ನಾಳೆ ಜಿಲ್ಲಾ ಮಟ್ಟದ ಪರಿಶೀಲನಾ ಸಭೆ
ಬಳ್ಳಾರಿ: ಜಿಲ್ಲಾ ಮಟ್ಟದ ಜಾಗೃತಿ ಮತ್ತು ಪರಿಶೀಲನಾ ಸಮಿತಿ ಸಭೆ ಜುಲೈ 26ರ ಬೆಳಗ್ಗೆ 11ಕ್ಕೆ ಜಿಲ್ಲಾ ಪಂಚಾಯಿತಿ ನಜೀರ್ ಸಭಾಂಗಣದಲ್ಲಿ ನಡೆಯಲಿದೆ ಎಂದು ಮುಖ್ಯ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ. ಮಂಜುನಾಥ್ ನಾಯಕ್ ತಿಳಿಸಿದ್ದಾರೆ. ಲೋಕಸಭಾ ಸದಸ್ಯರು ಹಾಗೂ ಜಿಲ್ಲಾ ಜಾಗೃತಿ ಸಮಿತಿ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದ್ದು, ಸಂಬಂಧಿಸಿದ ಅಧಿಕಾರಿಗಳು ತಮ್ಮ ಇಲಾಖಾ ಕಾರ್ಯಕ್ರಮಗಳ ತಾಲೂಕುವಾರು ಆರ್ಥಿಕ, ಭೌತಿಕ ವಿವರಗಳೊಂದಿಗೆ ಖುದ್ದಾಗಿ ಹಾಜರಾಗಬೇಕೆಂದು ತಿಳಿಸಿದ್ದಾರೆ. ಸಭೆಯಲ್ಲಿ ಮಾರ್ಚ್ 2013ರ ಅಂತ್ಯಕ್ಕೆ ಇರುವಂತೆ ಪ್ರಗತಿ ಪರಿಶೀಲನೆ ಹಾಗೂ 2013-14ನೇ ಸಾಲಿನ ಮೊದಲ ತ್ರೈಮಾಸಿಕ (ಏಪ್ರಿಲ್ 2013 ರಿಂದ ಜೂನ್ 2013ರವರೆಗೆ)ದಲ್ಲಿ ಕೈಗೊಂಡಿರುವ ವಿವಿಧ ಯೋಜನೆಗಳ ಪರಿಶೀಲನೆ ನಡೆಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ವ್ಯಕ್ತಿ ನಾಪತ್ತೆ: ದೂರು ದಾಖಲು
ಬಳ್ಳಾರಿ: ವ್ಯಕ್ತಿಯೋರ್ವ ಕಾಣೆಯಾಗಿರುವ ಘಟನೆ ನಗರದ ಕೌಲ್‌ಬಜಾರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜರುಗಿದೆ. ಮಹಮ್ಮದ್ ರಫೀಕ್ (32) ಕಾಣೆಯಾಗಿದ್ದು, ಈತನು ಮೇ 2ರ ಮಧ್ಯಾಹ್ನ 2 ಗಂಟೆಗೆ ಮರಿಸ್ವಾಮಿ ಮಠದ ಬಳಿಯಿರುವ ಸಂಬಂಧಿಕರ ಮನೆಯಲ್ಲಿದ್ದ ತನ್ನ ತಾಯಿಯನ್ನು ಭೇಟಿಯಾಗಿ ಬರುತ್ತೇನೆಂದು ಹೇಳಿ ಹೋದವನು ಮರಳಿ ಬಂದಿರುವುದಿಲ್ಲ ಎಂದು ಈತನ ಪತ್ನಿ ಶಮೀಮ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. ಈತನು 5.5 ಅಡಿ ಎತ್ತರ, ಕೋಲು ಮುಖ, ತೆಳ್ಳನೆ ಮೈಕಟ್ಟು, ಎಣ್ಣೆಗೆಂಪು ಮೈಬಣ್ಣ ಹೊಂದಿದ್ದು, ನೀಲಿ ಬಣ್ಣದ ತುಂಬು ತೋಳಿನ ಅಂಗಿ, ಬಿಳಿ ಬಣ್ಣದ ಪ್ಯಾಂಟ್ ಧರಿಸಿದ್ದನು. ಕನ್ನಡ, ತೆಲುಗು, ತಮಿಳು, ಉರ್ದು ಭಾಷೆ ಬಲ್ಲವನಾಗಿದ್ದಾನೆ. ಈ ವ್ಯಕ್ತಿಯ ಬಗ್ಗೆ ಮಾಹಿತಿ ಇದ್ದವರು ಸಮೀಪದ ಪೊಲೀಸ್ ಠಾಣೆಗೆ ಮಾಹಿತಿ ನೀಡಲು ಇಲಾಖೆ ಕೋರಿದೆ.
