ಅಶ್ವಿನಿ ಸಾಧನೆ ರಾಜಕಾರಣಿಗಳಿಗೆ ಕಾಣದಾಯಿತೇ?
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಜು. 25
ನಮ್ಮ ದೇಶದ ಜನಪ್ರತಿನಿಧಿಗಳಿಗೆ ತಮ್ಮ ಕ್ಷೇತ್ರದ ವ್ಯಾಪ್ತಿ, ಜಿಲ್ಲೆ, ತಾಲೂಕಿನ ಓರ್ವ ಪ್ರತಿಭೆ ದೇಶ, ವಿದೇಶದಲ್ಲಿ ಸಾಧನೆ ಮಾಡಿ ಇಡೀ ಜಗತ್ತೇ ಆ ಪ್ರತಿಭೆಯತ್ತ ನೋಡುವಂತೆ ಮಾಡಿದ್ದರೂ ಕಾಣಿಸುವುದಿಲ್ಲ. ಇವರು ಕೇವಲ ಹಣ, ವ್ಯಾಪಾರ, ಅಧಿಕಾರ, ಅಂತಸ್ತು, ರಾಜಕಾರಣದಲ್ಲೇ ತಮ್ಮ ಗಮನ ಕೇಂದ್ರೀಕರಿಸಿ ಸಾಧಕರನ್ನು ಕಡೆಗಣಿಸುತ್ತಾರೆ. ಇದು ದೊಡ್ಡ ದುರಂತವೇ ಸರಿ.
ವಿಶ್ವದ ವಿವಿಧ ದೇಶಗಳ ಸಾಧಕರಿಗೆ 7 ಗಾರ್ಡನ್ ಬ್ರೌನ್ ಪ್ರಶಸ್ತಿಗಳು ಬಂದಿವೆ. ಅದರಲ್ಲಿ ಭಾರತದ ಅದರಲ್ಲೂ ಕರ್ನಾಟಕದ ಅಶ್ವಿನಿ ಅಂಗಡಿ ಈ ಪ್ರಶಸ್ತಿಗೆ ಪಾತ್ರಳಾಗಿರುವುದು ಜಗತ್ತಿಗೇ ಗೊತ್ತು. ವಿಶ್ವ ಮಲಾಲಾ ದಿನದಂದು ವಿಶ್ವಸಂಸ್ಥೆ ಈ ಪ್ರಶಸ್ತಿ ನೀಡಿ ಗೌರವಿಸಿತು. ಶಿಕ್ಷಣ ಹಾಗೂ ಮಹಿಳೆಯರ ಘನತೆಯನ್ನು ಉತ್ತೇಜಿಸುವ ಕಾರ್ಯದಲ್ಲಿ ಸಾಧನೆ ಮಾಡಿದ ಯುವತಿಯರಿಗೆ ಈ ಪ್ರಶಸ್ತಿ ನೀಡಲಾಗುತ್ತದೆ. ಮೂಲತಃ ಬಳ್ಳಾರಿಯವಳಾದ ಅಶ್ವಿನಿಗೆ ಬಳ್ಳಾರಿ ಜಿಲ್ಲೆಯ ಜನಪ್ರತಿನಿಧಿಗಳು ಸೌಜನ್ಯಕ್ಕೂ ಒಂದೇ ಒಂದು ಅಭಿನಂದನೆ ಸಲ್ಲಿಸದಿರುವುದು ಮಾತ್ರ ನಾಚಿಕೆಗೇಡಿನ ಸಂಗತಿ.
