ರೇಲ್ವೆ ಸಮಸ್ಯೆ ಪರಿಹರಿಸಲು ಸಂಸದರಿಗೆ ಮನವಿ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಜು. 18
ಬಳ್ಳಾರಿ- ಕೊಪ್ಪಳ ಭಾಗದಲ್ಲಿನ ವಿವಿಧ ರೇಲ್ವೆ ಸಮಸ್ಯೆಗಳ ಪರಿಹಾರಕ್ಕೆ ಮತ್ತು ಈ ಮಾರ್ಗದಲ್ಲಿ ಹೊಸ ರೈಲುಗಳನ್ನು ಓಡಿಸುವಂತೆ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯು ಕೊಪ್ಪಳ ಸಂಸದ ಶಿವರಾಮಗೌಡ ಅವರಿಗೆ ಮನವಿ ಸಲ್ಲಿಸಿತು.
ನಗರದ ಛೇಂಬರ್ ಆಫ್ ಕಾಮರ್ಸ್ ಕಚೇರಿ ಸಭಾಂಗಣದಲ್ಲಿ ಸಂಸದರೊಂದಿಗೆ ನಡೆದ ಸಭೆಯಲ್ಲಿ ಕೈಗಾರಿಕಾ ಸಂಸ್ಥೆ ಪದಾಧಿಕಾರಿಗಳು, ಹುಬ್ಬಳ್ಳಿ ವಿಭಾಗದ ವ್ಯಾಪ್ತಿಗೆ ಬರುವ ಬಳ್ಳಾರಿ- ಕೊಪ್ಪಳ ಭಾಗದಲ್ಲಿನ ವಿವಿಧ ರೇಲ್ವೆ ಸಮಸ್ಯೆಗಳನ್ನು ಪರಿಹರಿಸಬೇಕು. ಉಭಯ ಜಿಲ್ಲೆಗಳಲ್ಲಿನ ರೇಲ್ವೆ ಸಮಸ್ಯೆಗಳು ಮತ್ತು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.
ಸಂಸ್ಥೆ ಕಾರ್ಯದರ್ಶಿ ವಿ. ರವಿಕುಮಾರ್ ಮಾತನಾಡಿ, ಹುಬ್ಬಳ್ಳಿ- ವಿಜಯವಾಡ ಮಧ್ಯೆ ಸಂಚರಿಸುತ್ತಿದ್ದ ಅಮರಾವತಿ ಎಕ್ಸ್‌ಪ್ರೆಸ್ ರೈಲನ್ನು ಹೌರಾವರೆಗೂ ವಿಸ್ತರಿಸುವ ಬದಲು, ಈ ಮೊದಲಿನಂತೆ ವಾರದ ಏಳು ದಿನ ಹುಬ್ಬಳ್ಳಿ- ವಿಜಯವಾಡಕ್ಕೆ ಸಂಚರಿಸುವಂತೆ ಕ್ರಮ ಕೈಗೊಳ್ಳಬೇಕು. ಪ್ರತಿದಿನ ಸಂಜೆ 4.30ಕ್ಕೆ ಬಳ್ಳಾರಿಯಿಂದ ಬೆಂಗಳೂರಿಗೆ ತೆರಳುವ ಹೊಸಪೇಟೆ- ಬೆಂಗಳೂರು (ಸಿಟಿ) ಪ್ಯಾಸೆಂಜರ್ ರೈಲನ್ನು ಪೂರ್ಣ ಪ್ರಮಾಣದಲ್ಲಿ (ಚಿಕ್ಕಜಾಜೂರು ಬಳಿ ಬೋಗಿಗಳನ್ನು ಬದಲಿಸದೆ) ಪ್ರತ್ಯೇಕ ರೈಲನ್ನಾಗಿ ಓಡಿಸಬೇಕು.
ಈಗಿರುವ ಸಮಯವನ್ನು ಬದಲಿಸಿ ಹೊಸಪೇಟೆಯಿಂದಲೇ ಸಂಜೆ 6ಕ್ಕೆ ಹೊರಟು, ಮರುದಿನ ಬೆಳಗ್ಗೆ 5ಕ್ಕೆ ಬೆಂಗಳೂರು ಸೇರುವಂತೆ ನೋಡಿಕೊಳ್ಳಬೇಕು. ಅಲ್ಲದೇ, ರೈಲಿಗೆ ಇನ್ನು 2-3 ಸ್ಲೀಪರ್ ಕೋಚ್‌ಗಳನ್ನು ಹೆಚ್ಚುವರಿಯಾಗಿ ಅಳವಡಿಸಬೇಕು ಎಂದು ಆಗ್ರಹಿಸಿದರು.
ಹೆಚ್ಚುವರಿ ಕೋಚ್ ಅಳವಡಿಸಿ: ಹುಬ್ಬಳ್ಳಿ- ಬೆಂಗಳೂರು ಮಧ್ಯೆ ಸಂಚರಿಸುತ್ತಿರುವ ಹಂಪಿ ಎಕ್ಸ್‌ಪ್ರೆಸ್ ರೈಲಿಗೂ ಹೆಚ್ಚುವರಿ 2 ಸ್ಲೀಪರ್ ಕೋಚ್, 1 ಎಸಿ 3 ಟೈರ್ ಕೋಚ್‌ನ್ನು ಜೋಡಿಸಬೇಕು. ಸೊಲ್ಲಾಪುರ- ಗದಗ- ಯಶ್ವಂತಪುರ ರೈಲನ್ನು ಬಿಜಾಪುರ- ಗದಗ- ಕೊಪ್ಪಳ- ಬಳ್ಳಾರಿ ಮತ್ತು ಚೆನ್ನೈ- ಮುಂಬೈ ನಡುವೆ ಪ್ರತಿನಿತ್ಯ ಸಂಚರಿಸುವ ಎಕ್ಸ್‌ಪ್ರೆಸ್ ರೈಲನ್ನು ಬಳ್ಳಾರಿ- ಕೊಪ್ಪಳ- ಗದಗ ಮಾರ್ಗವಾಗಿ ಸಂಚರಿಸುವಂತೆ ಕೇಂದ್ರದ ರೇಲ್ವೆ ಸಚಿವರಿಗೆ ಒತ್ತಾಯಿಸುವಂತೆ ಕೋರಿದರು.
ಹಲವು ವರ್ಷಗಳಿಂದ ವಿಳಂಬವಾಗುತ್ತಿರುವ ಕೊಟ್ಟೂರು- ಹರಿಹರ- ಹೊಸಪೇಟೆ ನಡುವೆ ರೈಲು ಓಡಿಸಲು ಕ್ರಮ ಕೈಗೊಳ್ಳಬೇಕು. ತ್ವರಿತವಾಗಿ ರಾಯದುರ್ಗ- ತುಮಕೂರು ರೇಲ್ವೆ ಕಾಮಗಾರಿ ಪೂರ್ಣಗೊಳಿಸಬೇಕು. ಗುಂತಕಲ್ಲು- ಹೊಸಪೇಟೆ ಮಧ್ಯೆ ಪ್ರತಿನಿತ್ಯ ಪುಷ್‌ಪುಲ್ ರೈಲು ಓಡಿಸಬೇಕು. ಮುನಿರಾಬಾದ್- ಮೆಹಬೂಬ್‌ನಗರ ರೈಲು ಮಾರ್ಗಕ್ಕೆ ಬಳ್ಳಾರಿಯಿಂದ ಸಿರುಗುಪ್ಪ- ಸಿಂಧನೂರಿಗೆ ರೇಲ್ವೆ ಸಂಪರ್ಕ ಕಲ್ಪಿಸಲು ಯೋಜನೆ ರೂಪಿಸಬೇಕು. ಗದಗ- ಹರಪ್ಪನಹಳ್ಳಿ ನಡುವೆ ರೈಲು ಮಾರ್ಗ ನಿರ್ಮಾಣಕ್ಕೆ ಮುಂದಾಗುವಂತೆ ತಿಳಿಸಿದರು.
ಮನವಿಗೆ ಸ್ಪಂದಿಸಿದ ಸಂಸದ ಶಿವರಾಮಗೌಡ, ಈ ಕುರಿತು ಕೇಂದ್ರದ ರೇಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರ ಗಮನ ಸೆಳೆದು ಚರ್ಚಿಸುವುದಾಗಿ ಭರವಸೆ ನಿಡಿದರು.
ಸಭೆಯಲ್ಲಿ ಸಂಸ್ಥೆಯ ಅಧ್ಯಕ್ಷ ಕೆ. ಉಮಾಪತೆಪ್ಪ, ಉಪಾಧ್ಯಕ್ಷ ಕೆ. ಚನ್ನಪ್ಪ, ಡಾ. ರಮೇಶ್ ಗೋಪಾಲ್, ಕೆ. ಕೃಷ್ಣ, ಎನ್. ಯಶ್ವಂತ್‌ರಾಜ್, ಸಿ. ಶ್ರೀನಿವಾಸರಾವ್, ವಿ.ಕೆ. ನಾಯ್ಡು, ಪಿ. ಶ್ರೀನಿವಾಸಲು, ರಮೇಶ್‌ಗೌಡ ಪಾಟೀಲ್ ಸೇರಿದಂತೆ ಇತರೆ ಸದಸ್ಯರು ಉಪಸ್ಥಿತರಿದ್ದರು.