ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಜನವಿರೋಧಿ ನೀತಿಯಿಂದ 1165 ಜನ ಆತ್ಮಹತ್ಯೆ

Vishwanath S
Updated On : 21 Jul 2013, 11:31 am

ಕನ್ನಡಪ್ರಭ ವಾರ್ತೆ, ಬಳ್ಳಾರಿ, ಜು. 20
ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಅನುಸರಿಸುತ್ತಿರುವ ಜನವಿರೋಧಿ ಹಾಗೂ ಉದಾರೀಕರಣ, ಖಾಸಗೀಕರಣ, ಜಾಗತೀಕರಣ ನೀತಿಗಳಿಂದಾಗಿ ಕಳೆದ 2011-12ನೇ ಸಾಲಿನಲ್ಲಿ ರಾಜ್ಯದಲ್ಲಿ 1,165 ಜನರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯಾಧ್ಯಕ್ಷ ಮಾರುತಿ ಮಾನ್ಪಡೆ ಹೇಳಿದರು.
ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿ ಈಚೆಗೆ ಕರ್ನಾಟಕ ಪ್ರಾಂತ ರೈತ ಸಂಘದಿಂದ ಹಮ್ಮಿಕೊಂಡಿದ್ದ 15ನೇ ರಾಜ್ಯ ಸಮ್ಮೇಳನದಲ್ಲಿ ಚರ್ಚೆಯಾದಂತಹ ರೈತರಿಗೆ ಸಂಬಂಧಪಟ್ಟ ಪ್ರಮುಖ ವಿಷಯಗಳ ಕುರಿತು ಪ್ರಸ್ತಾಪಿಸಿದರು.
ಬೆಳೆದ ಬೆಳೆಗೆ ಬೆಂಬಲ ಬೆಲೆ ಸಿಗದೇ ಮಧ್ಯವರ್ತಿಗಳು-ದಲ್ಲಾಳಿಗಳ ಮಧ್ಯೆ ಸಿಲುಕಿ ಅವಸ್ಥೆ ಪಡುತ್ತಿರುವ ರೈತರು ಉದಾರೀಕರಣ ನೀತಿಗಳಿಂದಾಗಿ ತೊಂದರೆ ಅನುಭವಿಸುವಂತಾಗಿದೆ. ಕೇಂದ್ರ-ರಾಜ್ಯ ಸರ್ಕಾರಗಳ ಈ ನೀತಿಗಳಿಂದಾಗಿಯೇ ರೈತರು ಆತ್ಮಹತ್ಯೆ ಮಾಡಿಕೊಳ್ಳುವಂತಾಗಿದೆ ಎಂದರು.
ರಾಜ್ಯದಲ್ಲಿ ಐಟಿಬಿಟಿ, ಕೈಗಾರಿಕೆಗಳು ಮೊದಲೆರಡು ಸ್ಥಾನ ಕಬಳಿಸಿದ್ದರೆ, ಕೃಷಿ ಮೂರನೇ ಸ್ಥಾನದಲ್ಲಿದೆ. ಶೇ. 64ರಷ್ಟಿದ್ದ ಕೃಷಿ, ಶೇ. 54ಕ್ಕೆ ಇಳಿಕೆಯಾಗಿದೆ. ಕಳೆದ ಒಂದು ವರ್ಷದಲ್ಲಿ ಶೇ. 10ರಷ್ಟು ಕೃಷಿಕರು ಕಡಿಮೆಯಾಗುತ್ತಿದ್ದು, ದೊಡ್ಡ ಪ್ರಮಾಣದಲ್ಲಿ ಕೃಷಿ ತ್ಯಜಿಸಲಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಸ್ವಾಮಿನಾಥನ್ ಆಯೋಗ ಜಾರಿಗೆ ಒತ್ತಾಯ: ರೈತರ ಹಿತ ಕಾಯಲು, ಕೃಷಿಗೆ ಪ್ರಾಮುಖ್ಯ ನೀಡಲು ಕೇಂದ್ರ, ರಾಜ್ಯ ಸರ್ಕಾರಗಳು ಉನ್ನತಾಧಿಕಾರಿ ಸ್ವಾಮಿನಾಥನ್ ಆಯೋಗದ ವರದಿಯ ಶಿಫಾರಸು ಜಾರಿಗೆ ತರಬೇಕು. ದೇಶದ ಎರಡನೇ ರೈತ ಆಯೋಗವಾಗಿರುವ ಸ್ವಾಮಿನಾಥನ್ ನೀಡಿರುವ ಶಿಫಾರಸು ಒಪ್ಪಿಕೊಂಡು ಅನುಷ್ಠಾನಗೊಳಿಸಲು ಆಗ್ರಹಪಡಿಸಿದರು.
