ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಜನಭಾಷೆ ಸಾಹಿತ್ಯ ನಿಜವಾದ ಸಾಹಿತ್ಯ

Mainashree
Updated On : 23 Jul 2013, 11:10 am

ಬಳ್ಳಾರಿ:  ಸಾಹಿತ್ಯ ಕೇವಲ ಸಾಹಿತ್ಯವಲ್ಲ. ಅದೊಂದು ದೀರ್ಘಕಾಲಿಕ ಹೋರಾಟ. ಅದು ಹೊಸ ಸಮಾಜದ ಚಿಂತನೆಗೆ ನಾಂದಿಯಾಗುವುದು. ಜನಭಾಷೆಯ ಸಾಹಿತ್ಯವೇ ನಿಜವಾದ ಸಾಹಿತ್ಯ, ಅದು ಹೋರಾಟ ಮತ್ತು ಬಿಡುಗಡೆಯ ಉಪಕರಣವೆಂದು ಸಾಹಿತಿ ಡಾ. ಮೊಗಳ್ಳಿ ಗಣೇಶ ಅಭಿಪ್ರಾಯಪಟ್ಟರು.
ಪ್ರಜ್ಞೆ ಪ್ರತಿಷ್ಠಾನವು ನಗರದ ಮುಂಡ್ಲೂರ್ ರಾಮಪ್ಪ ಸಭಾಭವನದಲ್ಲಿ ಭಾನುವಾರ ಏರ್ಪಡಿಸಿದ್ದ ಮಹನೀಯರೊಂದಿಗೆ ಮಾತುಕತೆ ಸಮಾರಂಭದಲ್ಲಿ ಅವರು ಮಾತನಾಡಿದರು. ದುಃಖವಿಲ್ಲದಿದ್ದರೆ ಸಾಹಿತ್ಯ ಸೃಷ್ಟಿಯಾಗುವುದಿಲ್ಲ. ಸುಖವೆಂಬುದು ಕೇವಲ ಕ್ಷಣಿಕ. ಅದಕ್ಕೆ ಜಗತ್ತಿನ ಅನುಭವವಿರುವುದಿಲ್ಲ. ದುಃಖಿಯಾದವನಿಗೆ ಜಗತ್ತು ಅರ್ಥವಾಗುತ್ತದೆ. ನೊಂದು ಬೆಂದವರೆಲ್ಲ ಅರ್ಥವಾಗುತ್ತಾರೆ. ಸಾಹಿತ್ಯಕ್ಕೆ ದುಃಖವೇ ಪ್ರಮಾಣ. ಸುಖದ ಕುಟುಂಬಗಳು ಒಂದೇ ತೆರನಾಗಿರುತ್ತವೆ. ಆದರೆ, ದುಃಖ ಒಂದೇ ರೀತಿಯಾಗಿರುವುದಿಲ್ಲ ಎಂದು ಹೇಳಿದರು.
ಅಂತರಂಗವನ್ನು ತಟ್ಟುವ ಸಾಹಿತ್ಯವೆಂದರೆ, ಹಸಿವಿನಲ್ಲಿ ಒದ್ದಾಡುತ್ತಿರುವವರ  ಬದುಕನ್ನು ಬಿಂಬಿಸುವಂತದ್ದು, ಬರಹಗಾರನಿಗೆ ದುಃಖವೇ ಕೈದೀವಿಗೆ. ಭೂಮಿಗೆ ಬಿದ್ದ ಬೀಜ, ಎದೆಗೆ ಬಿದ್ದ ಅಕ್ಷರ ಯಾವತ್ತು ನಶಿಸುವುದಿಲ್ಲ. ಅದು ಚಿಗುರೊಡೆದು ಬೆಳೆದು ನಿಲ್ಲುವುದು. ಬೆಟ್ಟದಲ್ಲಿ ಹಚ್ಚಿದ ದೀಪ, ಗರ್ಭಗುಡಿಯಲ್ಲಿರುವ ದೀಪ ಎರಡು ಒಂದೇ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ದಲಿತ ಸಂಘರ್ಷ ಸಮಿತಿಯ ರಾಜ್ಯ  ಸಂಚಾಲಕ ಮುಂಡ್ರಿಗಿ ನಾಗರಾಜ್, ಬುದ್ಧ, ಬಸವ, ಗಾಂಧಿ, ಅಂಬೇಡ್ಕರ್ ಅವರ ಪ್ರೀತಿ, ಕರುಣೆ, ಮೈತ್ರಿಯಿಂದ ಮಾತ್ರ ಜಗತ್ತಿಗೆ ಶಾಂತಿ ಲಭಿಸಬಲ್ಲದು. ಕಾಯಕದ ಪರಿಕಲ್ಪನೆ ಮೊಟ್ಟ ಮೊದಲಿಗೆ ಹೇಳಿದ ಬಸವಣ್ಣ ವಿಶ್ವಕ್ಕೆ ಮಾದರಿ. ಇವರ ತತ್ವಗಳು ಸಾರ್ವಕಾಲಿಕ ಎಂದರು. ಕರವೇ ಜಿಲ್ಲಾಧ್ಯಕ್ಷ ಜೆ.ಎಂ. ಬಸವರಾಜಸ್ವಾಮಿ, ಸ್ನೇಹ ಸಂಪುಟದ ಅಧ್ಯಕ್ಷ ಕಲ್ಲುಕಂಭ ಪಂಪಾಪತಿ, ಪ್ರಜ್ಞೆ ಪ್ರತಿಷ್ಠಾನದ ಅಧ್ಯಕ್ಷ ಸಿದ್ದರಾಮ ಕಲ್ಮಠ, ಪ್ರಧಾನ ಕಾರ್ಯದರ್ಶಿ ವೆಂಕಟೇಶ ಉಪ್ಪಾರ, ಎಚ್.ಕೆ. ಗೌರಿಶಂಕರ್, ಕೋಳೂರು ಚಂದ್ರಶೇಖರ್‌ಗೌಡ, ವೈ. ಹನುಮಂತರೆಡ್ಡಿ, ಎನ್.ಎಂ. ಗಿರಿಜಾಪತಿ, ಬಾದಮಿ ಶಿವಲಿಂಗ, ಗೋವರ್ಧನ್‌ರೆಡ್ಡಿ, ಬಿ.ಎಂ. ಸಿದ್ದೇಶ್, ಇತರರು ಇದ್ದರು ವಾಸುದೇವ ಪ್ರಾರ್ಥಿಸಿದರು. ರಫೀಕ ಸಿಡಿಗಿನಮೊಳೆ ಪ್ರಾಸ್ತಾವಿಕ ಮಾತನಾಡಿದರು. ಸಹ ಕಾರ್ಯದರ್ಶಿ ಟಿ.ಎಂ. ಪಂಪಾಪತಿ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement