ಸುದ್ದಿ ಸಂಕ್ಷೇಪ
ಪಾದಯಾತ್ರೆಗೆ ಸ್ವಾಗತ
ಹೊಸಪೇಟೆ: ಆಷಾಢ ಶುದ್ಧ ಏಕಾದಶಿ ಪ್ರಯುಕ್ತ ಹಂಪಿಗೆ ಪಾದಯಾತ್ರೆಯಲ್ಲಿ ಆನೇಕಲ್ಲು ತಾಂಡಾದ ಭಜನಾ ಮಂಡಳಿಗೆ ಮಲಪನಗುಡಿ ಗ್ರಾಮದಲ್ಲಿ ಭಕ್ತರು ಸ್ವಾಗತಿಸಿ, ಅನ್ನ ಸಂತರ್ಪಣೆ ನಡೆಸಿ ಹಂಪಿಗೆ ಬೀಳ್ಕೊಡಲಾಯಿತು. ಪ್ರತಿವರ್ಷದಂತೆ ಹಂಪಿಗೆ ತೆರಳುವ ಈ ಭಜನಾ ತಂಡ ಗುರುವಾರ ಮಲಪನಗುಡಿ ಗ್ರಾಮಕ್ಕೆ ಆಗಮಿಸಿತು. ಮಲಪನಗುಡಿ ಭಕ್ತವೃಂದವು ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ವಾಸ್ತವ್ಯ ಕಲ್ಪಿಸಿ ಅನ್ನ ಸಂತರ್ಪಣೆ ನಡೆಸಿತು. ಶನಿವಾರ ಹಂಪಿ ಶಿವರಾಮ ಅವಧೂತರ ಮಠದಲ್ಲಿ ಸಮುದಾಯಿಕ ಅಖಂಡ ಭಜನೆ ಕಾರ್ಯಕ್ರಮ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಸಿಕೊಡಲಿದೆ.
ಪಠ್ಯ ಪುಸ್ತಕ ವಿತರಣೆ
ಬಳ್ಳಾರಿ: ಇಲ್ಲಿನ ರಾಜರಾಜೇಶ್ವರಿ ನಗರದಲ್ಲಿನ ಎಂ.ಆರ್.ಆರ್. ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಸಮವಸ್ತ್ರ, ಪಠ್ಯ ಪುಸ್ತಕಗಳನ್ನು ಉಚಿತವಾಗಿ ವಿತರಿಸಲಾಯಿತು. ಅಧ್ಯಕ್ಷತೆ ವಹಿಸಿದ್ದ ಮುಖ್ಯಗುರು ಜಿ.ಕೊಟ್ರಬಸಪ್ಪ ಮಾತನಾಡಿ, ಆಂಗ್ಲ ಮಾಧ್ಯಮ ಶಾಲಾ ಮಕ್ಕಳಂತೆ ಕನ್ನಡ ಮಾಧ್ಯಮ ವಿದ್ಯಾರ್ಥಿಗಳೂ ಸಮವಸ್ತ್ರ ಧರಿಸಿ ಶಿಸ್ತಿನಿಂದ ಕೂಡಿರಬೇಕು. ವಿದ್ಯಾರ್ಥಿಗಳ ಪೋಷಕರ ಸಮ್ಮುಖದಲ್ಲೇ ಪುಸ್ತಕ, ಸಮವಸ್ತ್ರ ವಿತರಿಸಲಾಗಿದೆ. ಶಾಲೆಯಲ್ಲಿ ದಾಖಲಾಗಿರುವ ಮಕ್ಕಳ ಹೆಸರಲ್ಲಿ ಬ್ಯಾಂಕ್ನಲ್ಲಿ ಖಾತೆಗಳು ತೆರೆಯಲಾಗಿದ್ದು, ಮುಂದಿನ ವರ್ಷದಿಂದ ಬಟ್ಟೆಯೊಂದಿಗೆ ಪ್ರೋತ್ಸಾಹ ಧನವನ್ನು ನೀಡಲಾಗುವುದು ಎಂದು ಭರವಸೆ ನೀಡಿದರು. ವಿದ್ಯಾರ್ಥಿಗಳ ಪೋಷಕರು, ನಾಗರಿಕರು ಇದ್ದರು.
