ಸವಲತ್ತು ಪಡೆಯಲು ಶೋಷಿತ ಮಹಿಳೆಯರಿಗೆ ನೆರವು
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಜು. 25
ಲೈಂಗಿಕ ವೃತ್ತಿನಿರತ ಮಹಿಳೆಯರು ತಮ್ಮ ಸಹಜ ಸಾಮಾಜಿಕ ಸವಲತ್ತುಗಳನ್ನು ಪಡೆಯುವಲ್ಲಿ ಇರುವ ಸವಾಲುಗಳನ್ನು ನಿವಾರಿಸಲು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸಹಕರಿಸುತ್ತದೆ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ವಿಶ್ವೇಶ್ವರ ಭಟ್ ತಿಳಿಸಿದರು.
ಬೆಳಕು ಸೌಖ್ಯ ಸಮುದಾಯ ಸಂಘಟನೆ, ಕರ್ನಾಟಕ ಆರೋಗ್ಯ ಸಂವರ್ಧನಾ ಪ್ರತಿಷ್ಠಾನ ಬೆಂಗಳೂರು (ಕೆಎಚ್ಪಿಟಿ) ಹಾಗೂ 'ಸಂವೇದನ' ಯೋಜನೆಯಡಿಯಲ್ಲಿ ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಈಚೆಗೆ ಹಮ್ಮಿಕೊಳ್ಳಲಾಗಿದ್ದ 'ಮಹಿಳೆಯರ ಮೇಲೆ ದೌರ್ಜನ್ಯ ತಡೆ' ಕುರಿತು ಜಿಲ್ಲಾ ಮಟ್ಟದ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಿವಿಧ ರೀತಿಯ ವಂಚನೆ ಮತ್ತು ಶೋಷಣೆಗೆ ಒಳಗಾಗಿ ಲೈಂಗಿಕ ವೃತ್ತಿಯಲ್ಲಿ ತೊಡಗಿಸಿಕೊಂಡಿರುವ ನೊಂದ ಮಹಿಳೆಯರು ತಮ್ಮ ಹಕ್ಕಿನಿಂದ ಸಾಮಾಜಿಕ ಸವಲತ್ತುಗಳನ್ನು ಪಡೆಯಲು ಸಂಘಟಿತ ವೇದಿಕೆಯಿಂದ ಮಾತ್ರ ಸಾಧ್ಯ ಎಂದು ಅವರು ತಿಳಿಸಿದರು.
ಜಿಲ್ಲಾ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಮುಖ್ಯ ನ್ಯಾಯಿಕ ದಂಡಾಧಿಕಾರಿ ಎಂ.ಎಚ್. ಶಾಂತಾ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಲೈಂಗಿಕ ವೃತ್ತಿಯ ಮಹಿಳೆಯರು ತಮ್ಮ ಸಮಸ್ಯೆಗಳಿಗೆ ಕಾನೂನು ನೆರವು ಬೇಕಾದಲ್ಲಿ ಹಿಂಜರಿಯದೆ ಜಿಲ್ಲಾ ಉಚಿತ ಕಾನೂನು ಸೇವಾ ಪ್ರಾಧಿಕಾರವನ್ನು ಸಂಪರ್ಕಿಸಬಹುದು ಎಂದರು. ಬಳ್ಳಾರಿಯ ಹೆಚ್ಚುವರಿ ಪೊಲೀಸ್ ಅಧಿಕ್ಷಕ ಸಿ.ಕೆ. ಬಾಬ ಮಾತನಾಡಿ, ಪೊಲೀಸ್ ಕಾಯ್ದೆ ಕಾನೂನುಗಳಲ್ಲಿ ಬದಲಾವಣೆಯಾಗಿದೆ. ಲೈಂಗಿಕ ವೃತ್ತಿನಿರತ ಮಹಿಳೆಯರನ್ನು ಈಗ ನೊಂದ ಮಹಿಳೆಯರನ್ನಾಗಿ ಭಾವಿಸಲಾಗುತ್ತಿದೆ. ಪೊಲೀಸರು ಹಿಂದಿನಂತೆ ಕಾರಣವಿಲ್ಲದೆ ಬಂಧಿಸಲಾಗದು ಎಂದರು. ಸೌಖ್ಯ ಬೆಳಕು ಸಮುದಾಯ ಸೇವಾ ಸಂಘದ ಅಧ್ಯಕ್ಷೆ ಪ್ರಿಯ ಅಧ್ಯಕ್ಷತೆ ವಹಿಸಿ, ಮಾತನಾಡಿದರು.
ಜಾಥಾ: ಈ ಸಂದರ್ಭದಲ್ಲಿ ಬಳ್ಳಾರಿಯ ವಕೀಲರ ಸಂಘದ ಅಧ್ಯಕ್ಷ ಎ.ಜಿ. ಶಿವಕುಮಾರ್, ಉಪಾಧ್ಯಕ್ಷ ಎರೇಗೌಡ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಡಿ.ಎಸ್. ಕಲಾದಗಿ, ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ. ನರಸಿಂಹಮೂರ್ತಿ, ಕೆಎಚ್ಪಿಟಿ ಕೊಪ್ಪಳ ವಿಭಾಗೀಯ ಉಪ ನಿರ್ದೇಶಕ ಎಂ ಸುರೇಶ್, ಪ್ರಾದೇಶಿಕ ವ್ಯವಸ್ಥಾಪಕ ಪೀರ್ ಮೊಹ್ಮದ್ ಇದ್ದರು. ಕೆಎಚ್ಪಿಟಿ ಬಾಲಸುಬ್ರಮಣ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಗೀತಾ ಪ್ರಾರ್ಥಿಸಿದರು. ಉಮಾ ಸ್ವಾಗತಿಸಿದರು. ಮಂಜುನಾಥ ನಿರೂಪಿಸಿದರು. ಯಲ್ಲಮ್ಮ ವಂದಿಸಿದರು. ಕಾರ್ಯಕ್ರಮಕ್ಕೂ ಮುನ್ನ ಸಂವೇದನ ಯೋಜನೆಯಡಿ ಮಹಿಳೆಯರ ಮೇಲಾಗುವ ದೌರ್ಜನ್ಯ ತಡೆ ನಿಟ್ಟಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾ ಮಟ್ಟದ ಜಾಥಾ ಕಾರ್ಯಕ್ರಮವನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಆವರಣದಲ್ಲಿ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಮುಖ್ಯ ನ್ಯಾಯಿಕ ದಂಡಾಧಿಕಾರಿ ಎಂ.ಎಚ್. ಶಾಂತಾ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು. ಜಿಲ್ಲೆಯ ವಿವಿಧ ತಾಲೂಕುಗಳಿಂದ ಆಗಮಿಸಿದ್ದ 250ಕ್ಕೂ ಹೆಚ್ಚು ಮಹಿಳೆಯರು ನಗರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಆವರಣದಿಂದ ಡಾ. ಬಿ.ಆರ್. ಅಂಬೇಡ್ಕರ್ ಭವನದವರೆಗೆ ಜಾಥಾ ನಡೆಸಿದರು.