ಪಕ್ಷ ವಿರೋಧಿಗಳು ಪಕ್ಷ ಬಿಟ್ಟು ತೊಲಗಲಿ: ಎಲ್. ಮಾರೆಣ್ಣ
ಹೊಸಪೇಟೆ: ಪಕ್ಷದಲ್ಲೇ ಇದ್ದುಕೊಂಡು ಪಕ್ಷ ವಿರೋಧಿ ಚಟುವಟಿಕೆ ಮಾಡುವಂಥವರು ಪಕ್ಷ ಬಿಟ್ಟು ಹೋಗುವುದು ಸೂಕ್ತವಾಗಿದೆ. ಪಕ್ಷದಲ್ಲೇ ಇದ್ದುಕೊಂಡು ಪಕ್ಷಕ್ಕೆ ದ್ರೋಹ ಬಗೆಯುವುದು ಸರಿಯಲ್ಲ ಎಂದು ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಎಲ್. ಮಾರೆಣ್ಣ ಹೇಳಿದರು.
ತಾಲೂಕಿನ ಮರಿಯಮ್ಮನಹಳ್ಳಿಯಲ್ಲಿ ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಎಂ.ಅಂಜಿನಪ್ಪ ಅವರ ಮನೆಯಲ್ಲಿ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಇತ್ತೀಚಿಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಸ್ಥಳೀಯ ಕೆಲ ಕಾಂಗ್ರೆಸ್ ಮುಖಂಡರು ಪಕ್ಷದ ಅಭ್ಯರ್ಥಿ ಪರವಾಗಿ ಕೆಲಸ ಮಾಡದೆ, ಕಾಂಗ್ರೆಸ್ ವಿರುದ್ಧ ಕೆಲಸ ಮಾಡಿ, ಬೇರೆ ಪಕ್ಷದವರಿಗೆ ಮತ ಹಾಕಿಸಿದ್ದಾರೆ. ಚುನಾವಣೆ ವೇಳೆ ಕ್ಷೇತ್ರದಲ್ಲಿ ಸಂಚರಿಸಲು ಕಾಂಗ್ರೆಸ್ದಿಂದಲೇ ವಾಹನದ ವೆಚ್ಚ ನೀಡಿದ್ದರೂ ಪಕ್ಷದಿಂದ ಎಲ್ಲ ರೀತಿಯ ಸೌಲಭ್ಯಗಳನ್ನು ಪಡೆದುಕೊಂಡು ಬೇರೆ ಪಕ್ಷಗಳ ಪರವಾಗಿ ಸ್ಥಳೀಯ ಕೆಲ ಮುಖಂಡರು ಕೆಲಸ ಮಾಡಿದ್ದಾರೆ ಎಂದರು.
ಪಕ್ಷ ಸಂಘಟನೆ: ಅನೇಕ ವರ್ಷಗಳ ಬೇಡಿಕೆಯಾಗಿರುವ ಹೊಸಪೇಟೆ-ಕೊಟ್ಟೂರು-ಹರಿಹರ ರೈಲು ಸಂಚಾರ ಆರಂಭಿಸುವಂತೆ ಕೇಂದ್ರ ರೇಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರ ಬಳಿಗೆ ಹಗರಿಬೊಮ್ಮನಹಳ್ಳಿ ಕ್ಷೇತ್ರದ ಮುಖಂಡರನ್ನೊಳಗೊಂಡ ನಿಯೋಗವನ್ನು ಕರೆದುಕೊಂಡು ಹೋಗಲಾಗುತ್ತದೆ. ಕ್ಷೇತ್ರದ ಅಭಿವೃದ್ಧಿಗಾಗಿ ಜಿಲ್ಲಾ ಉಸ್ತುವಾರಿ ಸಚಿವ ಪರಮೇಶ್ವರ ನಾಯ್ಕ ಅವರನ್ನು ಕ್ಷೇತ್ರದ ಪ್ರತಿಯೊಂದು ಗ್ರಾಮಗಳಿಗೂ ಭೇಟಿ ನೀಡುವಂತೆ ವಿನಂತಿಸಲಾಗುತ್ತದೆ. ಅತಿ ಶೀಘ್ರದಲ್ಲೇ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶವನ್ನು ಕ್ಷೇತ್ರದಲ್ಲಿ ನಡೆಸಲಾಗುತ್ತದೆ. ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾಗಿರುವ ಶಾಸಕರನ್ನು ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸುವಂತೆ ವಿನಂತಿಸಿಕೊಳ್ಳಲಾಗುತ್ತದೆ. ಕ್ಷೇತ್ರದಲ್ಲಿ ನಿರಂತರವಾಗಿ ಪಕ್ಷದ ಅಭಿವೃದ್ಧಿಗೆ ಶ್ರಮಿಸುವ ಮೂಲಕ ಪಕ್ಷವನ್ನು ಸಂಘಟಿಸಲಾಗುತ್ತದೆ ಎಂದು ಅವರು ಹೇಳಿದರು.
ತಾಪಂ ಮಾಜಿ ಸದಸ್ಯ ಎಂ. ಅಂಜಿನಪ್ಪ, ಸ್ಥಳೀಯ ಕಾಂಗ್ರೆಸ್ ಮುಖಂಡರಾದ ಹುರುಕೊಳ್ಳಿ ಮಂಜುನಾಥ, ಬಿ. ವೆಂಕಟೇಶ್, ಚಂದ್ರಶೇಖರ್, ವಿ.ಟಿ. ದುರ್ಗಾನಾಯ್ಕ ಇದ್ದರು.