ತುಂಬಿ ಹರಿಯುತ್ತಿರುವ ತುಂಗಭದ್ರೆ
ಹೂವಿನಹಡಗಲಿ/ ಮುನಿರಾಬಾದ: ಮಲೆನಾಡು ಪ್ರದೇಶ ಸೇರಿದಂತೆ ನದಿ ತುಂಗಭದ್ರಾ ನದಿ ತೀರದ ಅನೇಕ ಕಡೆ ಭಾರಿ ಪ್ರಮಾಣದಲ್ಲಿ ಸುರಿಯುತ್ತಿರುವ ಮಳೆಯಿಂದ ನದಿಗೆ 71 ಸಾವಿರ ಕ್ಯುಸೆಕ್ ಒಳಹರಿವು ಇದ್ದು, ಗುರುವಾರ ಜಲಾಶಯದಿಂದ 90 ಸಾವಿರ ಕ್ಯುಸೆಕ್ ನೀರು ನದಿಗೆ ಹರಿಯುತ್ತಿದೆ ಎಂದು ಸಿಂಗಟಾಲೂರು ಏತನೀರಾವರಿ ಯೋಜನಾಧಿಕಾರಿ ಹನುಮಂತಪ್ಪ ತಿಳಿಸಿದ್ದಾರೆ.
ಈಗಾಗಲೇ ಸಿಂಗಟಾಲೂರು ಏತನೀರಾವರಿ ಬ್ಯಾರೇಜ್‌ನಲ್ಲಿ 504.07 ಮೀಟರ್‌ಗೆ ನೀರು ನಿಲ್ಲಿಸಲಾಗಿದ್ದು, ಬ್ಯಾರೇಜ್‌ನಲ್ಲಿ ಒಟ್ಟು 1.12 ಟಿಎಂಸಿ ನೀರು ಸಂಗ್ರಹವಾಗಿದೆ. ನದಿಗೆ ಒಳಹರಿವು ಹೆಚ್ಚಾಗಿರುವುದರಿಂದ ಯೋಜನೆಯ 18 ಗೇಟ್‌ಗಳಿಂದ 71 ಸಾವಿರ ಕ್ಯುಸೆಕ್ ನೀರನ್ನು ಹೊರಕ್ಕೆ ಬಿಡಲಾಗುತ್ತಿದೆ ಎಂದು ತಿಳಿಸಿದ್ದಾರೆ. ನದಿ ತೀರದ ಗ್ರಾಮಗಳಿಗೆ ತಹಸೀಲ್ದಾರ್ ಹಾಗೂ ಅವರ ಸಿಬ್ಬಂದಿ ಭೇಟಿ ನೀಡಿದ್ದು, ಅಪಾಯ ಮಟ್ಟದ ಪ್ರದೇಶಗಳನ್ನು ಪರಿಶೀಲನೆ ಮಾಡಿದಾಗ ಯಾವ ಗ್ರಾಮಗಳಲ್ಲಿಯೂ ಅಪಾಯದ ಮಟ್ಟ ಮೀರಿ ನದಿಯ ಪ್ರವಾಹವಿಲ್ಲವೆಂದು ತಹಸೀಲ್ದಾರ್ ವಿಜಯಕುಮಾರ ಹೇಳಿದರು. ಈಗಾಗಲೇ ಜನ, ಜಾನುವಾರುಗಳು ಮತ್ತು ಸಣ್ಣ ಮಕ್ಕಳನ್ನು ನದಿ ತೀರದ ಪ್ರದೇಶದಲ್ಲಿ ತಿರುಗಾಡದಂತೆ ನಿಗಾ ವಹಿಸಲಾಗಿದೆ. ಗ್ರಾಮಲೆಕ್ಕಿಗರ ಆಯಾ ಗ್ರಾಮಗಳಲ್ಲಿ ಡಂಗೂರ ಸಾರಿ ಎಲ್ಲ ರೀತಿ ಎಚ್ಚರಿಕೆ ವಹಿಸುವಂತೆ ಕ್ರಮ ವಹಿಸಲಾಗಿದೆ ಎಂದರು. ಗುರುವಾರ ಹೊಸಪೇಟೆ ಸಹಾಯಕ ಆಯುಕ್ತ ಡಿ.ಆರ್. ಅಶೋಕ ನದಿ ತೀರದ ಗ್ರಾಮಗಳಿಗೆ ಭೇಟಿ ನೀಡಿ, ಹೂವಿನಹಡಗಲಿ ಪಟ್ಟಣಕ್ಕೆ ಪೂರೈಕೆಯಾಗುತ್ತಿರುವ ಜಾಕ್‌ವಾಲ್ವ್ ಹಾಗೂ ಸಿಂಗಟಾಲೂರು ಏತನೀರಾವರಿ ಬ್ಯಾರೇಜ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿಸಿದರು.
88,583 ಕ್ಯುಸೆಕ್ ನೀರು: ತುಂಗಭದ್ರಾ ಜಲಾಶಯಕ್ಕೆ ಗುರುವಾರ 88,583 ಕ್ಯುಸೆಕ್ ನೀರು ಹರಿದು ಬಂದಿದ್ದು, ಜಲಾಶಯದ ನೀರಿನ ಮಟ್ಟ 1632 ಅಡಿಗಳಿಗೆ ತಲುಪಿದೆ ಹಾಗೂ ಜಲಾಶಯದ 28 ಗೇಟ್‌ಗಳಿಂದ ನದಿಗೆ 90,458 ಕ್ಯುಸೆಕ್ ನೀರು ಹರಿಸಲಾಗಿದೆ. 28 ಗೇಟ್‌ಗಳ ಪೈಕಿ 20 ಗೇಟ್‌ಗಳನ್ನು 2.5 ಅಡಿ ಎತ್ತರಕ್ಕೆ ಹಾಗೂ 8 ಗೇಟ್‌ಗಳನ್ನು 1.5 ಅಡಿ ಎತ್ತರಕ್ಕೆ ಎತ್ತಿ ನದಿಗೆ ನೀರನ್ನು ಹರಿಸಲಾಗುತ್ತಿದೆ. ಇನ್ನು 2-3 ದಿನಗಳವರೆಗೆ ಜಲಾಶಯದಿಂದ 90,000 ಕ್ಯುಸೆಕ್‌ಗಿಂತ ಅಧಿಕ ಪ್ರಮಾಣದ ನೀರನ್ನು ನದಿಗೆ ಹರಿಸಲಾಗುವುದು ಎಂದು ತುಂಗಭದ್ರಾ ಮಂಡಳಿ ಮೂಲಗಳಿಂದ 'ಕನ್ನಡಪ್ರಭ'ಕ್ಕೆ ಮಾಹಿತಿ ಲಭ್ಯವಾಗಿದೆ. ಕಳೆದ ಮೂರು ದಿನಗಳಿಂದ ಹಂಪಿಯ ಸ್ಮಾರಕಗಳನು ಜಲಾವೃತಗೊಂಡಿವೆ. ಮಂಗಳವಾರದಿಂದ ಹಂಪಿಯ ಪುರಂದರ ದಾಸರ ಮಂಟಪ ಜಲಾವೃತಗೊಂಡಿದೆ. ನಾಲ್ಕು ದಿನಗಳಿಂದ ತುಂಗಭದ್ರಾ ಜಲಾಶಯದಿಂದ ನದಿಗೆ ಸುಮಾರು 2,87,758 ಕ್ಯುಸೆಕ್ ನೀರು ಹರಿಸಲಾಗಿದೆ.