ಚಂದ್ರಶೇಖರ್ ಆಜಾದ್ ಜನ್ಮದಿನಾಚರಣೆ
ಹೂವಿನಹಡಗಲಿ: ಇಲ್ಲಿನ ಬಾಲಕರ ವಸತಿ ನಿಲಯದಲ್ಲಿ ಚಂದ್ರಶೇಖರ ಆಜಾದ್ ಅವರ 107ನೇ ಜನ್ಮದಿನವನ್ನು ಆಲ್ ಇಂಡಿಯಾ ಡೆಮಾಕ್ರೆಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್ ತಾಲೂಕು ಘಟಕ ವತಿಯಿಂದ ಆಚರಿಸಲಾಯಿತು. ಎಐಡಿಎಸ್‌ಓ ತಾಲೂಕು ಸಂಚಾಲಕ ರಹಮತ್ ಬೀರಬ್ಬಿ ಮಾತನಾಡಿ, ಆಜಾದ್ ವಿದ್ಯಾರ್ಥಿಯಿದ್ದಾಗಲೇ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿ ಬ್ರಿಟಿಷ್‌ರ ದಬ್ಬಾಳಿಕೆ ವಿರುದ್ಧ ಹೋರಾಡಿದ್ದರು. ದೇಶದ ಸಂಪತ್ತು ಲೂಟಿ ಮಾಡುತ್ತಿದ್ದ ಬ್ರಿಟಿಷರನ್ನು ಓಡಿಸಬೇಕೆಂದು ಸಂಘಟನೆ ಹುಟ್ಟು ಹಾಕಿ ಹೋರಾಟಕ್ಕೆ ನಿಂತರು. ಪ್ರಜಾತಾಂತ್ರಿಕ ಸಾಮೂಹಿಕ ಹೋರಾಟಗಳ ಮೂಲಕ ಬ್ರಿಟಿಷರ ವಿರುದ್ಧ ದಂಗೆ ಎಬ್ಬಿಸಬೇಕೆಂದು ಅಲಹಾಬಾದ್‌ನ ಅಲ್‌ಫ್ರೆಡ್ ಪಾರ್ಕಿನಲ್ಲಿ ಬ್ರಿಟಿಷ್‌ರ ವಿರುದ್ಧ ಒಬ್ಬಂಟಿಯಾಗಿ ಹೋರಾಡುತ್ತಲೇ ಹುತಾತ್ಮರಾದರು ಎಂದರು. ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಯೋಗಾನಂದ ಮಾತನಾಡಿ, ವಿದ್ಯಾರ್ಥಿಗಳು ಚಂದ್ರಶೇಖರ ಆಜಾದ್ ಅವರ ಆದರ್ಶಗಳನ್ನು ಪಾಲಿಸಿ ಕಷ್ಟ, ನೋವುಗಳನ್ನು ಲೆಕ್ಕಿಸದೆ ಅಭ್ಯಾಸ ಮಾಡಬೇಕೆಂದರು. ಸಭೆಯ ಅಧ್ಯಕ್ಷತೆ ವಹಿಸಿದ್ದ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಎಂ. ದ್ಯಾಮಪ್ಪ ಮಾತನಾಡಿ, ಬ್ರಿಟಿಷ್‌ರ ವಿರುದ್ಧ ಹೋರಾಡಿದ ಹೋರಾಗಾರರಲ್ಲಿ ಆಜಾದ್ ಪ್ರಮುಖರು. ಅವರ ಧೈರ್ಯ, ಸಾಹಸ ಮೆಚ್ಚುವಂತದ್ದು. ವಿದ್ಯಾರ್ಥಿಗಳು ಅನುಕೂಲತೆಗಳನ್ನು ಸರಿಯಾಗಿ ಉಪಯೋಗಿಸಿಕೊಂಡು ಭವಿಷ್ಯವನ್ನು ಸರಿಯಾಗಿ ರೂಪಿಸಿಕೊಂಡರೆ ಆಜಾದ್ ಅವರ ಜನ್ಮದಿನ ಆಚರಿಸಿದ್ದು ಸಾರ್ಥಕವಾಗುತ್ತದೆ ಎಂದರು. ಶಿಕ್ಷಕ ಕೊಟ್ರಯ್ಯ, ಬಸವರಾಜ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ನಿಲಯ ಪಾಲಕಿ ಅನುರಾಧಾ ಉಪಸ್ಥಿತರಿದ್ದರು. ವಿನಾಯಕ ಪ್ರಾರ್ಥಿಸಿದರು.
ನೋಟ್ ಪುಸ್ತಕ ವಿತರಣೆ
ಬಳ್ಳಾರಿ: ಗುರುಪೌರ್ಣಮಿ ಅಂಗವಾಗಿ ನಗರದ 5ನೇ ವಾರ್ಡ್ ವ್ಯಾಪ್ತಿಗೆ ಬರುವ ಕಾಕರ್ಲತೋಟದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಡ ವಿದ್ಯಾರ್ಥಿಗಳಿಗೆ ಸಾಯಿಬಾಬಾ ಟ್ರಸ್ಟ್ ಕಟ್ಟಡ ಕಾರ್ಮಿಕರ ವತಿಯಿಂದ ಉಚಿತ ನೋಟ್ ಪುಸ್ತಕ ವಿತರಣಾ ಕಾರ್ಯಕ್ರಮ ಜರುಗಿತು. ಸಾಯಿಬಾಬಾ ಟ್ರಸ್ಟ್ ಕಟ್ಟಡ ಕಾರ್ಮಿಕರ ವತಿಯಿಂದ ಕಾಂಟ್ರಾಕ್ಟರ್ ವೆಂಕಟರೆಡ್ಡಿ ಶಾಲೆಯ 300 ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕಗಳನ್ನು ವಿತರಿಸಿದರು.