ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

3 ಕುಡಿವ ನೀರು ಯೋಜನೆಗೆ ಗ್ರೀನ್‌ಸಿಗ್ನಲ್

Mainashree
Updated On : 23 Jul 2013, 11:11 am

ಹಗರಿಬೊಮ್ಮನಹಳ್ಳಿ: ಪಕ್ಕದಲ್ಲಿಯೇ ತುಂಗಭದ್ರಾ ಜಲಾಶಯದ ಹಿನ್ನೀರಿದ್ದರೂ ಕುಡಿವ ನೀರಿಗಾಗಿ ಪರಿತಪಿಸುತ್ತಿರುವ ಬಿಸಿಲೂರಿನ ಜನತೆಗೆ ವರ್ಷಪೂರ್ತಿ ಪರಿಶುದ್ಧವಾದ ಕುಡಿವ ನೀರನ್ನು ಪೂರೈಸಲು ಈಗ ರಾಜ್ಯ ಸರ್ಕಾರ ಮನಸ್ಸು ಮಾಡಿದೆ. ಇದಕ್ಕಾಗಿಯೇ ರು. 66.50 ಕೋಟಿ ವೆಚ್ಚದಲ್ಲಿ 80 ಹಳ್ಳಿಗಳಿಗೆ ಹಿನ್ನೀರಿನಿಂದ ಕುಡಿವ ನೀರು ಪೂರೈಕೆ ಮಾಡುವ ಮೂರು ಯೋಜನೆಗಳ ಜಾರಿಗೆ ಗ್ರೀನ್‌ಸಿಗ್ನಲ್ ಕೊಟ್ಟಿದೆ.
ಈಗಾಗಲೇ ಆಡಳಿತಾತ್ಮಕ, ತಾಂತ್ರಿಕ ಮತ್ತು ಯೋಜನೆ ವಿನ್ಯಾಸ ಮಂಜೂರಾತಿ ದೊರಕಿದ್ದು, ಕಾಮಗಾರಿ ಆರಂಭಕ್ಕೆ ಟೆಂಡರ್ ಕರೆಯುವ ಪ್ರಕ್ರಿಯೆ ಮಾತ್ರ ಬಾಕಿ ಇದೆ. 2014ರ ಸುಮಾರಿಗೆಲ್ಲ ತುಂಗಭದ್ರೆ ಬಿಸಿಲೂರಿನ 80 ಹಳ್ಳಿಗಳ ಜನತೆಯ ದಾಹ ಶಾಶ್ವತವಾಗಿ ನಿವಾರಣೆಯಾಗುವ ಸಾಧ್ಯತೆ ಇದೆ.
ಎಲ್ಲೆಲ್ಲಿ: 2032ನೇ ಇಸ್ವಿ ಜನಸಂಖ್ಯೆ ಅಂದಾಜಿಸಿ 80 ಹಳ್ಳಿಗಳಿಗೆ ಈ ಯೋಜನೆಗಳನ್ನು ರೂಪಿಸಲಾಗಿದೆ. ದಶಮಾಪುರ ಯೋಜನೆಗೆ ತಾಲೂಕಿನ ನಾರಾಯಣದೇವರಕೆರೆ ಗ್ರಾಮದ ಬಳಿ ಜಾಕ್‌ವೆಲ್ ನಿರ್ಮಿಸಿ, ಹಂಪಾಪಟ್ಟಣ ಗ್ರಾಮದ ಹತ್ತಿರ 6.50 ಎಂಎಲ್‌ಡಿ ಸಾಮರ್ಥ್ಯದ ನೀರಿನ ಶುದ್ಧೀಕರಣ ಘಟಕ ನಿರ್ಮಿಸಿ, ವ್ಯಾಸಪುರ ತಾಂಡಾ, ಆನೆಕಲ್ ತಾಂಡಾದ ಬಳಿ ನೀರು ಸಂಗ್ರಹಣ ತೊಟ್ಟಿಯಿಂದ ಯೋಜನೆಯ ವ್ಯಾಪ್ತಿಗೆ ಒಳಪಡುವ ಗ್ರಾಮಗಳಿಗೆ ನೀರು ಪೂರೈಸಿದರೆ, ಇತ್ತ ಸೊನ್ನ ಯೋಜನೆಗೆ ಬಸರಕೋಡು ಗ್ರಾಮದ ಬಳಿ 6.34 ಎಂಎಲ್‌ಡಿ ಸಾಮರ್ಥ್ಯದ ಶುದ್ಧೀಕರಣ ಘಟಕ, ಸೊನ್ನದ ಹತ್ತಿರವೇ ನೀರು ಸಂಗ್ರಹಣ ತೊಟ್ಟಿ ಹಾಗೂ ಬಸರಕೋಡು ಯೋಜನೆಗೆ ಬಸರಕೋಡು ತಾಂಡಾದ ಬಳಿ 6.34 ಎಂಎಲ್‌ಡಿ ಸಾಮರ್ಥ್ಯದ ಶುದ್ಧೀಕರಣ ಘಟಕ, ತಾಂಡಾದ ಹತ್ತಿರವೇ ನೀರು ಸಂಗ್ರಹಣ ತೊಟ್ಟಿ ನಿರ್ಮಿಸಿ ಅಲ್ಲಿಂದ ನೀರು ಪೂರೈಕೆ ಮಾಡಲಾಗುತ್ತದೆ.
