ಹೆಚ್ಚಿನ ದರಕ್ಕೆ ಗೊಬ್ಬರ ಮಾರಾಟ: ನೋಟಿಸ್
ಕೊಟ್ಟೂರು: ಸರ್ಕಾರ ನಿಗದಿಪಡಿಸಿದ ದರಕ್ಕಿಂತ ಹೆಚ್ಚಿನ ದರದಲ್ಲಿ ರಸಗೊಬ್ಬರ ಮಾರಾಟ ಮಾಡುವ ಬಗ್ಗೆ ರೈತರಿಂದ ವ್ಯಾಪಕ ದೂರು ಬಂದಿರುವ ಹಿನ್ನೆಲೆಯಲ್ಲಿ ಕೊಟ್ಟೂರಿನ ಎಲ್ಲ 25 ರಸಗೊಬ್ಬರ ಮಾರಾಟಗಾರರಿಗೆ ಸಹಾಯಕ ಕೃಷಿ ನಿರ್ದೇಶಕರ ಸೂಚನೆ ಮೇರೆಗೆ ನೋಟಿಸ್ ಜಾರಿಗೊಳಿಸಿದ್ದೇವೆ ಎಂದು ಪಟ್ಟಣದಲ್ಲಿನ ರೈತ ಸಂಪರ್ಕ ಕೇಂದ್ರದ ಅಧಿಕಾರಿ ಮಂಜುನಾಥ ತಿಳಿಸಿದರು.
ಮಂಗಳವಾರ 'ಕನ್ನಡಪ್ರಭ'ದೊಂದಿಗೆ ಮಾತನಾಡಿದ ಅವರು, ಅತ್ಯುತ್ತಮ ಮಳೆ ಬೀಳುತ್ತಿರುವ ಹಿನ್ನೆಲೆಯಲ್ಲಿ ರೈತರು ಬಿತ್ತನೆ ಕಾರ್ಯವನ್ನು ಬಿರುಸಿನಿಂದ ಕೈಗೊಂಡಿದ್ದಾರೆ. ಅಗತ್ಯವಾಗಿ ರೈತರಿಗೆ ಬೇಕಾದ ರಸಗೊಬ್ಬರ ದುಪ್ಪಟ್ಟು ಬೆಲೆಯಲ್ಲಿ ಕೊಟ್ಟೂರಿನಲ್ಲಿ ಮಾರಾಟವಾಗುತ್ತಿದೆ ಎಂಬ ಮಾಹಿತಿ ಈಗಾಗಲೇ ಕೃಷಿ ಇಲಾಖೆಗೆ ಗೊತ್ತಾಗಿದೆ. ಈ ಸಂಬಂಧ ಮಾರಾಟಗಾರರಿಗೆ ನೋಟಿಸ್ ಜಾರಿಗೊಳಿಸಿ ಹೆಚ್ಚಿನ ದರದಲ್ಲಿ ಮಾರಾಟ ಮಾಡುವುದನ್ನು ಮತ್ತೆ ಮುಂದುವರಿಸಿದರೆ ನಿಮ್ಮ ಅಂಗಡಿಗಳ ಲೈಸೆನ್ಸ್ ರದ್ದುಪಡಿಸಲು ಸಂಬಂಧಪಟ್ಟವರಿಗೆ ಸೂಚಿಸುತ್ತೇವೆ. ಈ ಸಂಬಂಧ ನೋಟಿಸ್ಗೆ 7 ದಿನಗಳೊಳಗಾಗಿ ಉತ್ತರಿಸುವಂತೆ ರವಾನಿಸಲಾದ ಪತ್ರದಲ್ಲಿ ಪ್ರತಿ ಅಂಗಡಿಯವರಿಗೆ ತಿಳಿಸಲಾಗಿದೆ ಎಂದರು.
ಅಧಿಕೃತ ರಸೀದಿ ಪಡೆಯಿರಿ: ರೈತರು ರಸಗೊಬ್ಬರ ಖರೀದಿಸುವಾಗ ತಮಗೆ ಬೇಕಾದ ಸರಂಜಾಮುಗಳನ್ನು ಪಡೆಯಲು ನೀಡಿದ ಹಣಕ್ಕೆ ಅಧಿಕೃತ ರಸೀದಿ ಪಡೆಯಬೇಕು. ಅಧಿಕೃತ ರಸೀದಿ ಹೊರತುಪಡಿಸಿ ಅಂಗಡಿಗಳವರು ನೀಡಬಹುದಾದ ಯಾವುದೇ ರಸೀದಿಯನ್ನು ಖಂಡಿತಾ ಸ್ವೀಕರಿಸಬಾರದು. ಸರ್ಕಾರ ನಿಗದಿಗೊಳಿಸಿದ ಅಧಿಕೃತ ರಸೀದಿಯನ್ನೇ ಕಡ್ಡಾಯವಾಗಿ ಪಡೆಯಬೇಕು. ಅಧಿಕೃತ ರಸೀದಿ ನೀಡದ ರಸಗೊಬ್ಬರ ಅಂಗಡಿಗಳ ವಿವರಗಳನ್ನು ಕೃಷಿ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರೆ ಕೂಡಲೇ ಅತ್ತ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಅವರು ಹೇಳಿದರು.