ಟಿಬಿ ಡ್ಯಾಂ: 10 ಗೇಟ್ಗಳಿಂದ ನದಿಗೆ ನೀರು
ಮುನಿರಾಬಾದ್: ತುಂಗಭದ್ರಾ ಜಲಾಶಯ ಬಹುತೇಕ ಭರ್ತಿಯಾಗಿದ್ದು, ಸೋಮವಾರ ಜಲಾಶಯಕ್ಕೆ ಸುಮಾರು 85,000 ಕ್ಯುಸೆಕ್ ನೀರು ಹರಿದು ಬಂದಿದ್ದು, ಜಲಾಶಯದ ನೀರಿನ ಮಟ್ಟವು 1631.83 ಅಡಿಗಳಿಗೆ ತಲುಪಿದ್ದರಿಂದ 10 ಗೇಟುಗಳ ಮೂಲಕ ನದಿಗೆ 15,000 ಕ್ಯುಸೆಕ್ ನೀರನ್ನು ಹರಿಸಲಾಯಿತು.
ಸೋಮವಾರ ಬೆಳಗ್ಗೆ 10ಕ್ಕೆ ತುಂಗಭದ್ರಾ ಮಂಡಳಿಯ ಕಾರ್ಯಪಾಲಕ ಅಭಿಯಂತರಾದ ಇಂಗ್ಲಳ್ಳಿ ಅವರು ಜಲಾಶಯಕ್ಕೆ ಪೂಜೆ ಸಲ್ಲಿಸಿದರು. ಬಳಿಕ ಜಲಾಶಯದ 33 ಗೇಟುಗಳ ಪೈಕಿ 10 ಗೇಟುಗಳನ್ನು 1 ಅಡಿ ಎತ್ತರಕ್ಕೆ ಎತ್ತಿ ಜಲಾಶಯದಿಂದ 15,000 ಕ್ಯುಸೆಕ್ ನೀರನ್ನು ಹರಿಸಲಾಯಿತು. ಸಂಜೆ 4 ಗಂಟೆಗೆ ಸುಮಾರಿಗೆ 10 ಗೇಟುಗಳನ್ನು 1.5 ಅಡಿ ಎತ್ತರಕ್ಕೆ ತೆಗೆದು ಜಲಾಶಯದಿಂದ ನದಿಗೆ ಸುಮಾರು 22,300 ಕ್ಯುಸೆಕ್ ನೀರನ್ನು ಹರಿಸಲಾಗಿದೆ.
ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ಭರ್ತಿ: ಪ್ರಸಕ್ತ ಸಾಲಿನಲ್ಲಿ ಜೂನ್ ತಿಂಗಳಲ್ಲಿ ಜಲಾಶಯಕ್ಕೆ ಹರಿದು ಬಂದ ನೀರಿನ ಪ್ರಮಾಣ ತೀರ ಕಡಿಮೆ. ಆದರೆ, ಜುಲೈ ತಿಂಗಳಲ್ಲಿ ಸುಮಾರು 20 ದಿನದಲ್ಲಿ ಜಲಾಶಯಕ್ಕೆ ವ್ಯಾಪಕ ಪ್ರಮಾಣದಲ್ಲಿ ನೀರು ಹರಿದು ಬಂದ ಹಿನ್ನೆಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಜಲಾಶಯವು ಬೇಗನೆ ಭರ್ತಿಯಾಯಿತು. ಕಳೆದ ವರ್ಷ ಜಲಾಶಯವು ಸೆಪ್ಟೆಂಬರ್ 2 ರಂದು ಭರ್ತಿಯಾಗಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಸಕ್ತ ಸಾಲಿನಲ್ಲಿ ಜಲಾಶಯವು 42 ದಿನ ಮುಂಚಿತವಾಗಿ ಭರ್ತಿಯಾಗಿರುತ್ತದೆ.
ನೀರಿನ ಮಟ್ಟದಲ್ಲಿ ಅಜಗಜಾಂತರ: ಕಳೆದ ವರ್ಷ ಇದೇ ದಿನದಂದು ಜಲಾಶಯದ ನೀರಿನ ಮಟ್ಟವು 1595.27 ಅಡಿಗಳಿತ್ತು ಹಾಗೂ ಜಲಾಶಯಕ್ಕೆ ಹರಿದು ಬರುತ್ತಿರುವ ನೀರಿನ ಪ್ರಮಾಣ ಕೇವಲ 3956 ಕ್ಯುಸೆಕ್ ಮತ್ತು ಜಲಾಶಯದಲ್ಲಿ 14 ಟಿಎಂಸಿ ನೀರು ಶೇಖರಣೆಯಾಗಿತ್ತು. ಆದರೆ, ಪ್ರಸಕ್ತ ಸಾಲಿನಲ್ಲಿ ಜಲಾಶಯದ ನೀರಿನ ಮಟ್ಟ 1631.83ಗಳಿತ್ತು. ಜಲಾಶಯದಲ್ಲಿ 96 ಟಿಎಂಸಿ ನೀರು ಶೇಖರಣೆಯಾಗಿದೆ. ಒಳಹರಿವು ಸುಮಾರು 85,000 ಕ್ಯುಸೆಕ್ ತಲುಪಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಸ್ತುತ ಸಾಲಿನಲ್ಲಿ ಜಲಾಶಯದಲ್ಲಿ ಸುಮಾರು 27 ಅಡಿಗಳಷ್ಟು ಅಧಿಕ ನೀರು ಸಂಗ್ರಹವಾಗಿದೆ. ಪ್ರಸಕ್ತ ಸಾಲಿನಲ್ಲಿ ಜಲಾಶಯಕ್ಕೆ ಸುಮಾರು 150 ಟಿಎಂಸಿ ನೀರು ಹರಿದು ಬರುವ ಸಾಧ್ಯತೆಗಳಿದೆ ಎಂದು ಸಿಡಬ್ಲ್ಯುಸಿ ಅಂದಾಜಿಸಿದೆ.
ರೈತರಲ್ಲಿ ಸಂತಸ: ಪ್ರಸಕ್ತ ಸಾಲಿನಲ್ಲಿ ಜುಲೈ 10ರಂದು ಕಾಲುವೆಯಲ್ಲಿ ನೀರನ್ನು ಹರಿಸಲಾಗಿತ್ತು. ಕಳೆದ ವರ್ಷ ಸಮರ್ಪಕ ಮಳೆ ಇಲ್ಲದ ಕಾರಣ ಆಗಸ್ಟ್ ತಿಂಗಳಲ್ಲಿ ಕಾಲುವೆಗಳಿಗೆ ನೀರನ್ನು ಹರಿಸಲಾಗಿತ್ತು. ಈ ವರ್ಷ ಜಲಾಶಯ ಬೇಗನೆ ಭರ್ತಿಯಾಗಿದೆ ಎಂದು ಸಿರುಗುಪ್ಪದ ರೈತರಾದ ರಾಮಾಜನೇಯ ರೆಡ್ಡಿ 'ಕನ್ನಡಪ್ರಭ'ಕ್ಕೆ ತಿಳಿಸಿದ್ದಾರೆ.
ನೀರು ಲಭ್ಯ: ಜಲಾಶಯದಲ್ಲಿ ನೀರಿನ ಶೇಖರಣೆ ಉತ್ತಮವಾಗಿದ್ದು, ಪ್ರಸಕ್ತ ಸಾಲಿನಲ್ಲಿ ಹಿಂಗಾರು ಬೆಳೆಗಳಿಗೂ ನೀರು ಲಭ್ಯವಾಗಲಿದೆ ಎಂಬ ಆಶಾಭಾವ ರೈತರಲ್ಲಿ ಮೂಡಿದೆ.
ಸುರಕ್ಷಿತ ಸ್ಥಳಕ್ಕೆ ತೆರಳಿ...
ಬಳ್ಳಾರಿ: ತುಂಗಭದ್ರಾ ಜಲಾಶಯವು ಭರ್ತಿಯಾಗುವ ಸಂಭವವಿದ್ದು, ಜಲಾಶಯದ ಕೆಳಭಾಗದ ನದಿ ಪಾತ್ರದಲ್ಲಿರುವ ಸಾರ್ವಜನಿಕರು ತಮ್ಮ ಜನ-ಜಾನುವಾರುಗಳೊಂದಿಗೆ ಸುರಕ್ಷಿತ ಸ್ಥಳಕ್ಕೆ ತೆರಳಬೇಕೆಂದು ತುಂಗಭದ್ರಾ ಯೋಜನಾ ವೃತ್ತದ ಅಧೀಕ್ಷಕ ಎಂಜಿನಿಯರ್ ಎಸ್.ಎಚ್. ಮಂಜಪ್ಪ ಮನವಿ ಮಾಡಿದ್ದಾರೆ. ಜಲಾಶಯದ ಗರಿಷ್ಠ ಮಟ್ಟ 1633 ಅಡಿ ಇದ್ದು, ಈಗಾಗಲೇ 1629 ಅಡಿ ನೀರು ಸಂಗ್ರಹವಾಗಿದೆ. ಜಲಾನಯನ ಪ್ರದೇಶದಲ್ಲಿ ಮಳೆಯಾಗುತ್ತಿರುವುದರಿಂದ ಜಲಾಶಯಕ್ಕೆ 65 ಸಾವಿರ ಕ್ಯುಸೆಕ್ ನೀರಿನ ಒಳಹರಿವಿದೆ. ಒಳಹರಿವಿನ ಪ್ರಮಾಣ ಹೆಚ್ಚಾಗುವ ಸಂಭವವಿರುವುದರಿಂದ ಜಲಾಶಯದ ಹೆಚ್ಚುವರಿ ನೀರನ್ನು ಯಾವ ಮುನ್ಸೂಚನೆಯಿಲ್ಲದೆ ಹೊರ ಬಿಡಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.