗುತ್ತಲೇ ಇದ್ದರೂ ಸಂಬಂಧಿಸಿದ ಬ್ಯಾಂಕ್ ಅಧಿಕಾರಿಗಳು ಮಾತ್ರ ಇತ್ತ ಚಿತ್ತ ಹರಿಸಿಲ್ಲ.
ತಮ್ಮ ಖಾತೆಯ ಹಣ ಪಡೆಯಲು ದಿನಗಟ್ಟಲೆ ಕಾಲವ್ಯಯ ಮಾಡುತ್ತಿರುವುದು ಕಳೆದ 2 ತಿಂಗಳಿನಿಂದಲೂ ನಡೆಯುತ್ತಲೇ ಬಂದಿದ್ದರೂ ಸಂಬಂಧಪಟ್ಟ ಬ್ಯಾಂಕ್ ಅಧಿಕಾರಿಗಳು ಸಮಸ್ಯೆಗೆ ಸ್ಪಂದಿಸದೇ ಇರುವುದು ಗ್ರಾಹಕರ ಕಷ್ಟವನ್ನು ಮತ್ತಷ್ಟು ಇಮ್ಮಡಿಗೊಳಿಸಿದೆ. ಬ್ಯಾಂಕ್ಗಳಲ್ಲಿ ಗ್ರಾಹಕರಿಗೆ ಸೇವೆ ಒದಗಿಸಲು ಅಗತ್ಯವಿರುವ ಬ್ಯಾಂಕ್ ಸಿಬ್ಬಂದಿ ಇಲ್ಲದಿರುವುದೇ ಇದಕ್ಕೆಲ್ಲ ಕಾರಣ.
ಕೊಟ್ಟೂರು ಪ್ರಮುಖ ವಾಣಿಜ್ಯ ಕೇಂದ್ರವಾಗಿದ್ದು, ಇಲ್ಲಿರುವ ಎಸ್ಬಿಎಂ, ಕಾರ್ಪೊರೇಷನ್ ಬ್ಯಾಂಕ್ಗಳಲ್ಲಿ ಪ್ರತಿದಿನ ಕೋಟ್ಯಂತರ ರುಪಾಯಿ ವಹಿವಾಟು ನಡೆಯುತ್ತದೆ. ಎಸ್ಬಿಎಂನಲ್ಲಿ ಪ್ರತಿದಿನ ರು. 2 ಕೋಟಿ, ಕಾರ್ಪೊರೇಷನ್ ಬ್ಯಾಂಕ್ನಲ್ಲಿ ರು. 1 ಕೋಟಿ ವ್ಯವಹಾರ ನಡೆಯುತ್ತದೆ. ಇನ್ನುಳಿದ ಬಿಡಿಸಿಸಿ, ಪ್ರಗತಿ ಗ್ರಾಮೀಣ ಬ್ಯಾಂಕ್ಗಳಲ್ಲಿ ಲಕ್ಷಾಂತರ ರುಪಾಯಿ ವಹಿವಾಟು ನಡೆಯುತ್ತಿದೆ. ಈ ಎಲ್ಲ ಬ್ಯಾಂಕ್ಗಳಲ್ಲಿ ದಿನಬೆಳಗಾದರೆ ಜನ ಜಂಗುಳಿ ಹೆಚ್ಚಿರುತ್ತದೆ. ಗ್ರಾಹಕರು ದಿನಾಲೂ ಸಹಸ್ರಾರು ಸಂಖ್ಯೆಯಲ್ಲಿ ಉದ್ದನೆಯ ಸಾಲಿನಲ್ಲಿ ನಿಂತು ತಮ್ಮೆಲ್ಲಾ ವಹಿವಾಟುಗಳನ್ನು ನಡೆಸಬೇಕಿದೆ. ಬ್ಯಾಂಕ್ಗಳಲ್ಲಿ ಸಿಬ್ಬಂದಿ ಕೊರತೆಯಿಂದ ಈ ಸಮಸ್ಯೆ ದಿನದಿನಕ್ಕೂ ಹೆಚ್ಚಾಗುತ್ತಿದೆ.
ದಿನವೂ ಗೋಳು: ಪಟ್ಟಣದ ಪ್ರಮುಖ, ಮಧ್ಯಮ ವ್ಯಾಪಾರಸ್ಥರು ಎಸ್ಬಿಎಂ ಶಾಖೆಯಲ್ಲಿ ಚಾಲ್ತಿ ಖಾತೆ ಹೊಂದಿ ಪ್ರತಿದಿನ ರೈತರು ತರುವ ಮೆಕ್ಕೆಜೋಳ, ಶೇಂಗಾ, ಹತ್ತಿ ಮತ್ತಿತರ ಧಾನ್ಯಗಳನ್ನು ಖರೀದಿಸಲು ಬ್ಯಾಂಕಿನಿಂದ ಹಣ ಪಡೆಯಬೇಕೆಂದರೆ ಅದೊಂದು ದೊಡ್ಡ ಸಾಹಸವೆಂಬಂತಾಗಿದೆ. ಬ್ಯಾಂಕ್ಗಳಲ್ಲಿನ ಜನದಟ್ಟಣೆ ಕಂಡು ವ್ಯಾಪಾರಿಗಳು ರೈತರಿಗೆ ಶೀಘ್ರವಾಗಿ ಹಣ ಪಾವತಿಸಲು ಬೇರೆ ಮೂಲಗಳತ್ತ ತೆರಳುವ ಸಂದರ್ಭ ಬಂದೊದಗಿದೆ. ದಿನವೂ ಈ ವ್ಯಾಪಾರಿಗಳಿಗೆ ಇದೇ ಗೋಳಾಗಿದೆ. ಸಮಸ್ಯೆ ಪರಿಹರಿಸಲು ಅಧಿಕಾರಿಗಳು ಯಾವುದೇ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ ಎನ್ನುತ್ತಾರೆ ಗ್ರಾಹಕ ಬೆಣ್ಣಿಪ್ರಭು.
