ನೌಕರರ ಚುನಾವಣೆ: ಅವಿರೋಧ ಆಯ್ಕೆ
ಹೂವಿನಹಡಗಲಿ: ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಶಾಖೆ ಮತ್ತು ಯೋಜನಾ ಘಟಕಗಳಿಗೆ ಸೋಮವಾರ ನಡೆದ ಚುನಾವಣೆಯಲ್ಲಿ ಒಟ್ಟು 35 ಸ್ಥಾನಗಳಲ್ಲಿ ವಿವಿಧ ಇಲಾಖೆಗಳಿಂದ 23 ನಿರ್ದೇಶಕರನ್ನು ಈಗಾಗಲೇ ಅವಿರೋಧವಾಗಿ ಆಯ್ಕೆಯಾಗಿದ್ದರು. 6 ಕ್ಷೇತ್ರಗಳಿಂದ 12 ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ತೀವ್ರ ತುರುಸಿನಿಂದ ನಡೆದ ಚುನಾವಣೆಯ ಫಲಿತಾಂಶ ಸೋಮವಾರ ಸಂಜೆ ಚುನಾವಣಾಧಿಕಾರಿ ಎಚ್.ಎಂ. ಬೆಟ್ಟಯ್ಯ ಪ್ರಕಟಿಸಿದರು. ಆರೋಗ್ಯ ಕ್ಷೇತ್ರದಿಂದ ಯೋಗೇಂದ್ರನಾಯ್ಕ, ಸಿ.ಸಿ. ಪ್ರೇಮಾ, ಶಶಿಧರ, ಪ್ರಕಾಶ, ಲೋಕೋಪಯೋಗಿ ಇಲಾಖೆಯ ಜಿ. ಮಹೇಶ, ಮಾರುತಿ ತಟ್ಟೆ, ನ್ಯಾಯಾಂಗ ಇಲಾಖೆಯ ಕೆ.ನಾಗರಾಜ, ಪ್ರೌಢಶಾಲಾ ವಿಭಾಗದ ಜೆ. ಪ್ರಸನ್ನಕುಮಾರ ಚುನಾಯಿತರಾದರು. ತೀವ್ರ ಕುತೂಹಲ ಕೆರಳಿಸಿದ್ದ ಕಾಲೇಜು ವಿಭಾಗದಿಂದ ಹಾಲಿ ಅಧ್ಯಕ್ಷ ಎ. ಕೊಟ್ರಗೌಡ ಮತ್ತು ಎಚ್.ಬಿ. ಷಣ್ಮುಖಪ್ಪ ತಲಾ 28 ಸಮಾನ ಮತಗಳನ್ನು ಪಡೆದಿದ್ದರು. ನಂತರ ಇಲಾಖೆಯ ಪ್ರಮುಖರು ಚರ್ಚಿಸಿ ಅಧಿಕಾರ ಹಂಚಿಕೆ ಸೂತ್ರದ ಮೂಲಕ ಇಬ್ಬರಿಗೂ ಅವಕಾಶ ಮಾಡಿಕೊಟ್ಟರು. ಪ್ರಾಥಮಿಕ ಶಾಲಾ ಕ್ಷೇತ್ರದಿಂದ ಶಿಕ್ಷಕರಾದ ನಾಗರಾಜ, ಎಚ್.ಡಿ. ಜಗ್ಗಿನ್, ವಿಶ್ವನಾಥ ಚುನಾಯಿತರಾದರು.