ಯುವಕ ಆತ್ಮಹತ್ಯೆ
ಬಳ್ಳಾರಿ: ವ್ಯಕ್ತಿಯೋರ್ವ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಸಿಂಧಿಗೇರಿ ಗ್ರಾಮದಲ್ಲಿ ಭಾನುವಾರ ರಾತ್ರಿ ಜರುಗಿದೆ. ಸಿಂಧಿಗೇರಿ ಗ್ರಾಮದ ಈರಣ್ಣ ಮಹದೇವ ಮಡಿವಾಳ(19) ಮೃತ ವ್ಯಕ್ತಿ. ಭಾನುವಾರ ರಾತ್ರಿ ಮೈಮೇಲೆ ಸೀಮೆ ಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಕೂಡಲೆ ಚಿಕಿತ್ಸೆಗಾಗಿ ಬಳ್ಳಾರಿ ವಿಮ್ಸ್ಗೆ ದಾಖಲಿಸಿದ್ದುರು. ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಮೃತಪಟ್ಟಿದ್ದಾನೆ. ಮೃತ ವ್ಯಕ್ತಿಯು ಮಾನಸಿಕ ರೋಗಿ ಎಂದು ತಿಳಿದು ಬಂದಿದೆ. ಈ ಕುರಿತು ಕುರುಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಕಿಗೆ ಮಹಿಳೆ ಬಲಿ
ಬಳ್ಳಾರಿ: ಮಹಿಳೆಯೋರ್ವಳು ಬೆಂಕಿ ಅನಾಹುತಕ್ಕೆ ಸಿಲುಕಿ ಮೃತಪಟ್ಟ ಘಟನೆಯು ತಾಲೂಕಿನ ಯರಂಗಳಿಗಿ ಗ್ರಾಮದಲ್ಲಿ ಭಾನುವಾರ ಜರುಗಿದೆ. ಈಶ್ವರಮ್ಮ( 40) ಎಂಬ ಮಹಿಳೆಯೇ ಮೃತಪಟ್ಟ ದುರ್ದೈವಿ. ಜು. 17ರಂದು ರಾತ್ರಿ ವಿದ್ಯುತ್ ಸಂಪರ್ಕ ಇಲ್ಲದ ಸಮಯದಲ್ಲಿ ಸೀಮೆ ಎಣ್ಣೆ ದೀಪ ಹಚ್ಚಲು ಪ್ರಯತ್ನಿಸಿದಾಗ ಸೀರೆಗೆ ಬೆಂಕಿ ತಗುಲಿ ಮೈ ಸುಟ್ಟ ಕಾರಣ ಈ ಘಟನೆ ಸಂಭವಿಸಿದೆ. ಕೂಡಲೆ ಬಳ್ಳಾರಿ ವಿಮ್ಸ್ಗೆ ಚಿಕಿತ್ಸೆಗಾಗಿ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಮೃತಪಟ್ಟಿದ್ದಾರೆ. ಈ ಕುರಿತು ಕುರುಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಕ್ಕಳನ್ನು ತಪ್ಪದೆ ಶಾಲೆಗೆ ಕಳುಹಿಸಿ
ಕಂಪ್ಲಿ: ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಶಿಕ್ಷಕರು ಮುಂದಾಗಬೇಕು. ಪೋಷಕರು ಮತ್ತು ಪಾಲಕರು ತಮ್ಮ ಮಕ್ಕಳನ್ನು ತಪ್ಪದೆ ಶಾಲೆಗೆ ಹಾಜರಾಗುವಂತೆ ನೋಡಿಕೊಳ್ಳಬೇಕು ಎಂದು ನಂ. 10 ಮುದ್ದಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಳ್ಳಾರಿ ಮಾರುತಿ ಹೇಳಿದರು. ಕಂಪ್ಲಿಗೆ ಸಮೀಪದ ನಂ. 10 ಮುದ್ದಾಪುರ ಗ್ರಾಮದ ಯಲ್ಲಮ್ಮ ಕ್ಯಾಂಪ್ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಸರ್ವ ಶಿಕ್ಷಣ ಅಭಿಯಾನ ಯೋಜನೆಯಡಿ ರು. 1.10 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ಬಿಸಿಯೂಟದ ಅಡುಗೆ ಕೋಣೆ ಉದ್ಘಾಟಿಸಿ ನಂತರ ಮಾತನಾಡಿದರು. ಸರ್ಕಾರಿ ಶಾಲೆಗಳಲ್ಲಿಯು ಸಹಿತ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದ್ದು, ಮಕ್ಕಳ ಪೋಷಕರು ಮತ್ತು ಪಾಲಕರು ಉದಾಸೀನ ಮಾಡದೆ ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರುಗಳಾದ ವಿ. ಭೀಮೇಶ್, ದಂಡಿನ ಗೋಪಾಲ, ಸಣ್ಣ ಎರ್ರಿಸ್ವಾಮಿ, ಯಲ್ಲಮ್ಮ ಕ್ಯಾಂಪ್ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಎಸ್ಡಿಎಂಸಿ ಅಧ್ಯಕ್ಷ ಕೃಷ್ಣಮೂರ್ತಿ, ಮುಖ್ಯಗುರು ರವೀಶ್, ವೆಂಕೋಬಪ್ಪ, ಶಾರದಮ್ಮ ಹಾಗೂ ಇತರರು ಉಪಸ್ಥಿತರಿದ್ದರು.