ನಾಳೆ ವೈದ್ಯಕೀಯ ತಪಾಸಣೆ
ಹೊಸಪೇಟೆ: ತಾಲೂಕಿನ ಡಣಾಪುರ ಗ್ರಾಮದ ಸಮೀಪದಲ್ಲಿರುವ ಬಿಎಂಎಂ ಇಸ್ಪಾತ್ ಲಿಮಿಟೆಡ್ ವತಿಯಿಂದ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ಹಾಗೂ ಉಚಿತ ಆಂಬ್ಯುಲೆನ್ಸ್ ಸೇವೆ ಆರಂಭ ಉದ್ಘಾಟನಾ ಸಮಾರಂಭ ತಾಲೂಕಿನ ಮರಿಯಮ್ಮನಹಳ್ಳಿಯ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಜು. 20ರ ಬೆಳಗ್ಗೆ 10ಕ್ಕೆ ನಡೆಯಲಿದೆ. ಬೆಂಗಳೂರಿನ ರಿಯ ಡಯಾಗ್ನಾಸ್ಟಿಕ್, ಹೊಸಪೇಟೆ ದೀಪಾಲಿ ಆಸ್ಪತ್ರೆ, ಸಿಟಿ ಆಸ್ಪತ್ರೆ, ಡಣಾಪುರ ಮೈರಾಡ ಸಂಸ್ಥೆ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಲಿದೆ. ಆರೋಗ್ಯ ತಪಾಸಣಾ ಶಿಬಿರದಲ್ಲಿ ಬೆಂಗಳೂರಿನ ರಿಯ ಡಯಾಗ್ನಾಸ್ಟಿಕ್ ಫಿಜಿಷಿಯನ್ ಡಾ. ರೋಹಿತ್, ಬಳ್ಳಾರಿ ವಿಮ್ಸ್ನ ನರ ಮತ್ತು ಮಾನಸಿಕ ರೋಗ ತಜ್ಞ ಡಾ. ಟಿ. ಆರ್. ಶ್ರೀನಿವಾಸ್, ಹೊಸಪೇಟೆಯ ಸಿಟಿ ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞ ಡಾ. ನಾಜ್ ಜಹಾನ್, ದೀಪಾಲಿ ಆಸ್ಪತ್ರೆಯ ಕೀಲು ಮತ್ತು ಮೂಳೆ ರೋಗ ತಜ್ಞ ಡಾ. ವಿಶ್ವನಾಥ ದೀಪಾಲಿ, ಬೆಂಗಳೂರಿನ ಕಿವಿ, ಮೂಗು ಮತ್ತು ಗಂಟಲು ತಜ್ಞ ಡಾ. ಸುರೇಶ್ ತಪಾಸಣೆ ನಡೆಸುವರು. ರಕ್ತ ಪರೀಕ್ಷೆ, ಇಸಿಜಿ ಹೃದ್ರೋಗ ತಜ್ಞರು, ಕೀಲು ಮತ್ತು ಮೂಳೆ ತಜ್ಞರು, ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರು, ನರ ಮತ್ತು ಮಾನಸಿಕ ರೋಗ ತಜ್ಞರು ತಪಾಸಣೆ ನಡೆಸುವರು ಎಂದು ಎಂಎಂ ಇಸ್ಪಾತ್ ಲಿಮಿಟೆಡ್ನ ಲಕ್ಷ್ಮೀನಾರಾಯಣ ತಿಳಿಸಿದ್ದಾರೆ.
ಬೆಂಕಿ ತಗುಲಿ ಮಹಿಳೆ ಸಾವು
ಬಳ್ಳಾರಿ: ಸ್ಟವ್ ಹೊತ್ತಿಸುವ ಸಂದರ್ಭದಲ್ಲಿ ಮಹಿಳೆಯೋರ್ವಳಿಗೆ ಬೆಂಕಿ ಹೊತ್ತಿಕೊಂಡು ಸಾವನ್ನಪ್ಪಿದ ಘಟನೆ ಇಲ್ಲಿನ ಭಗತ್ಸಿಂಗ್ ನಗರದಲ್ಲಿ ನಡೆದಿದೆ. ಮೃತಳನ್ನು ಲಕ್ಷ್ಮಿ (26) ಎಂದು ಗುರುತಿಸಲಾಗಿದೆ. ಗುರುವಾರ ಬೆಳಗ್ಗೆ ಮನೆಯಲ್ಲಿ ಸ್ಟವ್ ಹೊತ್ತಿಸುವಾಗ ಮೈಗೆ ಬೆಂಕಿ ತಾಕಿದೆ. ತೀವ್ರ ಗಾಯಗೊಂಡ ಆಕೆಯನ್ನು ಕೂಡಲೇ ವಿಮ್ಸ್ ಆಸ್ಪತ್ರೆಗೆ ದಾಖಲಿಸಿದರೂ, ಪ್ರಯೋಜನವಾಗಿಲ್ಲ. ಗುರುವಾರ ಮಧ್ಯಾಹ್ನ ಮೃತ ಪಟ್ಟಿದ್ದಾಳೆ. ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಿ. ಪಂಪಣ್ಣ ನಿಧನ
ಕಂಪ್ಲಿ: ಕಂಪ್ಲಿ ಸವಿತಾ ಸಮಾಜ ಸಂಘ ಮಾಜಿ ಅಧ್ಯಕ್ಷ ಟಿ. ಪಂಪಣ್ಣ (75) ಬುಧವಾರ ನಿಧನರಾಗಿದ್ದಾರೆ. ಮೃತರಿಗೆ ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರು, ಬಂಧುಗಳು ಇದ್ದಾರೆ. ಸವಿತಾ ಸಮಾಜದ ಅಧ್ಯಕ್ಷ ಪಿ. ವಿಠೋಬಾ, ಕಾರ್ಯದರ್ಶಿ ಎ. ಹನುಮಂತ, ಪದಾಧಿಕಾರಿಗಳು ಹಾಗೂ ಸದಸ್ಯರು ಮೃತರಿಗೆ ಸಂತಾಪ ಸೂಚಿಸಿದ್ದಾರೆ.