ಧರಣಿ: ಕಂಪನಿ ಕೃಷಿಯನ್ನು ಬೆಳೆಸುವ ಮತ್ತು ರೈತ ಕೂಲಿಕಾರರ ಕೈಗಳಿಂದ ಕೃಷಿ ಕೂಲಿಕಾರರಿಗೆ, ಉದ್ದಿಮೆದಾರರಿಗೆ, ಶ್ರೀಮಂತ ಕಂಪನಿಗಳಿಗೆ ವರ್ಗಾಯಿಸುವ ಭೂನೀತಿ ವಿರೋಧಿಸಿ, ಕರ್ನಾಟಕ ಪ್ರಾಂತ ರೈತ ಸಂಘವು ಆಗಸ್ಟ್ 3ನೇ ವಾರದಲ್ಲಿ ರಾಜ್ಯದ ಎಲ್ಲ ಜಿಲ್ಲಾ ಘಟಕಗಳಲ್ಲಿ 48 ಗಂಟೆಗಳ ಪ್ರತಿಭಟನಾ ಧರಣಿ ನಡೆಸಲಿದೆ ಎಂದರು.
ಭೂಸ್ವಾಧೀನ ಕಾಯ್ದೆ ಕೈಬಿಡಿ: ರಾಜ್ಯ ಸರ್ಕಾರದ ಕೃಷಿ ವಿರೋಧಿ ನೀತಿ ಹಾಗೂ ಕಂಪನಿ ಕೃಷಿ ಹೇರುವ, ಬಲವಂತದ ಭೂಸ್ವಾಧೀನ ಮಾಡಲು ಬೇಕಾಬಿಟ್ಟಿಯಾಗಿ ಭೂಬೆಲೆ ನಿಗದಿಪಡಿಸಿ ಮತ್ತು ಉದ್ಯೋಗ ಒದಗಿಸದ, ಪುನರ್ ವಸತಿಯಿಲ್ಲದ, 1894ರ ಭೂಸ್ವಾಧೀನ ಕಾಯ್ದೆ ಹಾಗೂ ಕರ್ನಾಟಕ ಸರ್ಕಾರದ ಪಕ್ಕಾ ಕಂಪನಿ ಮಾಲೀಕರ ಪರವಾಗಿರುವ ಭೂಸ್ವಾಧೀನ ಕಾಯ್ದೆಯನ್ನು ಕೂಡಲೇ ಕೈಬಿಡಬೇಕು ಎಂದು ಒತ್ತಾಯಿಸಿ, ಎರಡು ದಿನಗಳ ಕಾಲ ಪ್ರತಿಭಟನಾ ಧರಣಿ ನಡೆಸಲಾಗುವುದು ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಯು. ಬಸವರಾಜ ಮಾತನಾಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿ ವಿ.ಎಸ್. ಶಿವಶಂಕರ್ ಸೇರಿದಂತೆ ಇತರರು ಇದ್ದರು.
ಪದಾಧಿಕಾರಿಗಳ ಆಯ್ಕೆ
ಸಿಂಧನೂರಿನ ಸಮ್ಮೇಳನದಲ್ಲಿ ಸಂಘಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಗಿದೆ. ರಾಜ್ಯಾಧ್ಯಕ್ಷರಾಗಿ ಮಾರುತಿ ಮಾನ್ಪಡೆ, ಉಪಾಧ್ಯಕ್ಷರಾಗಿ ಜಿ.ವಿ. ಶ್ರೀರಾಮರೆಡ್ಡಿ, ಬಿಜಾಪುರದ ಭೀಮಾ ಸಿ. ಕಲಾದಗಿ, ಜಿ.ಸಿ. ಭಯ್ಯಾರೆಡ್ಡಿ, ರಾಯಚೂರಿನ ಮಲ್ಲಯ್ಯ ಜಾಲಹಳ್ಳಿ, ಬೆಂಗಳೂರಿನ ಎನ್. ವೆಂಕಟಾಚಲಯ್ಯ, ಉತ್ತರ ಕನ್ನಡದ ಶಾಂತಾರಾಂ ನಾಯಕ್, ಪ್ರಧಾನ ಕಾರ್ಯದರ್ಶಿಯಾಗಿ ಯು. ಬಸವರಾಜ್, ಕಾರ್ಯದರ್ಶಿಗಳಾಗಿ ದಕ್ಷಿಣ ಕನ್ನಡ ಕೆ. ಯಾದವಶೆಟ್ಟಿ, ಗೌರಮ್ಮ ಪಾಟೀಲ್, ಸಿ. ಗೋಪಿನಾಥ್, ಸೂರ್ಯನಾರಾಯಣ, ಜಿ. ನಾಗರಾಜ, ಎಂ. ಶ್ರೀನಿವಾಸ ಸೇರಿದಂತೆ ಇತರೆ 40 ಜನರು ಸದಸ್ಯರಾಗಿ ಆಯ್ಕೆಯಾಗಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement