ನೌಕರರ ಸಂಘದ ಚುನಾವಣೆ: ಬಿರುಸಿನ ಮತದಾನ
ಹೂವಿನಹಡಗಲಿ: ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಶಾಖೆ ಮತ್ತು ಯೋಜನಾ ಘಟಕಗಳ ಕಾರ್ಯಕಾರಿ ಸಮಿತಿಗೆ ಸೋಮವಾರ ಚುನಾವಣೆ ಶಾಂತಿಯುತವಾಗಿ ನಡೆಯಿತು.
ಬೆಳಗ್ಗೆ 11ರಿಂದ ಆರಂಭವಾದ ಮತದಾನ ಪ್ರಕ್ರಿಯೆಯಲ್ಲಿ ವಿವಿಧ ಇಲಾಖೆಗಳ ಸರ್ಕಾರಿ ನೌಕರರು ಉತ್ಸಾಹದಿಂದ ಮತಹಾಕಿದ್ದು, ನೌಕರರ ಸಂಘದ ಕಚೇರಿಯಲ್ಲಿ ಕಾಲೇಜು ವಿಭಾಗ, ಆರೋಗ್ಯ, ನ್ಯಾಯಾಂಗ ಮತ್ತು ಲೋಕೋಪಯೋಗಿ ಇಲಾಖೆಗೆ ಪ್ರತ್ಯೇಕವಾಗಿ 4 ಮತಗಟ್ಟೆ ತೆರೆಯಲಾಗಿತ್ತು. ಎಸ್ಪಿವಿ ಶಾಲೆಯಲ್ಲಿ ಪ್ರಾಥಮಿಕ ಶಾಲೆಗೆ 2 ಮತ್ತು ಪ್ರೌಢಶಾಲಾ ವಿಭಾಗಕ್ಕೆ 1 ಮತಗಟ್ಟೆ ತೆರೆಯಲಾಗಿತ್ತು.
ತಾಲೂಕು ಶಾಖೆಯ 35 ಸ್ಥಾನಗಳಲ್ಲಿ 23 ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದು, 6 ಕ್ಷೇತ್ರಗಳಿಂದ 12 ಸ್ಥಾನಗಳಿಗೆ 26 ನೌಕರರು ಸ್ಪರ್ಧಾಕಣದಲ್ಲಿದ್ದಾರೆ. ಪ್ರಾಥಮಿಕ ಶಿಕ್ಷಣ ಇಲಾಖೆ ಕ್ಷೇತ್ರದ 3 ಸ್ಥಾನಗಳಿಗೆ ಕೌಶಲ್ಯ, ವಿ.ಬಿ. ಜಗದೀಶ, ಎಚ್.ಡಿ. ಜಗ್ಗಿನ್, ಜಿ.ನಾಗರಾಜ, ಜೆ.ನಾಗೇಂದ್ರಪ್ಪ, ಎಚ್.ಎಂ. ಬಸವರಾಜಯ್ಯ, ಜಿ. ಮಲ್ಲಿಕಾರ್ಜುನಗೌಡ, ಸಿ.ವಿಶ್ವನಾಥ, ಟಿ.ಜಿ. ಶಿವರಾಮಪ್ಪ ಸ್ಪರ್ಧಿಸಿದ್ದರು. ಆರೋಗ್ಯ ಇಲಾಖೆ ಕ್ಷೇತ್ರದ 4 ಸ್ಥಾನಗಳಿಗೆ ಕೆ.ಆನಂದ, ಎನ್.ನಂಜುಂಡಪ್ಪ, ಎಂ.ಪ್ರಕಾಶ, ಸಿ.ಸಿ. ಪ್ರೇಮಾ, ಆರ್.ಡಿ. ಯೋಗೇಂದ್ರನಾಯ್ಕ, ಟಿ. ವಿಶ್ವನಾಥ ನಾಯಕ, ವಿ.ಶಶಿಧರ, ವೈ. ಶಿವಕುಮಾರ ಸ್ಪರ್ಧಿಸಿದ್ದಾರೆ. ಕಾಲೇಜು ಶಿಕ್ಷಣ ಇಲಾಖೆಯ 1ಸ್ಥಾನಕ್ಕೆ ಹಾಲಿ ಅಧ್ಯಕ್ಷ ಎ.ಕೊಟ್ರಗೌಡ ಮತ್ತು ಎಚ್.ಬಿ. ಷಣ್ಮುಖಪ್ಪ, ಪ್ರೌಢಶಾಲಾ ವಿಭಾಗದ ಸ್ಥಾನಕ್ಕೆ ಜೆ.ಪ್ರಸನ್ನಕುಮಾರ ಮತ್ತು ಕೆ.ಶರಣಬಸಪ್ಪ, ನ್ಯಾಯಾಂಗ ಇಲಾಖೆಯ 1 ಸ್ಥಾನಕ್ಕೆ ಕೆ.ನಾಗರಾಜ ಮತ್ತು ಶಿವಾನಂದ ಬಿ.ತುಕ್ಕಣ್ಣನವರ, ಲೋಕೋಪಯೋಗಿ ಇಲಾಖೆಯ 2 ಸ್ಥಾನಕ್ಕೆ ಜಿ. ಮಹೇಶ, ಮಾರುತಿ ತಟ್ಟಿ, ಜಿ. ಸುಧಾಕರ ಅವರ ನಡುವಿನ ಹಣಾಹಣಿ ಏರ್ಪಟ್ಟಿತ್ತು. ಸೋಮವಾರ ಸಂಜೆ 4.30ರ ಬಳಿಕ ಮತ ಎಣಿಕೆ ಕಾರ್ಯ ನಡೆಸಿ ಫಲಿತಾಂಶ ಪ್ರಕಟಿಸುವುದಾಗಿ ಚುನಾವಣಾಧಿಕಾರಿ ಎಚ್.ಎಂ. ಬೆಟ್ಟಯ್ಯ ತಿಳಿಸಿದ್ದಾರೆ.
ಜಾತಿ, ರಾಜಕೀಯದ ವಾಸನೆ: ಸದ್ಯದ ನೌಕರರ ಚುನಾವಣೆಯಲ್ಲಿಯೂ ಜಾತಿ ಮತ್ತು ರಾಜಕೀಯದ ವಾಸನೆ ಕಂಡು ಬಂದಿದ್ದು, ಮುಕ್ತವಾಗಿರದೇ ಗುಪ್ತವಾಗಿ ಜಾತಿ ಲಾಬಿ ಮಾಡಿ ಮತ ಸೆಳೆಯುವ ತಂತ್ರಗಾರಿಕೆ ನಡೆಯುತ್ತಿದೆ. ಇದಕ್ಕೆ ಪ್ರತಿತಂತ್ರಗಳ ಬಳಕೆಯೂ ನಡೆಯುತ್ತಿದ್ದು ವಿವಿಧ ಇಲಾಖೆ ನೌಕರರ ಮತದಾರ ಯಾರಿಗೆ ಮಣೆ ಹಾಕಿದ್ದಾನೋ ಗೊತ್ತಿಲ್ಲ. ರಾಜ್ಯ ಸರ್ಕಾರಿ ನೌಕರರ ಸಂಘಕ್ಕೆ ನಡೆದ ಚುನಾವಣೆಯು ಸಾರ್ವತ್ರಿಕ ಚುನಾವಣೆಯಂತೆ ರಂಗು ಪಡೆದುಕೊಂಡು ಕಳೆದೊಂದು ವಾರದಿಂದ ಸ್ಪರ್ಧೆಯಲ್ಲಿರುವ ಅಭ್ಯರ್ಥಿಗಳು ಗೆಲುವಿಗಾಗಿ ಬಾಟೂಟ ಸೇರಿದಂತೆ ಸಾರ್ವತ್ರಿಕ ಚುನಾವಣೆಯಲ್ಲಿ ನಡೆಯುವ ಎಲ್ಲ ಪ್ರಹಸನಗಳು ಕಂಡು ಬಂದಿವೆ.
ವಾಹನಗಳಲ್ಲಿ ನೌಕರರನ್ನು ತಂದು ಮತದಾನ ಮಾಡುವ ಪ್ರಕ್ರಿಯೆಯು ನಡೆದಿತ್ತು. ಶಾಂತಿಯುತ ಮತದಾನ ನಡೆಸಲು ಎಲ್ಲ ಅಗತ್ಯ ಕ್ರಮ ಕೈಗೊಂಡಿದ್ದರೂ 100 ಮೀಟರ್ ಅಂತರದಲ್ಲಿ ಮತ್ತು ಅಭ್ಯರ್ಥಿಗಳೇ ಮತಗಟ್ಟೆ ಒಳಗೆ ಹೋಗಿ ತಮಗೆ ಮತ ಹಾಕುವಂತೆ ಮನವೊಲಿಕೆ ಮಾಡಿದ್ದು ಕಂಡುಬಂತು.
ಎಸ್ಪಿವಿ ಸರ್ಕಾರಿ ಶಾಲೆಯಲ್ಲಿ ಶಿಕ್ಷಣ ಇಲಾಖೆಯ ಪ್ರಾಥಮಿಕ ಶಿಕ್ಷಕರ ಮತಗಟ್ಟೆಗೆ ಸಂಬಂಧಿಸಿದಂತೆ ಮತದಾನ ಮಾಡಲು ಬಂದಿದ್ದ ಶಿಕ್ಷಕರಿಗೆ ಪಟ್ಟಣದ ಮೈಲಾರಲಿಂಗೇಶ್ವರ ದೇವಸ್ಥಾನದ ಹತ್ತಿರ ಶಾಮಿಯಾನ ಹಾಕಿ ಚಿತ್ರಾನ್ನ ಮಾಡಿಸಿದ್ದರು. ಒಟ್ಟಾರೆ 4 ಮತಗಟ್ಟೆಗಳಲ್ಲಿಯೂ ನೌಕರರು ಗುಂಪು ಗುಂಪಾಗಿದ್ದು, ತಮ್ಮ ತಮ್ಮ ಬೆಂಬಲಕ್ಕಿರುವ ನೌಕರರ ಪರ ಮತಯಾಚನೆ ಮಾಡುವ ದೃಶ್ಯ ಸಾಮಾನ್ಯವಾಗಿತ್ತು.