ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಕುಡಿವ ನೀರು ಪೂರೈಕೆಗೆ ಕಿಡಿಗೇಡಿಗಳ ಅಡ್ಡಿ

Lingaraj Badiger
Updated On : 19 Jul 2013, 12:10 pm

ಕನ್ನಡಪ್ರಭ ವಾರ್ತೆ, ಕೊಟ್ಟೂರು, ಜು. 18
ಪಟ್ಟಣದ ಕೆಲ ಕಿಡಿಗೇಡಿಗಳು ಸತತವಾಗಿ ಎಸಗುವ ಕೃತ್ಯದಿಂದಾಗಿ ಪಟ್ಟಣದ ಜನತೆ ಪದೇ ಪದೇ ಕುಡಿಯುವ ನೀರಿನ ತೊಂದರೆ ಎದುರಿಸುವಂತಾಗಿದೆ. ಇವರ ಕೃತ್ಯ ಕೇವಲ ಜನತೆಗೆ ತೊಂದರೆ ನೀಡದೆ ಪಟ್ಟಣ ಪಂಚಾಯಿತಿ ಆಡಳಿತಕ್ಕೂ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಪಟ್ಟಣದಲ್ಲಿ ಬೇಸಿಗೆ ದಿನಗಳಲ್ಲಿ ಅಷ್ಟಾಗಿ ಕಂಡುಬರದ ಕುಡಿಯುವ ನೀರಿನ ತೊಂದರೆ ಮಳೆಗಾಲದ ಈ ದಿನಗಳಲ್ಲೂ ಕಂಡುಬರತೊಡಗಿದೆ. ನೀರು ಪೂರೈಕೆಗಿರುವ ವಿದ್ಯುತ್ ಮೋಟಾರ್‌ಗಳ ಮೇಲೆ ಕಿಡಿಗೇಡಿಗಳು ಹಸಿ ಬಳ್ಳಿಯನ್ನು ಎಸೆಯುತ್ತಾರೆ. ಇದರಿಂದಾಗಿ ಹಠಾತ್ತನೆ ಮೋಟಾರ್‌ಗಳು ಸುಟ್ಟು ಹೋಗುತ್ತಿರುವುದರಿಂದ ಈ ಸಮಸ್ಯೆ ಹೆಚ್ಚುತ್ತಿದೆ.
ಪಟ್ಟಣದ ಕೆರೆಯ ಪ್ರದೇಶದಲ್ಲಿ ಕುಡಿಯುವ ನೀರಿಗಾಗಿ ಪಟ್ಟಣ ಪಂಚಾಯಿತಿ ಆಡಳಿತ 5 ವಿದ್ಯುತ್ ಮೋಟಾರ್‌ಗಳನ್ನು ಅಳವಡಿಸಿದೆ. ಈ ಮೋಟಾರ್‌ಗಳ ಮೇಲೆ ಕಿಡಿಗೇಡಿಗಳು ಬಳ್ಳಿ ಎಸೆಯುತ್ತಾರೆ. ಇದರ ಪರಿಣಾಮ ಮೋಟಾರ್‌ಗಳ ಕಾರ್ಯ ಸ್ಥಗಿತಗೊಳ್ಳುತ್ತಿದ್ದು, ಇದಕ್ಕೆಂದೆ ನಿರ್ಮಿಸಲಾದ 10 ಲಕ್ಷ ಗ್ಯಾಲನ್ ಲೀಟರ್ ನೀರು ಸಂಗ್ರಹಣೆಯ ಟ್ಯಾಂಕ್‌ಗೆ ನೀರೇ ಬರುತ್ತಿಲ್ಲ. ಟ್ಯಾಂಕ್‌ನಲ್ಲಿ ನೀರಿಲ್ಲದ ಕಾರಣ ವಿವಿಧ ಪ್ರದೇಶಗಳಿಗೆ ನಿಯಮಿತವಾಗಿ ನೀರು ಪೂರೈಸುವ ಕಾರ್ಯಕ್ಕೆ ಅಡ್ಡಿಯಾಗಿದೆ.
ಸಿಬ್ಬಂದಿ ನೇಮಕ: ಕಿಡಿಗೇಡಿಗಳ ಅಟಾಟೋಪದಿಂದ ಕಂಗೆಟ್ಟಿರುವ ಪಪಂ ಇದೀಗ ಅವರ ಪತ್ತೆಗೆ ಇಬ್ಬರು ಸಿಬ್ಬಂದಿಯನ್ನು ಗುರುವಾರದಿಂದ ನಿಯೋಜಿಸಿದೆ. ಬೆಳಗ್ಗೆ 6ರಿಂದ ಸಂಜೆ 6 ಗಂಟೆ ವರೆಗೆ ಕೆರೆಯ ಪ್ರದೇಶದಲ್ಲಿ ಬೀಡುಬಿಟ್ಟು ಕೃತ್ಯ ಎಸಗುವವರ ಮೇಲೆ ನೀಗಾ ಇಡಲಿದ್ದಾರೆ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಹನುಮಂತಮ್ಮ ತಿಳಿಸಿದರು. ಕಿಡಿಗೇಡಿಗಳು ತೋರುತ್ತಿರುವ ಕೈಚೆಳಕದ ಕಾರ್ಯಕ್ಕೆ ಪಟ್ಟಣ ಪಂಚಾಯಿತಿ ಆಡಳಿತ ನಷ್ಟ ಅನುಭವಿಸುವಂತಾಗಿದೆ.
ಸುಟ್ಟುಹೋದ ಮೋಟಾರ್‌ಗಳನ್ನು ದುರಸ್ತಿಗೊಳಿಸಲು ಒಂದೊಂದು ಬಾರಿಗೆ ರು. 4ರಿಂದ 5 ಸಾವಿರ ವ್ಯಯಿಸುತ್ತಿದ್ದೇವೆ. ಕಿಡಿಗೇಡಿಗಳ ಈ ಕೃತ್ಯ ಇಷ್ಟಕ್ಕೇ ಸೀಮಿತಗೊಳ್ಳದೇ ಮೋಟಾರ್‌ಗೆ ಅಳವಡಿಸಲಾದ ಫ್ಯೂಜ್‌ಗಳನ್ನು ಕದ್ದೊಯ್ಯುವುದೂ ನಡೆಯುತ್ತಲೇ ಇದೆ.
ಸುಟ್ಟುಹೋದ ಮೋಟಾರ್‌ಗಳನ್ನು ರಿಪೇರಿಗೊಳಿಸಲೆಂದೇ ಪಪಂ ಆಡಳಿತಕ್ಕೆ 4-5 ತಿಂಗಳಿನಿಂದ ಸಾವಿರಾರು ರುಪಾಯಿ ವ್ಯಯಿಸುವುದು ಅನಿವಾರ್ಯವಾಗಿದೆ ಎಂದು ಹನುಮಂತಮ್ಮ ಅವರು ಪ್ರತಿಕ್ರಿಯಿಸಿದರು.

