ಸುದ್ದಿ ಸಂಕ್ಷೇಪ
ಇಂದು ವಿದ್ಯುತ್ ವ್ಯತ್ಯಯ
ಬಳ್ಳಾರಿ: ಬಳ್ಳಾರಿಯ 110 ಕೆ.ವಿ. ಮೋಕಾ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಜು. 26ರಂದು ತ್ರೈಮಾಸಿಕ ನಿರ್ವಹಣಾ ಕಾರ್ಯ ಹಮ್ಮಿಕೊಂಡಿದ್ದು, ಈ ಕೇಂದ್ರದಿಂದ ಸರಬರಾಜಾಗುವ ಎಲ್ಲ ಹಳ್ಳಿಗಳಲ್ಲಿ ಅಂದು ಬೆಳಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆ ವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಜೆಸ್ಕಾಂನ ಕಾರ್ಯ ಮತ್ತು ಪಾಲನಾ ಗ್ರಾಮೀಣ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಗೌಡ ಗಣೇಶ ತಿಳಿಸಿದ್ದಾರೆ.
ನಗರದಲ್ಲೂ ಕಡಿತ: ಬಳ್ಳಾರಿ ನಗರದ ವಿವಿಧೆಡೆ ಜು. 26ರಂದು ವಿದ್ಯುತ್ ಕಡಿತ ಉಂಟಾಗಲಿದೆ ಎಂದು ಜೆಸ್ಕಾಂನ ಕಾರ್ಯ ಮತ್ತು ಪಾಲನೆ ನಗರ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಬಿ.ಜಿ. ದೇವರಾಜ ಸ್ವಾಮಿ ತಿಳಿಸಿದ್ದಾರೆ. ನಗರದ 110/11 ಕೆ.ವಿ. (ಉತ್ತರ) ಉಪ ವಿದ್ಯುತ್ ವಿತರಣಾ ಕೇಂದ್ರದಲ್ಲಿ ನಿರ್ವಹಣಾ ಕಾರ್ಯ ಕೈಗೊಂಡಿದ್ದು, ಈ ಕೇಂದ್ರದಿಂದ ಸರಬರಾಜಾಗುವ ಎಲ್ಲ ಪ್ರದೇಶಗಳಲ್ಲಿ ಜು. 26ರಂದು ಬೆಳಗ್ಗೆ 9ರಿಂದ ಸಂಜೆ 5ರ ವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಗಾಂಧಿನಗರ, ಕಪ್ಪಗಲ್ಲು ರಸ್ತೆ, ಬಸವೇಶ್ವರ ನಗರ, ನೆಹರೂ ಕಾಲೋನಿ, ಸತ್ಯನಾರಾಯಣಪೇಟೆ, ಗಣೇಶ ಕಾಲೋನಿ, ರಾಘವೇಂದ್ರ ಕಾಲೋನಿ, ಎರಡನೇ ಹಂತ, ಎಂಎಂಟಿಸಿ, ಸ್ಟೇಷನ್ ರಸ್ತೆ, ಕೆ.ಸಿ. ರಸ್ತೆ, ವಡ್ಡರಬಂಡ, ಮಿಲ್ಲರಪೇಟೆ, ಎಟಿಪಿ ರಸ್ತೆ, ಆಟೋನಗರ, ಪಾರ್ವತಿನಗರ, ಮೋಕಾ ರಸ್ತೆ ಸೇರಿದಂತೆ ಮತ್ತಿತರ ಪ್ರದೇಶಗಳಲ್ಲಿ ವಿದ್ಯುತ್ ಕಡಿತವುಂಟಾಗಲಿದೆ. ಗ್ರಾಹಕರು ಸಹಕರಿಸಬೇಕೆಂದು ಅವರು ಮನವಿ ಮಾಡಿದ್ದಾರೆ.