ಯಾವ ಹಳ್ಳಿಗಳಿಗೆ ಹಿನ್ನೀರು: ದಶಮಾಪುರ ಯೋಜನೆಗೆ ತಾಲೂಕಿನ ಬಿ. ಮುತ್ಕೂರು, ಹನಸಿ, ಕಲ್ಲಹಳ್ಳಿ, ಕಲ್ಲಹಳ್ಳಿ ತಾಂಡಾ, ಕಣವಿನಾಯಕನಹಳ್ಳಿ, ಬೆಣಕಲ್, ಉಪ್ಪಾರಗಟ್ಟಿ, ಮಾದೂರು, ಪಿಲ್ಲೋಬನಹಳ್ಳಿ, ವಟ್ಟಮನಹಳ್ಳಿ, ವರಲಹಳ್ಳಿ, ಆನೆಕಲ್, ಆನೆಕಲ್‌ತಾಂಡಾ, ದಶಮಾಪುರ, ಮೆಟ್ರಿ, ಹೊಸಕೇರಿ, ನಾಣ್ಯಾಪುರ, ಕಟ್ಟೆಹೊಲತಾಂಡಾ, ಮಾಗಿಮಾವಿನಹಳ್ಳಿ, ಹಲಗಾಪುರ, ಆರ್. ಒಬಾಳಪುರ, ಗುಳೆದಾಳ್, ರಾಯರಾಳುತಾಂಡಾ, ವ್ಯಾಸಪುರತಾಂಡಾ, ಕೇಶವರಾಯನಬಂಡಿ, ಬಲ್ಲಾಹುಣ್ಸಿ, ಬಂಡಿಹಳ್ಳಿ, ವಲ್ಲಭಾಪುರ, ಚಿಂತ್ರಪಳ್ಳಿ.
ಸೊನ್ನ ಯೋಜನೆಗೆ ತಾಲೂಕಿನ ಸಕ್ರಹಳ್ಳಿ, ಸೊನ್ನ, ಮೋರಗೇರಿ, ಗದ್ದಿಕೇರಿ, ಗಿರೆಗೊಂಡನಹಳ್ಳಿ, ಹನುಮಗೊಂಡನಹಳ್ಳಿ, ಯಲುಬುಗೊಂಡನಹಳ್ಳಿ, ಕೊಂಡೆನಹಳ್ಳಿ, ಬನ್ನಿಕಲ್ಲು, ನಂದಿಪುರ, ಬ್ಯಾಸಿಗಿದೇರಿ, ಹೊಸಮುಟುಗನಹಳ್ಳಿ, ಶಿವಾನಂದನಗರ, ಹಳೇಮುಟುಗನಹಳ್ಳಿ, ಹರೆಗೊಂಡನಹಳ್ಳಿ, ಮಾಲವಿ, ಎಂ.ಬಿ. ಕಾಲನಿ, ಉಲುವತ್ತಿ, ನೆಲ್ಕುದ್ರಿ, ಹಳೇನೆಲ್ಕುದ್ರಿ, ಹಂಚಿನಾಳ, ಚಿಮ್ಮನಹಳ್ಳಿ, ಕನ್ನಿಹಳ್ಳಿ.
