ಬೋಧಗಯಾ ಬಾಂಬ್ ಸ್ಫೋಟ: ಪ್ರತಿಭಟನೆ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಜು. 23
ಬೋಧಗಯಾದಲ್ಲಿ ಬಾಂಬ್ ಸ್ಫೋಟಿಸಿದವರನ್ನು ಶೀಘ್ರವೇ ಬಂಧಿಸಿ, ಶಿಕ್ಷೆಗೊಳಪಡಿಸಬೇಕು ಎಂದು ಒತ್ತಾಯಿಸಿ ರಾಜ್ಯ ದಲಿತ ಸಂಘರ್ಷ ಸಮಿತಿಯು (ಡಿ.ಜಿ. ಸಾಗರ್ ಬಣ) ನಗರದಲ್ಲಿ ಮಂಗಳವಾರ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿತು.
ಇಡೀ ವಿಶ್ವಕ್ಕೆ ಕಾರುಣ್ಯ, ಶಾಂತಿ ಅಹಿಂಸೆ ಬೋಧಿಸಿದ ಬುದ್ಧನ ಹೆಸರಿನಲ್ಲಿ ಪವಿತ್ರ ಸ್ಥಳವೆಂದೇ ಗುರುತಿಸಿಕೊಂಡಿರುವ ಬೋಧಗಯಾದಲ್ಲಿ ದುಷ್ಟಶಕ್ತಿಗಳು ಬಾಂಬ್ ಸ್ಫೋಟಿಸಿದ್ದು, ಜಗತ್ತನ್ನೇ ತಲ್ಲಣಗೊಳಿಸಿದೆ. ಸಮಾಜದಲ್ಲಿ ಅಶಾಂತಿಯನ್ನು ಹರಡಲು ಪ್ರಯತ್ನಿಸುವ ದುಷ್ಟಶಕ್ತಿಗಳು ಮಹಾತ್ಮ ಬುದ್ಧನ ತಾಣ ಆಯ್ಕೆ ಮಾಡಿಕೊಂಡಿದ್ದು, ನಿಜಕ್ಕೂ ಶೋಚನೀಯ. ಈ ದುಷ್ಕೃತ್ಯಕ್ಕೆ ಕಾರಣರಾದವರನ್ನು ರಾಷ್ಟ್ರೀಯ ತನಿಖಾ ದಳ (ಎನ್ಐಎ) ಉಗ್ರರ ನಿಗ್ರಹ ಪಡೆ ಮತ್ತಿತರೆ ತನಿಖಾ ಸಂಸ್ಥೆಗಳು ಶೀಘ್ರವೇ ಪತ್ತೆ ಮಾಡಿ, ಬಂಧಿಸಿ ಕಠಿಣವಾಗಿ ಶಿಕ್ಷಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ರಾಜ್ಯ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಎ.ಮಾನಯ್ಯ ಮಾತನಾಡಿ, ಬೋಧಗಯಾದಲ್ಲಿ ಬಾಂಬ್ ಸ್ಫೋಟಿಸಿದ ವ್ಯಕ್ತಿಗಳಾರೇ ಇರಲಿ ಅವರನ್ನು ಕೂಡಲೇ ಪತ್ತೆ ಹಚ್ಚಿ ಅವರನ್ನು ಬಂಧಿಸಬೇಕು. ದುಷ್ಟಶಕ್ತಿಗಳು ವಿಶ್ವದ ಎಲ್ಲ ಜನರನ್ನು ಭೀತಿಯ ಕೂಪಕ್ಕೆ ದೂಡುವುದು ನಿಜಕ್ಕೂ ಹೇಯವಾದುದು. ಬೋಧಗಯಾದಲ್ಲಿ ಬಾಂಬ್ ಸ್ಫೋಟ ನಿಜಕ್ಕೂ ಖಂಡನೀಯ ಹಾಗೂ ನಾಗರಿಕ ಸಮಾಜದ ಮೇಲೆ ನಡೆದ ದಾಳಿಯಾಗಿದೆ. ಇದಕ್ಕೆ ಕಾರಣರಾದವರನ್ನು ಪತ್ತೆ ಹಚ್ಚಿ ಶಿಕ್ಷಿಸುವಂತೆ ಒತ್ತಾಯಿಸಿದರು.
ಇಂತಹ ಪ್ರಕರಣಗಳು ದೇಶದಲ್ಲಿನ ಯಾವುದೇ ಭಾಗದಲ್ಲಿಯೂ ಮರುಕಳಿಸದಂತೆ ಕೇಂದ್ರ ಹಾಗೂ ಆಯಾ ರಾಜ್ಯ ಸರ್ಕಾರಗಳು ಮುನ್ನೆಚ್ಚರಿಕೆ ವಹಿಸಬೇಕು. ಎಲ್ಲ ಧಾರ್ಮಿಕ ಪ್ರಾರ್ಥನಾ ಸ್ಥಳಗಳಿಗೆ ಸೂಕ್ತ ಭದ್ರತೆ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನಾ ಮೆರವಣಿಗೆಯು ನಗರದ ಗಡಗಿ ಚನ್ನಪ್ಪ ವೃತ್ತದಿಂದ ಮೀನಾಕ್ಷಿ ಸರ್ಕಲ್, ಬೆಂಗಳೂರು ರಸ್ತೆ, ತೇರುಬೀದಿ, ಮೋತಿ ಸರ್ಕಲ್ಗಳ ಮೂಲಕ ಡಿಸಿ ಕಚೇರಿಗೆ ತಲುಪಿ, ಅನಂತರ ಸಮಿತಿಯ ಪದಾಧಿಕಾರಿಗಳು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ರಾಜ್ಯ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಎಸ್. ಕೆಂಚಪ್ಪ, ಜಿಲ್ಲಾ ಸಂಘಟನಾ ಸಂಚಾಲಕ ಎಚ್. ಹುಸೇನಪ್ಪ, ಎಚ್ ಸಿದ್ದೇಶ್, ಎಂ ಈಶ್ವರ, ದೊಡ್ಡಬಸಪ್ಪ, ಮರಿಸ್ವಾಮಿ, ಎ.ಕೆ. ಗಂಗಾಧರ, ಗಾದಿಲಿಂಗಪ್ಪ, ಜಿ. ಪಂಪಾಪತಿ, ಟಿ.ಎಂ. ಎರ್ರಿಸ್ವಾಮಿ, ವಿಜಯಕುಮಾರ, ತಾಲೂಕು ಸಂಚಾಲಕರಾದ ಎಚ್.ಬಿ. ಗಂಗಪ್ಪ, ದೊಡ್ಡಬಸಪ್ಪ, ಗಿರಿಮಲ್ಲಪ್ಪ, ಲಕ್ಷ್ಮಣ, ಪರಶುರಾಮ, ಶಿವರಾಜ್, ದೇವದಾಸ್, ಆಂಜಿನೇಯ, ದುರುಗಪ್ಪ, ಗುಡದಪ್ಪ, ನಿಂಗಪ್ಪ, ಹೊನ್ನೂರಪ್ಪ, ಕೊಳಗಲ್ಲು ಮಲ್ಲಯ್ಯ, ಮಲ್ಲಪ್ಪ, ಅಂಜಿನಿ, ರಾಜಣ್ಣ, ರಂಗಪ್ಪ, ಬಿ. ರಮೇಶ, ಶಂಕರ್, ರಾಮಾಂಜಿನಿ, ಎಚ್. ರಮೇಶ ಇತರರು ಪ್ರತಿಭಟನೆಯಲ್ಲಿದ್ದರು.