ಹಣ ಪಡೆದು ಬಿಲ್ ಪಾಸ್
ಹೂವಿನಹಡಗಲಿ: ಬಸವ ವಸತಿ ಯೋಜನೆಯಡಿ ಮನೆ ಮಂಜೂರಾಗಿ ನಿರ್ಮಾಣವಾದರೂ ಬಿಲ್ ಇಲ್ಲ. ಆದರೆ ಇದೇ ಯೋಜನೆಯಡಿ ಮನೆ ಕಟ್ಟದಿರುವ ಫಲಾನುಭವಿಗಳಿಂದ ಹಣ ಪಡೆದು ಬಿಲ್ ನೀಡಿದ್ದಾರೆಂದು ತಾಲೂಕಿನ ಪಶ್ಚಿಮ ಕಾಲ್ವಿ ಪಂಚಾಯ್ತಿ ವ್ಯಾಪ್ತಿಯ ಹಕ್ಕಂಡಿ ಗ್ರಾಮಸ್ಥರು ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗೆ ದೂರು ನೀಡಿದ್ದಾರೆ.
ಹಕ್ಕಂಡಿ ಗ್ರಾಮದಲ್ಲಿ ಬಸವ ವಸತಿ ಯೋಜನೆಯಡಿ ಫಲಾನುಭವಿಗಳು ಸಾಲ ಮಾಡಿ ಮನೆ ನಿರ್ಮಾಣ ಮಾಡಿಕೊಂಡಿದ್ದಾರೆ. ಕಟ್ಟಿದ ಮನೆಗಳಿಗೆ ಬಿಲ್ ಕೊಡಿ ಎಂದು ನಿತ್ಯ ಪಂಚಾಯ್ತಿಗೆ ಅಲೆದಾಡಿದರೂ ಕಾರ್ಯದರ್ಶಿ, ಪಂಚಾಯ್ತಿ ನೋಡಲ್ ಅಧಿಕಾರಿ ಕ್ಯಾರೆ ಅನ್ನುತ್ತಿಲ್ಲ. ಆದರೆ ಹಣ ನೀಡಿದರೆ ಮಾತ್ರ ಬಿಲ್ ಪಾಸು ಮಾಡುತ್ತಾರೆಂದು ದೂರಿನಲ್ಲಿ ಆರೋಪಿಸಿದ್ದಾರೆ. ಕಾರ್ಯದರ್ಶಿ ಮತ್ತು ನೋಡಲ್ ಅಧಿಕಾರಿ ಬಸವ ವಸತಿ ಫಲಾನುಭವಿಗಳಿಂದ ಸುಮಾರು 10 ಸಾವಿರಕ್ಕೂ ಹೆಚ್ಚು ಭಕ್ಷೀಸು ಪಡೆದು ಬಿಲ್ ಮಾಡಿದ್ದಾರೆ. ಮನೆ ಕಟ್ಟದೇ ಹಳೆ ಮನೆಗಳಿಗೆ ಜಿಪಿಆರ್‌ಎಸ್ ಮಾಡಿಸಿ ಅವರಿಂದ ಭಕ್ಷೀಸು ಪಡೆದು ಬಿಲ್ ಮಾಡಿರುವ ಪ್ರಕರಣಗಳು ಗ್ರಾಮದಲ್ಲಿ ಹೆಚ್ಚಾಗಿವೆ ಎಂದು ದೂರಿದ್ದಾರೆ.
ಶೌಚಾಲಯ ನಿರ್ಮಾಣದಲ್ಲೂ ಲಂಚ್
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬಯಲು ಶೌಚದಿಂದ ಮುಕ್ತ ಮಾಡಲು ಎಲ್ಲ ಬಡವರಿಗೂ ಶೌಚಾಲಯ ಕಟ್ಟಿಸಿಕೊಳ್ಳಲು ಅವಕಾಶ ನೀಡಿದೆ. ಆದರಿಂದ ಅನೇಕ ಬಡ ಫಲಾನುಭವಿಗಳು ಶೌಚಾಲಯಗಳನ್ನು ನಿರ್ಮಾಣ ಮಾಡಿಕೊಂಡಿದ್ದಾರೆ. ಫಲಾನುಭವಿಗಳ ಅಕೌಂಟ್‌ಗಳಿಗೆ ರು. 4500ಗಳನ್ನು ಹಾಕಿ ಉಳಿದ ಹಣವನ್ನು ಕಾರ್ಯದರ್ಶಿಯೇ ಪಾಸ್ ಮಾಡಿಕೊಂಡು ಲಂಚ ರೂಪದಲ್ಲಿ ತಿಂದಿದ್ದಾರೆಂದು ಗಂಭೀರವಾಗಿ ದೂರಿನಲ್ಲಿ ಆರೋಪಿಸಿದ್ದಾರೆ. ಇಂಥ ಲಂಚಬಾಕ ಅಧಿಕಾರಿಗಳಿಂದ ಬಡ ಫಲಾನುಭವಿಗಳು ಸಾಕಷ್ಟು ತೊಂದರೆಗಳನ್ನು ಅನುಭವಿಸುತ್ತಿದ್ದಾರೆ, ಸರ್ಕಾರದ ಯೋಜನೆಗಳು ಉಳ್ಳವರ ಪಾಲಾಗುತ್ತಿದ್ದು, ಇದನ್ನು ತಡೆಗಟ್ಟಲು ಮೇಲಧಿಕಾರಿಗಳು ಶೀಘ್ರದಲ್ಲೇ ಕ್ರಮ ಜರುಗಿಸಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಹೇಮಂತಗೌಡ, ಮಂಜುನಾಥ, ನಾಗಭೂಷಣ, ನಿಂಗಪ್ಪ, ಬಸವರಾಜ, ಮಹಂತೇಶಗೌಡ, ಮಂಜುನಾಥಗೌಡ ಸೇರಿದಂತೆ 17 ಗ್ರಾಮಸ್ಥರು ಸಹಿ ಮಾಡಿ ಗ್ರಾಮ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ. ದೂರು ಪಡೆದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ತಾಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಪತ್ರ ಬರೆದು ಹಕ್ಕಂಡಿ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿ 3 ದಿನದೊಳಗೆ ವರದಿ ನೀಡುವಂತೆ ಸೂಚನೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ತಾಪಂ ಅಧಿಕಾರಿಯೊಬ್ಬರು ಗ್ರಾಮಕ್ಕೆ ಭೇಟಿ ನೀಡಿದ್ದಾರೆ.
ಆದರೆ ಅವರ ನೆಪಮಾತ್ರದ ತನಿಖೆಯಿಂದ ಬಡ ಫಲಾನುಭವಿಗಳಿಗೆ ನ್ಯಾಯ ಸಿಗುವ ಭರವಸೆ ಇಲ್ಲದಿರುವುದರಿಂದ ಜಿಲ್ಲಾ ಪಂಚಾಯಿತಿಯಿಂದ ತನಿಖೆ ನಡೆಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.