ಆಧಾರ್ ಕಡ್ಡಾಯ
ಬಳ್ಳಾರಿ: ಸಮಾಜ ಕಲ್ಯಾಣ ಇಲಾಖೆಯಿಂದ 2013-14ನೇ ಸಾಲಿನಲ್ಲಿ ಮೆಟ್ರಿಕ್ ಪೂರ್ವ, ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನ ಪಡೆಯಲು ಎಲ್ಲ ಪ. ಜಾತಿ ವಿದ್ಯಾರ್ಥಿಗಳು ಆಧಾರ್ ಕಾರ್ಡ್ ಹೊಂದಿರುವುದು ಕಡ್ಡಾಯ. ಸಂಬಂಧಿಸಿದ ವಿದ್ಯಾರ್ಥಿಗಳು ಕೂಡಲೇ ತಮ್ಮ ಆಧಾರ್ ಕಾರ್ಡ್ನ ನಕಲು ಪ್ರತಿಯನ್ನು ಆಯಾ ತಾಲೂಕು ಸಮಾಜ ಕಲ್ಯಾಣಾಧಿಕಾರಿಗಳಿಗೆ ಸಲ್ಲಿಸಬೇಕು. ಆಧಾರ್ ಕಾರ್ಡ್ ಪ್ರತಿಯನ್ನು ಸಲ್ಲಿಸದಿರುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಮಂಜೂರು ಮಾಡಲಾಗುವುದಿಲ್ಲ ಎಂದು ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಎನ್. ರಾಜಪ್ಪ ತಿಳಿಸಿದ್ದಾರೆ.
ಯುಟಿಆರ್ ಸರಿಪಡಿಸಿಕೊಳ್ಳಿ
ಬಳ್ಳಾರಿ: ನಗರದ ರಾವ್ ಬಹಾದ್ದೂರ್ ಮಹಾಬಲೇಶ್ವರ ಎಂಜಿನಿಯರಿಂಗ್ ಕಾಲೇಜಿನಲ್ಲಿರುವ ಸಹಾಯವಾಣಿ ಕೇಂದ್ರದಲ್ಲಿ ಸಿಇಟಿಯ ದಾಖಲೆ ಪರಿಶೀಲಿಸಿಕೊಂಡ ವಿದ್ಯಾರ್ಥಿಗಳು, ಯುಟಿಆರ್ ಸಂಖ್ಯೆ ಸರಿಯಾಗಿ ನಮೂದಿಸದಿದ್ದಲ್ಲಿ ಜುಲೈ 21ರೊಳಗಾಗಿ ಸರಿಪಡಿಸಿಕೊಳ್ಳಬೇಕೆಂದು ಹೆಲ್ಪ್ಲೈನ್ ಸೆಂಟರ್ನ ಮುಖ್ಯ ನೋಡಲ್ ಅಧಿಕಾರಿ ಹಾಗೂ ರೂಪನಗುಡಿ ಸರ್ಕಾರಿ ಪಪೂ ಕಾಲೇಜಿನ ಪ್ರಾಚಾರ್ಯ ಜೆ. ರಮೇಶ್ ಮತ್ತು ಸಹಾಯಕ ನೋಡಲ್ ಅಧಿಕಾರಿ ಹಾಗೂ ಕೌಲ್ಬಜಾರ್ನ ಸರ್ಕಾರಿ ಪಪೂ ಕಾಲೇಜಿನ ಪ್ರಾಚಾರ್ಯ ಎಸ್. ಹನುಮಂತರೆಡ್ಡಿ ಮನವಿ ಮಾಡಿದ್ದಾರೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಯುಟಿಆರ್ ಸಂಖ್ಯೆಯನ್ನು ಸರಿಯಾಗಿ ನಮೂದಿಸದೇ ಇರುವ ಬಗ್ಗೆ ಎಸ್ಎಂಎಸ್ ಮಾಹಿತಿ ಬಂದ ವಿದ್ಯಾರ್ಥಿಗಳು ಮಾತ್ರ ಯುಟಿಆರ್ ಸಂಖ್ಯೆ ಸರಿಪಡಿಸಿಕೊಳ್ಳಬೇಕು. ಯುಟಿಆರ್ ಸಂಖ್ಯೆ ಸರಿಪಡಿಸಿಕೊಳ್ಳಲು ಸಹಾಯವಾಣಿ ಕೇಂದ್ರಕ್ಕೆ ಆಗಮಿಸುವ ವಿದ್ಯಾರ್ಥಿಗಳು ಹಣ ಪಾವತಿಸಿದ ಬ್ಯಾಂಕ್ ಚಲನ್ನಿನ ಸ್ಕ್ಯಾನಿಂಗ್ ಪ್ರತಿಯನ್ನು ಪೆನ್ಡ್ರೈವ್ನಲ್ಲಿ ಒದಗಿಸಬೇಕು. ಹೆಚ್ಚಿನ ಮಾಹಿತಿಗಾಗಿ ಕೇಂದ್ರದ ದೂ.ಸ. 08392-244808ಗೆ ಸಂಪರ್ಕಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.
