ಮಾಗಳ ಸಂತ್ರಸ್ತರ ಜೀವದೊಂದಿಗೆ ಚೆಲ್ಲಾಟ
ಕನ್ನಡಪ್ರಭ ವಾರ್ತೆ, ಹೂವಿನಹಡಗಲಿ, ಜು. 23
ಇಲ್ಲಿ ಅಳಿದುಳಿದ ಮನೆಯಲ್ಲೇ ಜೋಪಡಿ ಜೀವನ, ಕೆಸರು ತುಂಬಿರುವ ರಸ್ತೆ, ವಿಷ ಜಂತುಗಳ ಕಾಟ, ಬೀದಿ ದೀಪಗಳಿಲ್ಲ, ನಳದ ನೀರಿಲ್ಲ, ಕಲುಷಿತ ನೀರಿನಿಂದ ಸಾಂಕ್ರಾಮಿಕ ರೋಗಗಳ ತಾಣ, ಮೂಲ ಸೌಲಭ್ಯಗಳೇ ಮಾಯ. ಇದು ತಾಲೂಕಿನ ಮಾಗಳ ಸಂತ್ರಸ್ತರ ಸ್ಥಿತಿ.
ಹೌದು, ಅಳಿದುಳಿದ ಮನೆಯ ಗೋಡೆಯ ಮರೆಯಲ್ಲಿ ಚಿಮಣಿ ದೀಪದಡಿ ಅಡುಗೆ ಮಾಡುತ್ತ, ಕತ್ತಲೆ ಬದುಕು ಸಾಗುತ್ತಿದೆ. ಮಹಿಳೆ ಹಸುಗೂಸನ್ನು ಜೋಪಡಿ ಪಕ್ಕದಲ್ಲಿ ಹಾಕಿಕೊಂಡು ವಿಷಜಂತುಗಳ ಭಯದಲ್ಲಿ ಮಲಗುವ ಸ್ಥಿತಿ ನಾಗರಿಕ ಸಮಾಜ ತಲೆ ತಗ್ಗಿಸುವಂತಹದ್ದು. ಈ ಸ್ಥಿತಿ ಜಿಲ್ಲಾ ಉಸ್ತುವಾರಿ ಸಚಿವ ಪಿ.ಟಿ. ಪರಮೇಶ್ವರನಾಯ್ಕ ಅವರ ಕ್ಷೇತ್ರ ತಾಲೂಕಿನ ಮಾಗಳ ಸಂತ್ರಸ್ತರದ್ದು. ಜನಪ್ರತಿನಿಧಿಗಳ ಭರವಸೆ ಕೇಳಿ, ಕೇಳಿ ಸುತ್ತಾಗಿರುವ ಸಂತ್ರಸ್ತರ ಬದುಕು ನಿಜಕ್ಕೂ ಬೀದಿಗೆ ಬಿದ್ದಿದೆ. 4 ವರ್ಷಗಳಿಂದ ಜೋಪಡಿ ಜೀವನ ಸಾಗಿಸುತ್ತಿರುವ ಬಡ ಜೀವಗಳ ಜತೆಗೆ ಸರ್ಕಾರ ಚೆಲ್ಲಾಟವಾಡುತ್ತಿದೆ.
ಸ್ಥಳಾಂತರ: 2009ರಲ್ಲಿ ತುಂಗಭದ್ರಾ ನದಿ ಪ್ರವಾಹ ಬಂದಾಗ ಮಾಗಳ ಗ್ರಾಮದ ಬಸ್ತಿಓಣಿ, ಬ್ಯಾಡರಗೇರಿಯ ಜನ ಸಂತ್ರಸ್ತರಾಗಿದ್ದರು. ಆಗ ಸರ್ಕಾರವು ಬಸ್ತಿಓಣಿ, ಬ್ಯಾಡರಗೇರಿಯನ್ನು ಆಸರೆ ಯೋಜನೆಯಡಿ ಸ್ಥಳಾಂತರಕ್ಕೆ ಜಮೀನು ಖರೀದಿಸಿ 560 ಮನೆ ನಿರ್ಮಾಣಕ್ಕೆ ಗಣಿ ಮಾಲೀಕರಿಗೆ ವಹಿಸಲಾಗಿತ್ತು. ಅವರು ನಿರ್ಮಿಸಿದ್ದು 100 ಮನೆಗಳು. ಅವು ಸಂಪೂರ್ಣ ಕಳಪೆಯಾಗಿದ್ದು ಕುಸಿಯಲು ದಿನ ಎಣಿಸುತ್ತಿವೆ. ಉಳಿದ ಮನೆಗಳ ನಿರ್ಮಾಣಕ್ಕೆ ಕೊಳಗೇರಿ ಅಭಿವೃದ್ಧಿ ಮಂಡಳಿಗೆ ವಹಿಸಲಾಗಿದೆ. ಇನ್ನು 2 ವರ್ಷ ಕಳೆದರೂ ಮನೆ ನಿರ್ಮಿಸಲು ಅಸಾಧ್ಯ.
ಆವಾಂತರ: ಆಸರೆ ಯೋಜನೆಯಡಿ ಸ್ಥಳಾಂತರ ಪ್ರದೇಶದಲ್ಲಿ ಯಾವುದೇ ಕಾಮಗಾರಿಗೆ ಅವಕಾಶವಿಲ್ಲ. ಮನೆ ಕಟ್ಟುವಂತಿಲ್ಲ, ನಳ ಸಂಪರ್ಕವಿಲ್ಲ, ಸಿಸಿ ರಸ್ತೆ, ಚರಂಡಿ ಸೇರಿದಂತೆ ಯಾವುದೇ ಮೂಲ ಸೌಕರ್ಯ ನೀಡಬಾರದೆಂದು ಸರ್ಕಾರ ಆದೇಶ ಹೊರಡಿಸಿರುವ ಹಿನ್ನೆಲೆಯಲ್ಲಿ ಗ್ರಾಪಂ ಸೇರಿ ಯಾವುದೇ ಇಲಾಖೆಯ ಅಭಿವೃದ್ಧಿ ಕಾಮಗಾರಿ ನಡೆದಿಲ್ಲ.
ನಿರಾಸೆ ಉತ್ತರ: ಬಿದ್ದಿರುವ ಮನೆಗಳ ನಿರ್ಮಾಣಕ್ಕೂ ಗ್ರಾಪಂ ಅನುಮತಿ ಇಲ್ಲ. ಅತ್ತ ಆಸರೆ ಮನೆಗಳು 4 ವರ್ಷ ಕಳೆದರೂ ನಿರ್ಮಾಣ ಇಲ್ಲ. ಅಳಿದುಳಿದ ಮನೆಗಳೇ ಸಂತ್ರಸ್ತರಿಗೆ ಗತಿ. ಇಂತಹ ಪರಿಸ್ಥಿತಿಯಿಂದ ಮುಕ್ತಿ ನೀಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಪಿ.ಟಿ. ಪರಮೇಶ್ವರನಾಯ್ಕ ಬಳಿಗೆ ಹೋದರೆ ಸಂತ್ರಸ್ತರಿಗೆ ನಿರಾಸೆ ಉತ್ತರ.
ಕೇವಲ ಭರವಸೆ: ಆಸರೆ ಮನೆಗಳಿಗೆ ಸ್ಥಳಾಂತರ ಮಾಡುತ್ತೇವೆ. ಅಲ್ಲಿಯವರೆಗೂ ಅದೇ ಹಳೆ ಗ್ರಾಮದಲ್ಲಿಯೇ ನಿಮ್ಮ ವಾಸ, ಆದ್ಯತೆ ಮೇರೆಗೆ ರಸ್ತೆ, ಚರಂಡಿ ಮಾಡಿಕೊಡುತ್ತೇವೆಂದು ಸಚಿವರ ಭರವಸೆಯ ಮಾತು ಸಂತ್ರಸ್ತರ ಸಿಟ್ಟು ನೆತ್ತಿಗೇರಿಸಿದೆ. 4 ವರ್ಷಗಳಿಂದ ಈ ಕುರಿತು ಯೋಜನೆಯ ಬ್ಯಾರೇಜ್ ಬಳಿ ಉಗ್ರ ಹೋರಾಟ, ಸತ್ಯಾಗ್ರಹ ಮಾಡಿದ್ದರೂ ಯಾವ ಅಧಿಕಾರಿಯೂ ಕ್ರಮಕೈಗೊಂಡಿಲ್ಲ. ಹಿನ್ನೀರಿನಲ್ಲಿ ಮನೆ ಮುಳುಗಿದರೆ ನಾವು ಎಲ್ಲಿಗೆ ಹೋಗಬೇಕು ಎನ್ನುತ್ತಾರೆ ಗ್ರಾಮಸ್ಥರು.
ಉಗ್ರ ಹೋರಾಟ: ಈ ಹಿಂದೆ ಚುನಾವಣೆಯ ಮತದಾನ ಬಹಿಷ್ಕಾರ ಮತ್ತು ಗ್ರಾಪಂ ಕಚೇರಿಗೆ ಬೀಗ ಹಾಕಲು ನಿರ್ಧರಿಸಲಾಗಿತ್ತು. ಇದಕ್ಕೆ ಅಧಿಕಾರಿಗಳು ಅವಕಾಶ ನೀಡದ ಕಾರಣ ಹೋರಾಟ ಹಿಂಪಡೆದು ಚುನಾವಣೆಗೆ ಅವಕಾಶ ನೀಡಲಾಗಿತ್ತು. ಎಡದಂಡೆ ಭಾಗದಲ್ಲಿ ಗುಮ್ಮಗೋಳ, ಬಿದರಹಳ್ಳಿ ಮತ್ತು ವಿಠಲಾಪುರ ಹಾಗೂ ಬಲದಂಡೆ ಭಾಗದ ಅಲ್ಲಿಪುರ ಮುಳುಗಡೆ ವ್ಯಾಪ್ತಿಗೆ ಸೇರ್ಪಡೆ ಮಾಡಲಾಗಿದೆ. ವಿಠಲಾಪುರ ಮುಳುಗಡೆ ವ್ಯಾಪ್ತಿಗೆ ಸೇರಿಸಿದ ನೀತಿಯಲ್ಲೇ ಮಾಗಳವನ್ನು ಮುಳುಗಡೆ ಪ್ರದೇಶವೆಂದು ಘೋಷಣೆ ಮಾಡಬೇಕೆಂದು ಸಂತ್ರಸ್ತರು ಒತ್ತಾಯಿಸಿದ್ದಾರೆ.
ಸಿಂಗಟಾಲೂರು ಏತ ನೀರಾವರಿ ಯೋಜನೆಯ ಹಿನ್ನೀರಿನಲ್ಲಿ ಮುಳುಗಡೆ ವ್ಯಾಪ್ತಿಗೆ ಸೇರ್ಪಡೆ ಮಾಡಿ ಪರಿಹಾರ ನೀಡಿ, ಅಂಗೈ ಅಗಲ ಆಸರೆ ಮನೆಗಳು ತಮಗೆ ಬೇಡ, ಈಗ ಸಂತ್ರಸ್ತರ ಸಮಸ್ಯೆ ಆಲಿಸಿ ಕ್ರಮ ಕೈಗೊಳ್ಳದಿದ್ದರೆ ನಿರಂತರ ಹೋರಾಟ ಹಮ್ಮಿಕೊಳ್ಳುವುದಾಗಿ ಸಂತ್ರಸ್ತರು ಎಚ್ಚರಿಕೆ ನೀಡಿದ್ದಾರೆ. ಸಚಿವರು ಮತ್ತು ಸಂಬಂಧಪಟ್ಟ ಅಧಿಕಾರಿಗಳು ಶೀಘ್ರದಲ್ಲೇ ಕ್ರಮ ಕೈಗೊಳ್ಳುವರೇ ಕಾಯ್ದು ನೋಡಬೇಕು.
ಚಂದ್ರು ಕೊಂಚಿಗೇರಿ