ಬಸರಕೋಡು ಯೋಜನೆಗೆ ಬಸರಕೋಡು, ಬಸರಕೋಡುತಾಂಡಾ, ಕೃಷ್ಣಾಪುರ, ತಂಬ್ರಹಳ್ಳಿ, ಬನ್ನಿಗೊಳ, ಸಿಗೇನಹಳ್ಳಿ 1, 2, 3ನೇ ಕಾಲನಿಗಳು, ಬಂಡಿಕ್ಯಾಂಪ್, ಉತ್ತರತಂಬ್ರಹಳ್ಳಿ, ತೆಲಗೊಳಿ, ಕಿತ್ನೂರು, ಮುತ್ಕೂರು, ಜಿ. ಕೋಡಿಹಳ್ಳಿ ಏಣಿಗಿ, ಏಣಿಗಿಬಸಾಪುರ, ಹಂಪಾಸಾಗರ-1, 2, 3ನೇ ಕಾಲನಿಗಳು, ನಾಗಲಾಪುರ, ನಾಗಲಾಪುರತಾಂಡಾ, ಚಿಲಗೊಡು, ಯಡ್ರಮ್ಮನಹಳ್ಳಿ, ಹಗರಿಕ್ಯಾದಿಗಿಹಳ್ಳಿ, ಹಿರೆಸೋಬಟಿ, ಚಿಕ್ಕಸೋಬಟಿ, ಓಬಳಾಪುರ, ಕಾತ್ಯಾಯಿನಿಮರಡಿ ಗ್ರಾಮಗಳು ಸೇರುತ್ತವೆ.
ಬಿಸಿಲೂರಿನಲ್ಲಿ ಕೊಳವೆ ಬಾವಿಯೇ ಕುಡಿಯುವ ನೀರಿನ ಪ್ರಮುಖ ಮೂಲ. ಶೇ. 80ರಷ್ಟು ಕೊಳವೆಬಾವಿಗಳಲ್ಲಿನ ನೀರಿನಲ್ಲಿ ವಿವಿಧ ರಾಸಾಯನಿಕ ಹಾಗೂ ಫ್ಲೋರೈಡ್ ಅಂಶವೇ ಯಥೇಚ್ಛವಾಗಿದ್ದು, ಈ ನೀರು ಕುಡಿಯಲು ಯೋಗ್ಯವಾಗಿಲ್ಲ ಎಂದು ಪಂಚಾಯತ್ ರಾಜ್ ಎಂಜಿನಿಯರಿಂಗ್ ಇಲಾಖೆ ಸರ್ಕಾರಕ್ಕೆ ಸಲ್ಲಿಸಿರುವ ವರದಿಯಲ್ಲಿ ದಾಖಲಿಸಿದೆ. ಅಂತರ್ಜಲ ಕ್ಷೀಣಿಸಿ, ಇಲ್ಲವೆ ಸಂಪೂರ್ಣ ಬತ್ತಿ ಹೋಗುವುದರಿಂದ ಸಮಸ್ಯೆ ಇನ್ನಷ್ಟು ಉಲ್ಬಣವಾಗುತ್ತದೆ. ಬಹುತೇಕ ಸಲ ಬಿಂದಿಗೆ ನೀರಿಗಾಗಿ ಗಂಟೆಗಟ್ಟಲೆ ಕಾಯುವಂತಹ ಪರಿಸ್ಥಿತಿ ಉದ್ಬವಿಸುತ್ತದೆ. ಹೀಗಾಗಿ ಸರ್ಕಾರ ಈಗ ಹಿನ್ನೀರಿನ ಮೂಲಕ ಬಿಸಿಲೂರಿನ ಜನತೆಯ ನೀರಿನ ದಾಹವನ್ನು ಶಾಶ್ವತವಾಗಿ ನಿವಾರಿಸಲು ಮುಂದಾಗಿರುವುದು ತಾಲೂಕಿನ ಜನತೆಯಲ್ಲಿ ಹೊಸನಿರೀಕ್ಷೆಹುಟ್ಟಿಸಿದೆ.

 ಹುಳ್ಳಿಪ್ರಕಾಶ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement