ಜರ್ನಲಿಸ್ಟ್ ಗಿಲ್ಡ್ ವಿಸರ್ಜನೆ
ಬಳ್ಳಾರಿ: ಬಳ್ಳಾರಿ ಜರ್ನಲಿಸ್ಟ್ ಗಿಲ್ಡ್‌ನ್ನು ಗಿಲ್ಡ್ ಅಧ್ಯಕ್ಷ ಅಹಿರಾಜ್ ಅಧ್ಯಕ್ಷತೆಯಲ್ಲಿ ಭಾನುವಾರ ಕರೆದ ಸರ್ವಸದಸ್ಯರ ಸಾಮಾನ್ಯ ಸಭೆಯಲ್ಲಿ ಸರ್ವಾನುಮತದಿಂದ ವಿಸರ್ಜಿಸಲಾಯಿತು. ಈಗಾಗಲೇ ಹಾಲಿ ಅಧ್ಯಕ್ಷರ ಹಾಗೂ ಪದಾಧಿಕಾರಿಗಳ ಅವಧಿ ಪೂರ್ಣಗೊಂಡಿತ್ತು. ಈ ಹಿನ್ನೆಲೆಯಲ್ಲಿ ಸಭೆಯಲ್ಲಿ ಹಾಜರಾಗಿದ್ದ ಬಹುತೇಕ ಸದಸ್ಯರು ಜರ್ನಲಿಸ್ಟ್ ಗಿಲ್ಡ್‌ನ್ನು ಸಂಪೂರ್ಣವಾಗಿ ವಿಸರ್ಜಿಸುವುದೇ ಸೂಕ್ತ ಎಂಬ ಅಭಿಪ್ರಾಯ ಬಂದಿರುವ ಹಿನ್ನೆಲೆಯಲ್ಲಿ ಬಳ್ಳಾರಿ ಜರ್ನಲಿಸ್ಟ್ ಗಿಲ್ಡ್‌ನ್ನು ಸಂಪೂರ್ಣವಾಗಿ ವಿಸರ್ಜಿಸಲಾಯಿತು.
ಕಾಂಗ್ರೆಸ್ ಎಸ್ಟಿ ವಿಭಾಗಕ್ಕೆ ನೇಮಕ
ಬಳ್ಳಾರಿ: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಪರಿಶಿಷ್ಟ ಪಂಗಡಗಳ ವಿಭಾಗದ ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ ಅಸುಂಡಿ ಹೊನ್ನೂರಪ್ಪ (ವಂಡ್ರಿ) ನೇಮಕವಾಗಿದ್ದಾರೆ. ಕಾಂಗ್ರೆಸ್ ಸಮಿತಿ ಪ.ಪಂ. ವಿಭಾಗದ ಅಧ್ಯಕ್ಷ ಟಿ. ಈಶ್ವರ ಅವರು ನೇಮಕದ ಆದೇಶ ಹೊರಡಿಸಿದ್ದಾರೆ. ಪಕ್ಷದ ಸಿದ್ಧಾಂತದ ಅಡಿಯಲ್ಲಿ ಶಿಸ್ತುಬದ್ಧವಾಗಿ ರಾಜ್ಯಾದ್ಯಂತ ಎಸ್‌ಟಿ ಘಟಕವನ್ನು ಸಂಘಟಿಸಿ, ಸದೃಢಗೊಳಿಸಲು ಕಾರ್ಯಪ್ರವೃತ್ತರಾಗಬೇಕು ಎಂದು ಟಿ. ಈಶ್ವರ ಸೂಚಿಸಿದ್ದಾರೆ.
ಬ್ಯಾಂಕ್‌ಗೆ ಮೋಸ: ದೂರು
ಬಳ್ಳಾರಿ: ಎಸ್‌ಬಿಎಂನಲ್ಲಿ ಕಾರಿಗೆ ಸಾಲ ಪಡೆದು ಬ್ಯಾಂಕಿನ ಖಾತೆಗೆ ಹೈಪಾಥಿಕೇಷನ್ ಮಾಡಿಸುವುದು ಬಿಟ್ಟು, ಮೇಘಾ ಫೈನಾನ್ಸ್ ಕಂಪನಿ ಲಿಮಿಟೆಡ್ ಹೆಸರಿನಲ್ಲಿ ಮಾಡಿಸಿ ಬ್ಯಾಂಕ್‌ಗೆ ಮೋಸ ಮಾಡಿದ್ದಾರೆ ಎಂದು ಎಸ್‌ಬಿಎಂ ಬ್ಯಾಂಕ್‌ನ ವ್ಯವಸ್ಥಾಪಕ ಎಸ್.ಎಲ್. ನಾಯಕ್ ಎಂಬುವರು ಬ್ರೂಸ್ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಇಲ್ಲಿನ ಡಾ. ರಾಜ್‌ಕುಮಾರ್ ರಸ್ತೆ (ಅನಂತಪುರ ರಸ್ತೆ) ನಿವಾಸಿ ಎಂ.ಸಿ. ನಾಗರಾಜ್ ಅವರು ಬಳ್ಳಾರಿ ಎಸ್‌ಬಿಎಂನ ಮುಖ್ಯ ಶಾಖೆಯಲ್ಲಿ 4 ಚಕ್ರ ವಾಹನ ಖರೀದಿಸುವ ಉದ್ದೇಶದಿಂದಾಗಿ ಅರ್ಜಿ ಸಲ್ಲಿಸಿ, ಫೆ. 23, 2013ರಂದು ರು. 6.40 ಲಕ್ಷ ಸಾಲ ಪಡೆದು ಬೆಂಗಳೂರಿನ ನಂದಿ ಟಯೋಟಾ ಮೋಟಾರ್ ಪ್ರೈ. ಲಿಮಿಟೆಡ್ ಅವರಿಗೆ ಡಿಡಿ ಕಳುಹಿಸಿ ಕಾರನ್ನು ಖರೀದಿಸಿದ್ದು, ರಿಜಿಸ್ಟ್ರೇಷನ್ ಮಾಡಿಸಿದ್ದು, ಎಸ್‌ಬಿಎಂ ಬ್ಯಾಂಕ್ ಖಾತೆಗೆ ಹೈಪಾಥಿಕೇಷನ್ ಮಾಡಿಸದೇ ಮೇಘಾ ಫೈನಾನ್ಸ್ ಕಂಪನಿ ಲಿಮಿಟೆಡ್ ಹೆಸರಿನಲ್ಲಿ ಮಾಡಿಸಿ ಬ್ಯಾಂಕ್‌ಗೆ ಮೋಸ ಮಾಡಿದ್ದಾನೆಂದು ಬ್ಯಾಂಕಿನ ವ್ಯವಸ್ಥಾಪಕರು ದೂರು ನೀಡಿದ್ದಾರೆ. ಬ್ರೂಸ್ಪೇಟೆ ಪೊಲೀಸರು ದೂರು ದಾಖಲಿಸಿದ್ದಾರೆ.