ಕಡಿವಾಣ ಬೀಳಬೇಕು...
ಕುಡಿಯುವ ನೀರು ಪೂರೈಸುವ ಪಟ್ಟಣ ಪಂಚಾಯಿತಿ ಸಿಬ್ಬಂದಿ ಹಗಲು ರಾತ್ರಿಯೆನ್ನದೇ ಕಾರ್ಯನಿರ್ವಹಿಸುತ್ತಿದ್ದು, ನಮ್ಮದಲ್ಲದ ತಪ್ಪಿಗೆ ಜನತೆಯಿಂದ ಶಿಕ್ಷೆಗೆ ಗುರಿಯಾಗುತ್ತಿದ್ದೇವೆ. ಕಿಡಿಗೇಡಿಗಳ ಕೃತ್ಯಕ್ಕೆ ಕಡಿವಾಣ ಬೀಳದ ಹೊರತು ಇದರ ಸಮಸ್ಯೆ ಖಂಡಿತಾ ನಿವಾರಣೆಯಾಗದು.
- ಎ.ಎಚ್.ಎಂ. ಮಂಜುನಾಥ, ನೀರು ನಿರ್ವಹಣೆ ಮೇಲುಸ್ತುವಾರಿ
ದೂರು ಸ್ವೀಕರಿಸಲು ನಿರಾಕರಣೆ
ಕಿಡಿಗೇಡಿಗಳು ಎಸಗುವ ಕೃತ್ಯಗಳ ಕುರಿತು ಫೆಬ್ರವರಿಯಲ್ಲಿ ಸ್ಥಳೀಯ ಪೊಲೀಸ್ ಠಾಣೆಗೆ ದೂರು ಸಲ್ಲಿಸಲು ತೆರಳಿದ್ದೆವು. ಆದರೆ ಪೊಲೀಸ್ ಅಧಿಕಾರಿಯೊಬ್ಬರು ಅನುಮಾನವಿರುವ ವ್ಯಕ್ತಿಗಳ ವಿವರ, ಮೋಟಾರ್‌ಗಳನ್ನು ಎಲ್ಲೆಲ್ಲಿ ಅಳವಡಿಸಲಾಗಿದೆ, ಅವುಗಳ ಸಂಖ್ಯೆಗಳ ಕುರಿತು ವಿವರಗಳನ್ನು ನೀಡಿ ಎಂಬಿತ್ಯಾದಿ ಮಾತುಗಳನ್ನು ಹೇಳಿ ದೂರನ್ನು ಸ್ವೀಕರಿಸಲು ನಿರಾಕರಿಸಿದರು. ಇದರ ಪರಿಣಾಮ ಪೊಲೀಸರಿಗೆ ದೂರು ನೀಡದಂತಾಗಿದೆ.
- ಹನುಮಂತಮ್ಮ, ಪಪಂ ಮುಖ್ಯಾಧಿಕಾರಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement