ಮಾಲ್ವಿ ಜಲಾಶಯಕ್ಕೆ ನೀರು: ಸಿಎಂ ಜತೆ ಚರ್ಚೆ
ಹಗರಿಬೊಮ್ಮನಹಳ್ಳಿ: ಹೂವಿನಹಡಗಲಿ ತಾಲೂಕಿನ ಹೊಳಲು ಬಳಿ ತುಂಗಭದ್ರಾ ನದಿಯಿಂದ ನೀರೆತ್ತಿ, ತಳಕಲ್ಲು ಕೆರೆ ತುಂಬಿಸಿ, ಆ ಕೆರೆಯ ಕೋಡಿಯ ನೀರನ್ನು ಹಳ್ಳದ ಮೂಲಕ ಹಗರಿಬೊಮ್ಮನಹಳ್ಳಿ ತಾಲೂಕಿನ ಮಾಲ್ವಿ ಜಲಾಶಯಕ್ಕೆ ತುಂಬಿಸಲಾಗುವುದು. ಈ ಯೋಜನೆ ಜಾರಿಗೆ ಸಂಬಂಧಿಸಿದಂತೆ ಇಷ್ಟರಲ್ಲಿಯೇ ಮುಖ್ಯಮಂತ್ರಿ ಬಳಿ ಚರ್ಚಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಪಿ.ಟಿ. ಪರಮೇಶ್ವರನಾಯ್ಕ ಭರವಸೆ ನೀಡಿದ್ದಾರೆ.
ಶನಿವಾರ ಸಂಜೆ ಹಗರಿಬೊಮ್ಮನಹಳ್ಳಿ ಪಟ್ಟಣದ ಶ್ರೀಹಗರಿ ಅಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ ಆಯೋಜಿಸಿದ್ದ ಬಿಡಿಸಿಸಿ ಬ್ಯಾಂಕ್ ಸ್ಥಳೀಯ ಶಾಖೆಯ ಅತಿಥಿಗೃಹದ ಶಂಕುಸ್ಥಾಪನೆ ಸಮಾರಂಭದಲ್ಲಿ ಮಾತನಾಡಿದ ಸಚಿವರು, ಈ ಭಾಗದಲ್ಲಿ ಮಾಲ್ವಿ ಡ್ಯಾಂಗೆ ನೀರು ತುಂಬಿಸಬೇಕೆಂಬ ಬೇಡಿಕೆ ಬಹುದಿನಗಳಿಂದಲೂ ಇದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿನ ರಾಜ್ಯ ಸರ್ಕಾರ ರೈತ ಪರವಾದ ಕಾಳಜಿ ಹೊಂದಿದ್ದು, ಈ ದಿಸೆಯಲ್ಲಿ ಖಂಡಿತವಾಗಿ ಮಾಲ್ವಿ ಜಲಾಶಯಕ್ಕೆ ತಳಕಲ್ಲು ಕೆರೆಯ ಮೂಲಕ ನೀರು ತುಂಬಿಸುವ ಯೋಜನೆ ಜಾರಿಗೊಳಿಸಿ, ಈ ಭಾಗದಲ್ಲಿ ನೀರಾವರಿ ಕ್ರಾಂತಿಗೆ ಮುನ್ನುಡಿ ಬರೆಯುವ ವಿಶ್ವಾಸವಿದೆ ಎಂದರು.
ರೈತರ ಮೇಲಿನ ಕೇಸ್: ಸಮರ್ಪಕ ವಿದ್ಯುತ್ ಪೂರೈಕೆಗಾಗಿ ಜೆಸ್ಕಾಂ ಕಚೇರಿ ಬಳಿ ಪ್ರತಿಭಟಿಸಿದ ಕಡ್ಲಬಾಳು ಗ್ರಾಮದ 30 ರೈತರ ಮೇಲೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಹಾಕಿರುವ ಕೇಸ್‌ನ್ನು ವಜಾಗೊಳಿಸಬೇಕೆಂದು ರೈತರು ಮನವಿ ಮಾಡಿದ್ದಾರೆ. ಮುಖ್ಯಮಂತ್ರಿಯವರನ್ನು ಭೇಟಿಯಾಗಿ ಈ ಬಗ್ಗೆ ಚರ್ಚಿಸಿ, ಕೇಸ್ ವಾಪಸ್ ಪಡೆಯಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು.
ಇದಕ್ಕೂ ಮುನ್ನ ಬ್ಯಾಂಕಿನ ಆವರಣದಲ್ಲಿ ನೂತನ ಅತಿಥಿಗೃಹ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೇರವೇರಿಸಲಾಯಿತು.
ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ, ಹರಪನಹಳ್ಳಿ ಕ್ಷೇತ್ರದ ಶಾಸಕ ಎಂ.ಪಿ. ರವೀಂದ್ರ ಅಧ್ಯಕ್ಷತೆಯಲ್ಲಿ ಜರುಗಿದ ಸಮಾರಂಭದಲ್ಲಿ ಬ್ಯಾಂಕಿನ ಉಪಾಧ್ಯಕ್ಷ ಡಿ. ಭೋಗಾರೆಡ್ಡಿ, ನಿರ್ದೇಶಕರಾದ ಬಾತಿಚೌಡಪ್ಪ, ಆರ್. ಮಂಜುನಾಥಗೌಡ, ಕೊಳೂರು ಮಲ್ಲಿಕಾರ್ಜುನಗೌಡ, ತಾಪಂ ವಿಜಯಲಕ್ಷ್ಮಿ ಪೂರ್ಯನಾಯ್ಕ, ಉಪಾಧ್ಯಕ್ಷೆ ನಾಗರತ್ನಾ ವೆಂಕಟೇಶ್, ಕಾಂಗ್ರೆಸ್ ಮುಖಂಡ ಹೆಗ್ಡಾಳ ರಾಮಣ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುಟುಗನಹಳ್ಳಿ ಕೊಟ್ರೇಶ್, ಇಟಿಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಐಗೋಳ ಚಿದಾನಂದ, ಗ್ರಾಪಂ ಸದಸ್ಯೆ ಎಂ.ಪಿ. ರುದ್ರಮ್ಮ, ಸಹಕಾರ ಸಂಘಗಳ ಉಪನಿಬಂಧಕ ಡಾ. ಜಿ. ಉಮೇಶ ಭಾಗವಹಿಸಿದ್ದರು. ಬ್ಯಾಂಕಿನ ಮುಖ್ಯಕಾರ್ಯನಿರ್ವಹಕಾಧಿಕಾರಿ ವೈ. ರಂಗಪ್ಪ ನಿರೂಪಿಸಿದರು.