ಕಾಟಾಚಾರದ ಅಂಗನವಾಡಿ ಕೇಂದ್ರಗಳು
ಕನ್ನಡಪ್ರಭ ವಾರ್ತೆ, ಹೊಸಪೇಟೆ, ಜು. 23
ಹೊಸಪೇಟೆ ತಾಲೂಕಿನಲ್ಲಿ ಅಂಗನವಾಡಿ ಕೇಂದ್ರಗಳು ಮಕ್ಕಳಿಗೆ ಉತ್ತಮ ವಾತಾವರಣ ನಿರ್ಮಿಸದೇ ಕಾಟಾಚಾರಕ್ಕೆ ನಡೆಸುವಂತಹ ಕೇಂದ್ರಗಳಾಗಿವೆ.
ತಾಲೂಕಿನಲ್ಲಿ 439 ಅಂಗನವಾಡಿ ಕೇಂದ್ರಗಳಿವೆ. ಇದರಲ್ಲಿ ವಿಜಯನಗರ ವಿಧಾನ ಸಭಾ ಕ್ಷೇತ್ರದಲ್ಲಿ 252, ಕಂಪ್ಲಿ ಕ್ಷೇತ್ರದಲ್ಲಿ 118, ಹಗರಿಬೊಮ್ಮನಹಳ್ಳಿ ಕ್ಷೇತ್ರದಲ್ಲಿ 69 ಅಂಗನವಾಡಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಇದರಲ್ಲಿ 194 ಸ್ವಂತ ಕಟ್ಟಡ ಹೊಂದಿವೆ. 157 ಸ್ವಂತ ಕಟ್ಟಡಗಳಿಲ್ಲ. ಇದರಲ್ಲಿ 34 ಕೇಂದ್ರಗಳನ್ನು ಸಮುದಾಯ ಭವನಗಳಲ್ಲಿ, ಕೆಲ ಬಾಡಿಗೆ ಕಟ್ಟಡಗಳಲ್ಲಿ ನಡೆಸಲಾಗುತ್ತಿದೆ. 31 ಕೇಂದ್ರಗಳನ್ನು ಶಾಲಾ ಆವರಣಗಳಲ್ಲಿ, 23 ದೇವಸ್ಥಾನ ಸೇರಿದಂತೆ ಇತರೆ ಪ್ರದೇಶದಲ್ಲಿ ಅಂಗನವಾಡಿ ಕೇಂದ್ರಗಳನ್ನು ನಡೆಸಲಾಗುತ್ತಿದೆ.
ಕಚೇರಿಗೆ ಸ್ವಂತ ಕಟ್ಟಡವಿಲ್ಲ: ನಗರದಲ್ಲಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯ ಕೇಂದ್ರ ಕಚೇರಿಗೆ ಇದುವರೆಗೂ ಸ್ವಂತ ಕಟ್ಟಡವಿಲ್ಲ. ಸುಮಾರು 26 ವರ್ಷಗಳಿಂದ ಬಾಡಿಗೆ ಕಟ್ಟಡದಲ್ಲೇ ಕಾರ್ಯನಿರ್ವಹಿಸುತ್ತಿದೆ. ತಾಲೂಕಿನ 439 ಕೇಂದ್ರಗಳಲ್ಲಿ 151 ಅಂಗನವಾಡಿ ಕೇಂದ್ರಗಳಿಗೆ ಕುಡಿವ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ. 144 ಕೇಂದ್ರಗಳಿಗೆ ಶೌಚಾಲಯದ ಸೌಲಭ್ಯ ಕಲ್ಪಿಸಲಾಗಿದೆ. ಆದರೆ, ಬಹುತೇಕ ಕೇಂದ್ರಗಳಲ್ಲಿರುವ ಶೌಚಾಲಯಗಳು ಕಟ್ಟಡ ಮಾತ್ರ ಹೊಂದಿವೆ. ಯಾವುದೇ ಮೂಲ ಸೌಲಭ್ಯಗಳು ಇಲ್ಲ.