ಅಶ್ವಿನಿಗೆ ಬಳ್ಳಾರಿಯವಳೆಂಬ ಅಭಿಮಾನ: ಅಶ್ವಿನಿ ಅಂಗಡಿ ಅವರ ತಂದೆ ಮೂಲತಃ ಬಳ್ಳಾರಿ ತಾಲೂಕು ಚೇಳ್ಳಗುರ್ಕಿಯವರು. ಅಶ್ವಿನಿ ಹುಟ್ಟಿದ್ದು, ಬೆಳೆದಿದ್ದು, ಶಿಕ್ಷಣ ಪಡೆದಿದ್ದು ಬೆಂಗಳೂರಿನಲ್ಲಿ. ಆದರೆ ಆಕೆಗೆ ಪ್ರಶಸ್ತಿ ಬಂದಾಗ ನನ್ನದು ಬೆಂಗಳೂರೆಂದು ಹೇಳದೇ ಬಳ್ಳಾರಿಯವಳು ಎಂದು ಅಭಿಮಾನ ವ್ಯಕ್ತಪಡಿಸಿ ತವರಿನ ಘನತೆಯನ್ನು ಜಗತ್ತಿಗೆ ತೋರಿಸಿದಳು. ಗಣಿಗಾರಿಕೆ, ಅರಾಜಕತೆ, ಅಕ್ರಮಗಳಂತ ಅಪಖ್ಯಾತಿಗೆ ಹೆಸರಾಗಿದ್ದ ಬಳ್ಳಾರಿ ಜಿಲ್ಲೆಯಲ್ಲೂ ಇಂತಹ ಪ್ರತಿಭೆ ಇದೆ ತೋರಿಸಿಕೊಟ್ಟಿದ್ದಳು. ಇಂತಹ ವಿಶ್ವ ಪ್ರತಿಭೆಗೆ ಬಳ್ಳಾರಿ ಜಿಲ್ಲೆಯ ಶಾಸಕರಾಗಲಿ, ಜಿಲ್ಲಾ ಉಸ್ತುವಾರಿ ಸಚಿವರಾಗಲಿ, ರಾಜ್ಯಸಭಾ, ಲೋಕಸಭಾ ಸದಸ್ಯರಿಗೆ, ಜನಪ್ರತಿನಿಧಿಗಳಿಗೆ, ರಾಜಕಾರಣಿಗಳು ಮಾತ್ರ ಅಭಿನಂದನೆ ಸಲ್ಲಿಸಿಲ್ಲ.
ಹರಿದುಬಂದವು ಅಭಿನಂದನೆ: ಅಶ್ವಿನಿ ಸಾಧನೆ ಕುರಿತು ದೇಶ ಹಾಗೂ ರಾಜ್ಯದ ಮಾಧ್ಯಮಗಳು ಪುಟಗಟ್ಟಲೆ ಬರೆದು ಹಾಡಿ ಹೊಗಳಿದವು. ರಾಜ್ಯಾದ್ಯಂತ ಅಭಿನಂದನೆಗಳ ಮಹಾಪೂರವೆ ಹರಿದು ಬರುತ್ತಿವೆ, ಮಠಾಧೀಶರು ಸೇರಿದಂತೆ ಹಿರಿಯ, ಕಿರಿಯ ಅಂಧರು, ಜನಸಾಮಾನ್ಯರು, ಸಂಘ, ಸಂಸ್ಥೆಗಳು ಆಕೆಯ ಫೋನ್ ನಂಬರ್ ಪಡೆದು, ಪತ್ರಗಳ ಮೂಲಕ ಅಭಿನಂದಿಸಿದ್ದಾರೆ. ಆದರೆ ಬಳ್ಳಾರಿಯ ಜನಪ್ರತಿನಿಧಿಗಳು ಮಾತ್ರ ಸೌಜನ್ಯಕ್ಕೂ ದೂರವಾಣಿ ಕರೆ ಮಾಡಿ ಹೇಳುವುದಿರಲಿ, ಮಾಧ್ಯಮಗಳ ಮೂಲಕವಾದರೂ ಅಭಿನಂದನೆ ಸಲ್ಲಿಸುವ ಮನಸ್ಸು ಮಾಡದಿರುವುದು ಖೇದಕರ.
ಅಶ್ವಿನಿಗಿರುವ ಅಭಿಮಾನ ಜನಪ್ರತಿನಿಧಿಗಳಿಗೆ ಇಲ್ಲವಾಯಿತೇ?: ಅಶ್ವಿನಿಗೆ ಇರುವ ಬಳ್ಳಾರಿಯ ಅಭಿಮಾನ, ಬಳ್ಳಾರಿ ಜನಪ್ರತಿನಿಧಿಗಳಿಗೆ ಇಲ್ಲವಾಯಿತೇ ಎಂಬುದು ಈಗ ಕಾಡುತ್ತಿರುವ ಪ್ರಶ್ನೆ. ಅಶ್ವಿನಿ ಹಾಗೂ ಅವರ ಪೋಷಕರು ತಮ್ಮದು ಬೆಂಗಳೂರೆಂದು ಹೇಳಿಕೊಂಡರೂ ಅವರನ್ನು ಯಾರು ಪ್ರಶ್ನಿಸುತ್ತಿರಲಿಲ್ಲ, ಆದರೆ ಅಶ್ವಿನಿ ಪೋಷಕರು ಹಾಗೂ ಅಶ್ವಿನಿ ಮಾಧ್ಯಮಗಳಿಗೆ ನೀಡಿದ ಸಂದರ್ಶನದಲ್ಲಿ ತಮ್ಮದು ಬಳ್ಳಾರಿ ಎಂದು ಹೇಳಿಕೊಂಡು ಬಳ್ಳಾರಿ ಬಗ್ಗೆ ಇರುವ ಅಭಿಮಾನ ತೋರಿದರು. ನಮ್ಮ ಜಿಲ್ಲೆಯ ಪ್ರತಿಭೆ ದೇಶ, ವಿದೇಶಗಳಲ್ಲಿ ಬೆಳೆದಿದೆ ಎಂದು ರಾಜಕಾರಣಿಗಳು ಸಂತೋಷ ಪಡಬಹುದಿತ್ತು. ಪಾಪ ಅವರಿಗೆ ಸಂತೋಷಪಡುವ ವ್ಯವಧಾನ ಇಲ್ಲವಾಯಿತೇ?
ವಿಧಾನಪರಿಷತ್ತಿನಲ್ಲೂ ಅಶ್ವಿನಿ ಸಾಧನೆಗೆ ಅಭಿನಂದನೆ ತಿಳಿಸಲಾಗಿದೆ. ತುಮಕೂರಿನ ಸಿದ್ಧಗಂಗಾ ಶ್ರೀಗಳು, ಚಿತ್ರದುರ್ಗದ ಮುರುಘಾ ಶರಣರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಸನ್ಮಾನ, ಅಭಿನಂದನೆಗಳ ಮಹಾಪೂರಗಳು ಹರಿದು ಬರುತ್ತಿವೆ. ಈವರೆಗೂ ಬಳ್ಳಾರಿಯ ಯಾವೊಬ್ಬ ಜನಪ್ರತಿನಿಧಿಗೂ ಅಶ್ವಿನಿ ಸಾಧನೆ ಮಹತ್ವ ಎನಿಸಿಲ್ಲವೇ? ಬಳ್ಳಾರಿಯ ವಿಷ್ಣು ಸೇನಾ ಸಮಿತಿಯ ಅಧ್ಯಕ್ಷ ಕುಂದಾಪುರ ನಾಗರಾಜ್ ಕನ್ನಡಪ್ರಭದೊಂದಿಗೆ ಮಾತನಾಡಿ, ಬಳ್ಳಾರಿ ಜಿಲ್ಲೆಯ ಜನಪ್ರತಿನಿಧಿಗಳ ಈ ವರ್ತನೆ ಬೇಸರ ತರಿಸಿದೆ. ಇಡೀ ದೇಶ ಹಾಗೂ ರಾಜ್ಯಕ್ಕೆ ಬಳ್ಳಾರಿಯ ಹುಡುಗಿ ಹೆಸರು ಮಾಡಿದ್ದಾಳೆ ಎಂದು ಅಭಿನಂದನೆ ತಿಳಿಸಬಹುದಾಗಿತ್ತು. ಆದರೆ ಆ ಕೆಲಸವನ್ನು ಮಾಡಿಲ್ಲ ಎನ್ನುತ್ತಾರೆ. ಬಳ್ಳಾರಿ ರಾಜಕಾರಣಿಗಳಿಗೆ ಸಾಧಕರನ್ನು, ಪ್ರತಿಭೆಗಳನ್ನು ಗುರುತಿಸುವ ಬದಲು ಹಣ, ಅಧಿಕಾರ ಬರುವ ಮೂಲಗಳನ್ನು ಮಾತ್ರ ಗುರುತಿಸುತ್ತಾರೆ ಎಂಬುದನ್ನು ರಾಜ್ಯಕ್ಕೆ ಈ ಮೂಲಕ ತೋರಿಸಿಕೊಟ್ಟಿದ್ದಾರೆ ಎಂಬುದು ಜಿಲ್ಲೆಯ ಜನತೆಯ ಬೇಸರ.
ಶಶಿಧರ ಮೇಟಿ