ಪ್ರಾಣಿ ಹಾವಳಿಗೆ ಬೋನ್
ಹೊಸಪೇಟೆ: ಹಂಪಿ ವಿವಿಯಲ್ಲಿ ಕರಡಿ ಮತ್ತು ಚಿರತೆ ಹಾವಳಿ ತಪ್ಪಿಸಲು ಅರಣ್ಯ ಇಲಾಖೆಯವರು ಬೋನೊಂದನ್ನು ಇಟ್ಟಿದ್ದಾರೆ. ಹಂಪಿ ಕನ್ನಡ ವಿಶ್ವವಿದ್ಯಾಲಯದ ಆವರಣದಲ್ಲಿ ಕಳೆದ 4-5 ದಿನಗಳಿಂದ ಚಿರತೆ ಮತ್ತು ಕರಡಿ ಹಾವಳಿಯಿಂದಾಗಿ ವಿದ್ಯಾರ್ಥಿಗಳು, ಅಧ್ಯಾಪಕರು ಭಯಭೀತರಾಗಿ ಅವುಗಳನ್ನು ಬಂಧಿಸುವಂತೆ ಒತ್ತಾಯಿಸಿ ಅರಣ್ಯ ಇಲಾಖೆಗೆ ಸೂಚಿಸಿದ್ದರು. ಇದರಿಂದ ಬೋನಿಟ್ಟು ಚಿರತೆ ಹಿಡಿಯಲು ಅರಣ್ಯ ಇಲಾಕೆ ಕಾರ್ಯಪ್ರವೃತ್ತರಾಗಿದ್ದಾರೆ.
ಕೊಟ್ಟೂರಿನಲ್ಲಿ ಉತ್ತಮ ಮಳೆ: ಹರ್ಷ
ಕೊಟ್ಟೂರು: ಪಟ್ಟಣ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜಿಟಿ-ಜಿಟಿ ಮಳೆ ಕಳೆದ ತಿಂಗಳಿನಿಂದ ಪ್ರತಿ ದಿನ ಬರುತ್ತಿದೆ. ಕೊಟ್ಟೂರು ಭಾಗದಲ್ಲಿ ಉಳಿದ ಎಲ್ಲ ಕಡೆಗಳಿಗಿಂತ ಉತ್ತಮ ಮಳೆ ಈ ವರ್ಷ ಸುರಿದಿದ್ದು, ರೈತರಲ್ಲಿ ಹರ್ಷ ತಂದಿದೆ. ಹೊಲಗಳಲ್ಲಿ ಬಿತ್ತನೆ ಕಾರ್ಯ ಚುರುಕಾಗಿ ಸಾಗುತ್ತಿದೆ. ಕೊಟ್ಟೂರು ಭಾಗದಲ್ಲಿ ಈ ಹಂಗಾಮಿನಲ್ಲಿ 26.5 ಸೆಂ.ಮೀ. ಮಳೆಯಾಗಿದೆ. ರೈತರ ಒಟ್ಟು 6,470 ಹೆಕ್ಟೇರ್ ಪ್ರದೇಶದಲ್ಲಿ ಈಗಾಗಲೇ ಶೇಂಗಾ, ಹತ್ತಿ, ಜೋಳ, ಸಜ್ಜೆ, ಹೆಸರು, ಮೆಕ್ಕೆಜೋಳ ಬಿತ್ತನೆ ಕಾರ್ಯ ಮುಗಿದಿದೆ. ಕೊಟ್ಟೂರಿನ ರೈತ ಸಂಪರ್ಕ ಕೇಂದ್ರವೊಂದರಲ್ಲೇ ಮೆಕ್ಕೆಜೋಳ 799 ಕ್ವಿಂಟಲ್, ಹೆಸರು 20 ಕ್ವಿಂಟಲ್, ಜೋಳ ಸಜ್ಜೆ 90 ಕ್ವಿಂಟಲ್ ಬೀಜ ಮಾರಾಟವಾಗಿದೆ. ಈ ಬಾರಿ ಉತ್ತಮ ಬೆಳೆ ಬರಬಹುದೆಂಬ ನಿರೀಕ್ಷೆಯಲ್ಲಿ ರೈತರಿದ್ದಾರೆ. ಪ್ರತಿ ದಿನ ಮಳೆಯಾಗುತ್ತಿದ್ದರೂ ಪಟ್ಟಣದ ವಿಶಾಲ ಕೆರೆ ನೀರಿಲ್ಲದೆ ಬತ್ತಿ ಹೋಗಿದೆ. ಕೆರೆ ತುಂಬುವಷ್ಟು ಭಾರಿ ಮಳೆ ಸುರಿಯಬೇಕಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.