850 ಪೌಷ್ಟಿಕತೆ ಕೊರತೆ ಮಕ್ಕಳು: ಸರ್ಕಾರ ಎಲ್ಲ ಅಂಗನವಾಡಿ ಕೇಂದ್ರಗಳಿಗೆ ವಿದ್ಯುತ್ ಸಂಪರ್ಕ ಮತ್ತು ಫ್ಯಾನ್ ಅಳವಡಿಸುವ ಯೋಜನೆ ರೂಪಿಸಿದೆ. 71 ಕೇಂದ್ರಗಳಿಗೆ ಸ್ವಂತ ಕಟ್ಟಡಗಳಿಗೆ ಮಾತ್ರ ವಿದ್ಯುತ್ ಸೌಲಭ್ಯ. ಇನ್ನು ಬಹುತೇಕ ಕಟ್ಟಡಗಳಿಗೆ ವಿದ್ಯುತ್ ಮತ್ತು ಫ್ಯಾನ್ ಅಳವಡಿಸಬೇಕಾಗಿದೆ. ಸರ್ಕಾರದಿಂದ ಎಲ್ಲ ಅಂಗನವಾಡಿ ಕೇಂದ್ರಗಳಿಗೆ ಗ್ಯಾಸ್ ಸಿಲಿಂಡರ್ ಮತ್ತು ಸ್ಟೌವ್‌ಗಳನ್ನು ಒದಗಿಸಲಾಗಿದ್ದರೂ ಕೆಲ ಅಂಗನವಾಡಿ ಕೇಂದ್ರಗಳಲ್ಲಿ ಇನ್ನೂ ಒಲೆ(ಸೌದೆ) ಹಚ್ಚಿ ಅಡುಗೆ ಮಾಡಲಾಗುತ್ತಿದೆ. ಕುಡಿವ ನೀರಿನ ಸೌಲಭ್ಯ ಬಹುತೇಕ ಕೇಂದ್ರಗಳಿಗೆ ಇಲ್ಲ. ತಾಲೂಕಿನಲ್ಲಿ ಕಳೆದ ವರ್ಷ ಪೌಷ್ಟಿಕಾಂಶ ಕೊರತೆಯ 1556 ಮಕ್ಕಳನ್ನು ಗುರುತಿಸಲಾಗಿದೆ. ಆದರೆ, ಈ ವರ್ಷ ಪೌಷ್ಟಿಕತೆ ಕೊರತೆಯ 850 ಮಕ್ಕಳನ್ನು ಗುರುತಿಸಲಾಗಿದೆ. ಎಲ್ಲ ಅಂಗನವಾಡಿ ಕೇಂದ್ರಗಳಿಗೆ ಪೌಷ್ಟಿಕ ಆಹಾರ ಒದಗಿಸಲಾಗುತ್ತಿದೆ. ಅಂಗನವಾಡಿ ಕೇಂದ್ರಗಳಿಗೆ ಇನ್ನೂ ಹೆಚ್ಚಿನ ಮಕ್ಕಳ ಸಂಖ್ಯೆಯಲ್ಲಿ ಬರುವಂತಹ ವಾತಾವರಣ ನಿರ್ಮಿಸಲಾಗುತ್ತಿದೆ ಎಂದು ಇಲಾಖೆಯ ಅಧಿಕಾರಿಗಳು ಹೇಳುತ್ತಾರೆ.
ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೆ ಉತ್ತಮ ಶಾಲಾ ವಾತಾವರಣ ನಿರ್ಮಾಣವಾಗಬೇಕು. ಕೇಂದ್ರಗಳ ಮುಂದೆ ಮಕ್ಕಳು ಆಟವಾಡಲು ವಿಶಾಲವಾದ ಮೈದಾನ, ಸ್ವಚ್ಛವಾದ ವಾತಾವರಣ ಸೇರಿದಂತೆ ಉತ್ತಮ ಗುಣಮಟ್ಟದ ಪೌಷ್ಟಿಕ ಆಹಾರ ಮತ್ತು ಕೇಂದ್ರದಲ್ಲಿ ಇನ್ನೂ ಹೆಚ್ಚಿನ ರೀತಿಯಲ್ಲಿ ಮಕ್ಕಳಿಗೆ ಆಟ-ಪಾಟವನ್ನು ನೀಡುವ ವ್ಯವಸ್ಥೆ ಕಲ್ಪಿಸಿದಾಗ ಮಾತ್ರ ಅಂಗನವಾಡಿ ಕೇಂದ್ರಗಳು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಲು ಸಾಧ್ಯ. ಈ ನಿಟ್ಟಿನಲ್ಲಿ ಸರ್ಕಾರ ಮುಂದಾಗಬೇಕು ಎಂದು ಪಾಲಕರ ಅಂಬೋಣವಾಗಿದೆ.
ಸಿ.ಕೆ. ನಾಗರಾಜ್