ವನಮಹೋತ್ಸವ
ಹೂವಿನಹಡಗಲಿ: ತಾಲೂಕಿನ ಹಿರೇಹಡಗಲಿ ಗ್ರಾಮದ ವಿಕೆಕೆ ಪ್ರೌಢಶಾಲೆಯಲ್ಲಿ ವನಮಹೋತ್ಸವ ಆಚರಿಸಲಾಯಿತು. ಕಾರ್ಯಕ್ರಮಕ್ಕೆ ಉಪಪ್ರಾಚಾರ್ಯ ನಟರಾಜ ಪಾಟೀಲ ಚಾಲನೆ ನೀಡಿದರು. ಶಿಕ್ಷಕ ಯಲ್ಲಪ್ಪ ಹಂದ್ಯಾಳ, ಸೊಪ್ಪಿನ ಪ್ರಭು, ಬಸವರಾಜ ಸುಂಕದ, ಬಿ. ಸೂರ್ಯಕಾಂತ, ಅನಿತಾ ಸೇರಿದಂತೆ ಇತರರಿದ್ದರು. ಶಾಲೆ ಆವರಣದಲ್ಲಿ 60ಕ್ಕೂ ಹೆಚ್ಚು ಸಸಿಗಳನ್ನು ನೆಟ್ಟು ಪೋಷಣೆ ಮಾಡುವ ಜವಬ್ದಾರಿಯನ್ನು ವಿದ್ಯಾರ್ಥಿಗಳಿಗೆ ವಹಿಸಲಾಯಿತು.
ದೇವಸ್ಥಾನ ಕಳವು: ದೂರು ದಾಖಲು
ಬಳ್ಳಾರಿ: ಜಿಲ್ಲೆಯ ಕೂಡ್ಲಿಗಿ ತಾಲೂಕು ಬೇವೂರು ಗ್ರಾಮದ ಶ್ರೀ ವೀರಭದ್ರೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಕಂಚಿನ ದೀಪಗಳು ಸೇರಿದಂತೆ ನಗದು ಹಣವನ್ನು ಕಳವು ಮಾಡಿರುವ ಘಟನೆ ಬುಧವಾರ ಜರುಗಿದೆ. ದೇವಸ್ಥಾನದ ಒಳಗೆ ನುಗ್ಗಿದ ಕಳ್ಳರು, ಗುಡಿಯಲ್ಲಿದ್ದ 2 ಕಂಚಿನ ದೀಪಗಳು ಮತ್ತು ಕಬ್ಬಿಣದ ಹುಂಡಿಯನ್ನು (ಪೆಟ್ಟಿಗೆಯನ್ನು) ಒಡೆದು ರು. 18 ರಿಂದ 20 ಸಾವಿರ ನಗದು ಕಳ್ಳತನ ಮಾಡಿ ಪರಾರಿಯಾಗಿದ್ದಾರೆ. ಕೊಟ್ಟೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೈಕ್ ಡಿಕ್ಕಿ: ಓರ್ವ ಸಾವು
ಬಳ್ಳಾರಿ: ಮೋಟರ್ ಸೈಕಲ್ ಅಪಘಾತದಲ್ಲಿ ವ್ಯಕ್ತಿಯೋರ್ವ ಮೃತಪಟ್ಟು, ಮೂವರು ಗಾಯಗೊಂಡ ಘಟನೆ ನಗರದ ಹವಂಬಾವಿ ಪ್ರದೇಶದಲ್ಲಿ ಜರುಗಿದೆ. ಮಲ್ಲಿಕಾರ್ಜುನ ಎಂಬುವವರೆ ಮೃತವ್ಯಕ್ತಿಯಾಗಿದ್ದು, ಸುಬ್ರಹ್ಮಣ್ಯ ಈಶ್ವರ ರಾವ್, ರಾವ್ ಪತ್ನಿ ಹಾಗೂ ನಿಂಗಪ್ಪ ಎಂಬವರಿಗೆ ಗಾಯಗಳಾಗಿವೆ. ಸುಬ್ರಹ್ಮಣ್ಯ ಅವರು ಪತ್ನಿಯೊಂದಿಗೆ ಬೈಕ್ನಲ್ಲಿ ಹೋಗುತ್ತಿರುವಾಗ ನಗರದ ಹವಂಬಾವಿ ಪ್ರದೇಶದ ಸರ್ಕಾರಿ ಶಾಲೆ ಪಕ್ಕದಲ್ಲಿ ನಿಂತಿದ್ದ ಮಲ್ಲಿಕಾರ್ಜುನಗೆ ಡಿಕ್ಕಿ ಹೊಡೆದಿದ್ದಾರೆ. ಅನಂತರ ನಿಂಗಪ್ಪ ಎಂಬವರಿಗೂ ಡಿಕ್ಕಿ ಹೊಡೆದಿದ್ದಾರೆ. ಇದರಿಂದ ಗಾಯಗೊಂಡ ಮಲ್ಲಿಕಾರ್ಜುನ ಅವರನ್ನು ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಈಶ್ವರರಾವ್, ಅವರ ಪತ್ನಿ ಹಾಗೂ ನಿಂಗಪ್ಪಗೆ ಗಾಯಗಳಾಗಿವೆ. ಬಳ್ಳಾರಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.