ಎಲ್ಲರೂ ಕಾನೂನು ಅರಿವು ಬೆಳೆಸಿಕೊಳ್ಳಿ
ಹೊಸಪೇಟೆ: ಪ್ರತಿಯೊಬ್ಬರೂ ಕಾನೂನು ಅರಿವು ಬೆಳೆಸಿಕೊಂಡು ಕಾನೂನಾತ್ಮಕವಾಗಿ ತಮ್ಮ ಸಮಸ್ಯೆಗಳನ್ನು ಇತ್ಯರ್ಥ ಪಡಿಸಿಕೊಳ್ಳುವ ಮೂಲಕ ನೆಮ್ಮದಿಯ ಜೀವನ ಸಾಗಿಸಲು ಮುಂದಾಗಬೇಕು ಎಂದು 3ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನ್ಯಾಯಾಧೀಶ ಶಿವಣ್ಣ ಹೇಳಿದರು.
ನಗರದ ನ್ಯಾಯಾಲದ ಆವರಣದಲ್ಲಿ ಮಂಗಳವಾರ ಕಾನೂನು ಸಾಕ್ಷರತಾ ರಥಯಾತ್ರೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪ್ರತಿ ಸಮಸ್ಯೆಗಳಿಗೆ ನ್ಯಾಯಾಲಯಕ್ಕೆ ಹೋಗುವ ಪರಿಪಾಠವನ್ನು ಕಡಿಮೆ ಮಾಡಿಕೊಂಡು ತಮ್ಮಲ್ಲಿಯೇ ಸಮಸ್ಯೆ ಬಗೆಹರಿಸಿಕೊಂಡರೆ ನ್ಯಾಯಾಲಯದ ಭಾರ ಕಡಿಮೆಯಾಗಲಿದೆ. ನ್ಯಾಯಾಲಯಕ್ಕೆ ಅಲೆದಾಡುವ ಕೆಲಸವೂ ತಪ್ಪುತ್ತದೆ. ಕಾನೂನಿನ ತಿಳಿವಳಿಕೆ ಕೊರತೆಯಿಂದ ಅನೇಕ ಸಮಸ್ಯೆಗಳು ಉಂಟಾಗುತ್ತಿದ್ದು, ಎಲ್ಲರೂ ಕಾನೂನುಗಳನ್ನು ಸರಿಯಾಗಿ ತಿಳಿದು ಜೀವನ ಸಾಗಿಸಿದರೆ ಉತ್ತಮ. ಹೀಗಾಗಿ ಪ್ರತಿಯೊಬ್ಬರಿಗೆ ಸಾಮಾನ್ಯ ಕಾನೂನು ತಿಳಿವಳಿಕೆ ಅವಶ್ಯಕ ಎಂದು ಹೇಳಿದರು.
ಸಹಾಯಕ ಆಯುಕ್ತ ಡಾ.ಡಿ.ಆರ್. ಅಶೋಕ್ ಮಾತನಾಡಿ, ಮನುಷ್ಯ ಕಾನೂನಿನ ಚೌಕಟ್ಟಿನಲ್ಲಿ ಜೀವನ ಸಾಗಿಸಿದಾಗ ಯಾವುದೇ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿಕೊಳ್ಳಲು ಸಾಧ್ಯವಿಲ್ಲ. ಉತ್ತಮ ಜೀವನ ಸಾಗಿಸಲು ಕಾನೂನಿನ ಅರಿವು ಸಹಕಾರಿಯಾಗಲಿದೆ ಎಂದರು. ತಾಲೂಕು ವಕೀಲರ ಸಂಘದ ಅಧ್ಯಕ್ಷ ಕೆ. ರತ್ನಾಕರರಾವ್ ಮಾತನಾಡಿ, ಕಾನೂನು ಸಾಕ್ಷರತಾ ರಥ ಯಾತ್ರೆ ತಾಲೂಕಿನಲ್ಲಿ 3 ದಿನಗಳ ಕಾಲ ಸಂಚರಿಸಿ ಜನರಿಗೆ ಅರಿವು ಮೂಡಿಸುವ ಕಾರ್ಯ ನಡೆಸುತ್ತದೆ ಎಂದು ವಿವರಿಸಿದರು.
ತಹಸೀಲ್ದಾರ್ ರಮೇಶ್ ಕೋನರಡ್ಡಿ ಮಾತನಾಡಿದರು. ತಾಲೂಕು ಕಾನೂನು ಸೇವೆಗಳ ಸಮಿತಿ ಅಧ್ಯಕ್ಷ ಮಾರುತಿ ಬಾಗಡೆ, ಜೆಎಂಎಫ್‌ಸಿ ಹಿರಿಯ ಸಿವಿಲ್ ನ್ಯಾಯಾಧೀಶ ಕೆ. ನಾರಾಯಣ ಪ್ರಸಾದ, ಪ್ರಧಾನ ಸಿವಿಲ್ ನ್ಯಾಯಾಧೀಶ ಹತ್ತಿಕಾಳು ಪ್ರಭುಸಿದ್ದಪ್ಪ, ಸಿವಿಲ್ ನ್ಯಾಯಾಧೀಶ ಎ. ಈರಣ್ಣ, ಸರ್ಕಾರಿ ಅಭಿಯೋಜಕ ಮಂಜುನಾಥ, ಬಿಇಓ ಪಿ. ಸುನಂದಾ, ವಕೀಲರ ಸಂಘದ ಕಾರ್ಯದರ್ಶಿ ಕೊಟ್ರೇಶ್ ಹಿರೇಮಠ, ವಕೀಲರಾದ ಎ. ವಿರೂಪಾಕ್ಷ ರೆಡ್ಡಿ, ಎಸ್.ವಿ. ಜವಳಿ, ಎಚ್. ಬಿಡ್ಡಪ್ಪ, ಎ.ಎಂ. ಸುರೇಶ್‌ಕುಮಾರ್, ಉದಯಶಂಕರ್, ಎಂ.ಎಚ್. ನಂಜುಂಡೇಶ್ವರ, ಎಚ್. ಮಹೇಶ್, ಕೆ.ವಿ. ಬಸವರಾಜ್, ಕೆ. ಜಂಬಣ್ಣ, ಕೊಟ್ರುಗೌಡ, ಶ್ರೀನಿವಾಸ ಸೇರಿದಂತೆ ಇತರರು ಭಾಗವಹಿಸಿದ್ದರು.