ರಸ್ತೆಯಲ್ಲಿ ಬತ್ತ ನಾಟಿ: ವಿಭಿನ್ನ ಪ್ರತಿಭಟನೆ
ಕನ್ನಡಪ್ರಭ ವಾರ್ತೆ,ಕೂಡ್ಲಿಗಿ, ಜು. 25
ಹೊಸಹಳ್ಳಿ ಗ್ರಾಮದ ಮುಖ್ಯ ರಸ್ತೆಯನ್ನು ಸರಿಪಡಿಸುವಂತೆ ಹತ್ತಾರು ಬಾರಿ ವಿವಿಧ ಸಂಘಟನೆಗಳು ಪ್ರತಿಭಟಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಇದರಿಂದ ಬೇಸತ್ತ ಗ್ರಾಮದ ಜನತೆ ವಿವಿಧ ಸಂಘಟನೆಗಳೊಂದಿಗೆ ರಸ್ತೆಯಲ್ಲಿಯೇ ಬತ್ತದ ಸಸಿ ನಾಟಿ ಮಾಡಿ ಗುರುವಾರ ವಿಭಿನ್ನವಾಗಿ ಪ್ರತಿಭಟಿಸಿದರು.
ತಾಲೂಕಿನ ಪ್ರಮುಖ ಹೋಬಳಿ ಕೇಂದ್ರವಾಗಿರುವ ಹೊಸಹಳ್ಳಿಯ ಮುಖ್ಯ ರಸ್ತೆ ಮಳೆ ಬಂದರಂತೂ ಸಂಪೂರ್ಣವಾಗಿ ಹದಗೆಡುತ್ತದೆ. ತಗ್ಗು, ಗುಂಡಿಗಳಲ್ಲಿ ನೀರು ನಿಂತುಕೊಂಡು ರಸ್ತೆಯೇ ಚರಂಡಿಯಾಗುತ್ತದೆ. ಇಂಥ ರಸ್ತೆಯಲ್ಲಿ ಜನತೆ ಸಂಚರಿಸುವುದಕ್ಕೆ ಭಯಪಡಬೇಕಾದ ಪರಿಸ್ಥಿತಿ ಬಂದಿದೆ. ತಕ್ಷಣವೇ ರಸ್ತೆಯನ್ನು ದುರಸ್ತಿಗೊಳಿಸಬೇಕೆಂದು ಸ್ಥಳೀಯ ಕನ್ನಡ ಸೇನೆ ಹೋಬಳಿ ಘಟಕ ಒತ್ತಾಯಿಸಿದೆ. ಪ್ರತಿಭಟನಾಕಾರರು ಹಿರೇಕುಂಬಳಗುಂಟೆಯಿಂದ ನಾಡ ಕಚೇರಿವರೆಗಿನ ರಸ್ತೆಯಲ್ಲಿ ಬತ್ತದ ಸಸಿಗಳನ್ನು ನೆಟ್ಟು ಆಕ್ರೋಶ ವ್ಯಕ್ತಪಡಿಸಿದರು.
ತಕ್ಷಣ ದುರಸ್ತಿಗೊಳಿಸಿ: ಮುಖ್ಯ ರಸ್ತೆಯೂ ಸಂಪೂರ್ಣ ಹದಗೆಟ್ಟಿದ್ದು ರಸ್ತೆಯಲ್ಲಿ ಎರಡು ಅಡಿಗಳಷ್ಟು ಗುಂಡಿಗಳು ಬಿದ್ದಿದ್ದು, ಸಾರ್ವಜನಿಕರಿಗೆ, ವಾಹನ ಚಾಲಕರಿಗೆ, ವರ್ತಕರ ಸಂಚಾರಕ್ಕೆ ತೊಂದರೆಯಾಗಿದೆ. ಈಗಾಗಲೇ ಗ್ರಾಮ ಪಂಚಾಯ್ತಿ ಹಾಗೂ ಜಿಲ್ಲಾಡಳಿತಕ್ಕೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದ್ದಾರೆ. ಸಂಬಂಧಿಸಿದ ಇಲಾಖೆ ತಕ್ಷಣವೇ ಕ್ರಮ ಕೈಗೊಂಡು ರಸ್ತೆಯನ್ನು ದುರಸ್ತಿಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ತೀವ್ರ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಕನ್ನಡ ಸೇನೆ ಹಾಗೂ ಇತರೆ ಸಂಘಟನೆಗಳು ಎಚ್ಚರಿಸಿದವು. ನಂತರ ಪ್ರತಿಭಟನಾಕಾರರು ನಾಡಕಚೇರಿಗೆ ತೆರಳಿ ಮನವಿಪತ್ರ ಸಲ್ಲಿಸಿದರು.
ಕನ್ನಡಸೇನೆ ಹೊಸಹಳ್ಳಿ ಹೊಬಳಿ ಘಟಕದ ಅಧ್ಯಕ್ಷ ಕೆ. ಕರಿವೀರಣ್ಣ, ಕಾರ್ಯದರ್ಶಿ ದಯಾನಂದ ಸಜ್ಜನ್, ತಾಲೂಕು ಅಧ್ಯಕ್ಷ ಗೋಣೆಪ್ಪ, ಪ್ರಧಾನ ಕಾರ್ಯದರ್ಶಿ ತಿಪ್ಪೇಸ್ವಾಮಿ ನಡುಮನಿ, ಕಾರ್ಯಾಧ್ಯಕ್ಷ ಎಚ್.ಪಿ. ಶರಣಪ್ಪ, ರಸೂಲ್, ಆಲೂರು ವೀರೇಶ್, ಉಪಾಧ್ಯಕ್ಷ ಪಿ. ಜಯರಾಜ್, ಯು.ನಾಗೇಶ್, ಬಿ. ಈಶ್ವರಪ್ಪ, ಕಾನೂನು ಸಲಹೆಗಾರ ಕೆ. ಚನ್ನಪ್ಪ, ಪ್ರಕಾಶ ಪಾಟೀಲ್, ಕೆ.ವಿ. ಮಂಜಣ್ಣ, ಎಂ. ಶಿವಪ್ರಸಾದ್, ಚಿತ್ತಬಡಿಗೆ ನಾಗೇಶ್, ಎನ್.ಜಿ. ರಮೇಶ ಗೌಡ, ಜೆ.ಸಿ. ಹಟ್ಟಿ, ಅಧ್ಯಕ್ಷ ಓಬಳೇಶ್, ಮಾರಪ್ಪ, ಆಲೂರು ಅಧ್ಯಕ್ಷರು ಪಿ. ವೀರೇಶ್ ಪೂಜಾರಹಳ್ಳಿ, ಅಧ್ಯಕ್ಷರು ಎನ್.ಎಂ. ಬಸವರಾಜ್, ಎಸ್.ವಿ. ಶಿವುಕುಮಾರ, ಅರವಿಂದ್, ವೀರೇಶ ಶರ್ಮ, ರೈತ ಮೋರ್ಚಾ ಅಧ್ಯಕ್ಷ ಪೋಟೋ ತಿಪ್ಪೇಸ್ವಾಮಿ, ಪೋಟೋ ಮುರುಳೀಧರ, ಸಪಾರಿ ರಾಜು, ಸೂರ್ಯಪ್ರಕಾಶ್. ಗ್ಯಾರೇಜ್ ಸ್ವಾಮಿ, ಮತ್ತು ಗ್ರಾಮದ ಸಾರ್ವಜನಿಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.