ಬ್ಯಾಂಕಿಗೆಂದು ತೆರಳುವ ಗ್ರಾಹಕರು, ಸ್ವ ಸಹಾಯ ಸಂಘಗಳ ಪದಾಧಿಕಾರಿಗಳು, ನಿವೃತ್ತ ನೌಕರರು ಮತ್ತು ಪ. ಪಂಗಡ, ಪ. ಜಾತಿಗೆ ಸಂಬಂಧಿಸಿದ ಬೆಳೆಸಾಲ ಪಡೆಯಲು ದಿನ, ವಾರ, ತಿಂಗಳವರೆಗೆ ಬ್ಯಾಂಕ್ಗಳಿಗೆ ಅಲೆದು ಸುಸ್ತಾಗುವುದು ನಡೆದೇ ಇದೆ. ಸ್ಟೇಟ್ ಬ್ಯಾಂಕ್ನಲ್ಲಿ ಕೇವಲ ನಾಲ್ಕು ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಇರುವ ಸಿಬ್ಬಂದಿಯೇ ಎಲ್ಲ ಬಗೆಯ ವ್ಯವಹಾರಗಳ ಹೊಣೆಗಾರಿಕೆ ನಿವಹಿಸುತ್ತ ದಿನ ದೂಡುತ್ತಿದ್ದಾರೆ.
ತಲೆಕೆಡಿಸಿಕೊಳ್ಳದ ಮ್ಯಾನೇಜರ್: ಎಸ್ಬಿಎಂ ಶಾಖೆಯ ಪಟ್ಟಣದ ವ್ಯವಸ್ಥಾಪಕರಿಗೆ ಸಿಬ್ಬಂದಿ ಕೊರತೆ ಮತ್ತು ಸಮಸ್ಯೆ ಬಗ್ಗೆ ದೂರು ನೀಡಲು ಹೋದರೆ ಈ ಬಗ್ಗೆ ಕೊಂಚವೂ ಗ್ರಾಹಕರ ಸಮಸ್ಯೆಗಳನ್ನು ಕೇಳಲು ಮುಂದಾಗುತ್ತಿಲ್ಲ. ಕನ್ನಡ ಬರುತ್ತಿದ್ದರೂ ಗ್ರಾಹಕರೊಂದಿಗೆ ಹಿಂದಿ, ಇಂಗ್ಲಿಷ್ನಲ್ಲೇ ಮಾತನಾಡುತ್ತಾ ಕನಿಷ್ಠ ಸೌಜನ್ಯ ತೋರುವುದಿಲ್ಲ. ಸಮಸ್ಯೆಗೆ ನಾವೇನೂ ಮಾಡೋಕಾಗೋದಿಲ್ಲ. ಯಾರಿಗಾದರೂ ದೂರು ನೀಡಿ ಎಂದು ಹೇಳಿ ಕೈ ಚೆಲ್ಲುತ್ತಿದ್ದಾರೆ. ಹೀಗಾಗಿ ಪರಿಸ್ಥಿತಿ ಸುಧಾರಿಸುವ ಲಕ್ಷಣವೇ ಕಂಡುಬರುತ್ತಿಲ್ಲ ಎಂದು ಮತ್ತೊಬ್ಬ ಗ್ರಾಹಕ ಕೊಟ್ರೇಶ್ ನೋವು.
ಒತ್ತಾಯ: ಕೊಟ್ಟೂರಿನಂತಹ ಪ್ರಮುಖ ವಾಣಿಜ್ಯ ಪಟ್ಟಣದಲ್ಲಿ ಮತ್ತಷ್ಟು ಬಗೆಯ ಬ್ಯಾಂಕ್ಗಳ ಶಾಖೆಗಳನ್ನು ತೆರೆಯುವ ಮೂಲಕ ಜನತೆ ಅನುಭವಿಸುತ್ತಿರುವ ತೊಂದರೆ ನಿವಾರಿಸಲು ಸಂಬಂಧಪಟ್ಟವರು ಮುಂದಾಗಬೇಕು. ಗ್ರಾಹಕರ ಪರಿಸ್ಥಿತಿ ದಿನೇ ದಿನೇ ವಿಕೋಪಕ್ಕೆ ಹೋಗುತ್ತಿದ್ದರೂ ಸಮಸ್ಯೆ ಪರಿಹರಿಸಲು ಹಿರಿಯ ಅಧಿಕಾರಿಗಳು ಮುಂದಾಗಬೇಕು ಎಂದು ವರ್ತಕರ ಸಂಘದ ಅಧ್ಯಕ್ಷ ಪತ್ತಿಕೊಂಡ ಗಣೇಶ್ ಒತ್ತಾಯಪಡಿಸಿದರು.