ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಭೂಮಿಯೂ ಇಲ್ಲ ಪರಿಹಾರ ಸಿಗಲಿಲ್ಲ

Mainashree
Updated On : 27 Jul 2013, 11:26 am

ಕನ್ನಡಪ್ರಭ ವಾರ್ತೆ, ಹೂವಿನಹಡಗಲಿ, ಜು. 26
ದೀಪದ ಕೆಳಗೆ ಕತ್ತಲು ಎನ್ನುವ ಮಾತಿನಂತೆ ತಾಲೂಕಿನ ಸಾವಿರಾರು ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಗಿಸಲು ಕಾಲುವೆ ನಿರ್ಮಾಣಕ್ಕಾಗಿ ಭೂಮಿ ಕಳೆದುಕೊಂಡ ರೈತರು ಪರಿಹಾರಕ್ಕಾಗಿ ನಿತ್ಯ ವಿಶೇಷ ಭೂಸ್ವಾಧೀನಾಧಿಕಾರಿ ಕಚೇರಿಗೆ ಅಲೆದಾಡುವಂತಾಗಿದೆ.
ಕಳೆದ 4 ವರ್ಷಗಳಿಂದ ಸರ್ಕಾರ ಖಾಯಂ ವಿಶೇಷ ಭೂಸ್ವಾಧೀನಾಧಿಕಾರಿಯನ್ನು ನಿಯೋಜಿಸಿಲ್ಲ, ದೇವರಿಲ್ಲದ ಗುಡಿಯಂತಾಗಿರುವ ಕಚೇರಿಗೆ ರೈತರು ಪರಿಹಾರಕ್ಕಾಗಿ ಅಲೆದಾಡಿದರೂ ಅಧಿಕಾರಿಗಳು ಕೈಗೆ ಸಿಗದೆ ಬಂದ ದಾರಿಗೆ ಸುಂಕವಿಲ್ಲದಂತೆ ಸರ್ಕಾರದ ಕ್ರಮ ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಹಿಡಿಶಾಪ ಹಾಕುತ್ತಾ ದಿನ ದೂಡುತ್ತಿದ್ದಾರೆ.
ಸಿಂಗಟಾಲೂರು ಏತನೀರಾವರಿ ಯೋಜನೆಯನ್ನು ಅಂದಿನ ಸಿಎಂ ಜಗದೀಶ ಶೆಟ್ಟರ್ ಲೋಕಾರ್ಪಣೆ ಮಾಡಿ ಒಂದು ವರ್ಷ ಕಳೆದಿದೆ. ಆದರೆ ಯೋಜನೆಯ ಕಾಲುವೆ ನಿರ್ಮಾಣಕ್ಕಾಗಿ ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ಮಾತ್ರ ಇನ್ನು ಗಗನ ಕುಸುಮ. ಕಾಲುವೆ ನಿರ್ಮಾಣಕ್ಕಾಗಿ ಭೂಸ್ವಾಧೀನಕ್ಕು ಮುನ್ನ ರೈತರ ಜಮೀನಿನಲ್ಲಿ ಗುತ್ತಿಗೆದಾರರು ದೌರ್ಜನ್ಯದಿಂದ ಕಾಲುವೆ ನಿರ್ಮಾಣ ಮಾಡಿದ್ದೇ ಪರಿಹಾರ ವಿಳಂಬಕ್ಕೆ ಕಾರಣ. ಹೀಗಾಗಿ ನೀರಾವರಿ ನಿಗಮಕ್ಕೆ ಈವರೆಗೂ ಸಮರ್ಪಕ ವರದಿ ಕಳಿಸಲು ಆಗುತ್ತಿಲ್ಲ. ಅರಣ್ಯ, ತೋಟಗಾರಿಕೆ ಇಲಾಖೆಗಳ ಸರ್ವೇ ಮಾಹಿತಿ ವಿಳಂಬದಿಂದ ಸಂತ್ರಸ್ತರಿಗೆ ಪರಿಹಾರ ವಿತರಣೆಯಾಗಿಲ್ಲ, ಪರಿಹಾರಕ್ಕಾಗಿ ರೈತರು ಇಲಾಖೆಗೆ ಸಲ್ಲಿಸಬೇಕಿದ್ದ ಎಲ್ಲ ದಾಖಲೆಗಳನ್ನು ಸಲ್ಲಿಸಿದರೂ ಈವರೆಗೂ ಪರಿಹಾರ ನೀಡಿಲ್ಲ ಎನ್ನುತ್ತಾರೆ ರೈತರು.
1200 ಎಕರೆಗೆ ಪರಿಹಾರವಿಲ್ಲ: ಬಲದಂಡೆ ಭಾಗದ ಮಾಗಳ, ಹಿರೇಹಡಗಲಿ, ಹಗರನೂರು, ಕೆ. ಅಯ್ಯನಹಳ್ಳಿ, ಹೂವಿನಹಡಗಲಿ, ನಾಗತಿಬಸಾಪುರ, ನಂದಿಹಳ್ಳಿ, ಹೂಳಗುಂದಿ, ದಾಸರಹಳ್ಳಿ, ಮುದೇನೂರು, ರಾಜವಾಳ ಸೇರಿದಂತೆ ಒಟ್ಟು 11 ಗ್ರಾಮಗಳ 1200 ಎಕರೆ ಜಮೀನನ್ನು ಕಾಲುವೆ ನಿರ್ಮಾಣಕ್ಕಾಗಿ ಭೂಸ್ವಾಧೀನ ಮಾಡಿಕೊಳ್ಳಲಾಗಿದೆ. ಪರಿಹಾರಕ್ಕಾಗಿ ಬಾಂಡ್ ಪೇಪರ್ ಪಡೆದು ಎಲ್ಲ ಪ್ರಕ್ರಿಯೆಗಳು ವಿಶೇಷ ಭೂಸ್ವಾಧೀನಾಧಿಕಾರಿ ಇಲಾಖೆಯಿಂದ ನಡೆದಿವೆ. ಈಗ ಅವಾರ್ಡ್ ಕೂಡ ಮಾಡಲಾಗುತ್ತಿದೆ ಎನ್ನುತ್ತಾರೆ ಇಲಾಖೆ ದ್ವಿತೀಯದರ್ಜೆ ಸಹಾಯಕ ಶೇಕ್ಷಾವಲಿ.
ಅರೆಬರೆ ಕಾಲುವೆ: ಯೋಜನೆಗೆ ಯಾವುದೇ ತೊಂದರೆ ಉಂಟು ಮಾಡದೇ ಜಮೀನುಗಳಿಗೆ ಬೇಗನೆ ನೀರು ಹರಿಯಲೆಂದು ಸಹಕಾರ ನೀಡಿದ ಪ್ರದೇಶದ ಕೆಲ ಭಾಗಗಳಲ್ಲಿ ಕಾಲುವೆ ಕಾಮಗಾರಿ ಅರೆಬರೆಯಾಗಿದೆ. ಇದರಿಂದ ಸಾವಿರಾರು ಎಕರೆ ಪ್ರದೇಶಕ್ಕೆ ಇನ್ನು ನೀರು ಕೂಡ ದೊರಕಿಲ್ಲ. ಆದರಿಂದ ಅಧಿಕಾರಿಗಳು ಇರುವ ತೊಂದರೆಗಳನ್ನು ಸರಿಪಡಿಸಿ ರೈತರ ಜಮೀನುಗಳಿಗೆ ನೀರಿನ ಸೌಲಭ್ಯ ಒದಗಿಸಬೇಕೆಂದು ರೈತರು ಆಗ್ರಹಿಸುತ್ತಾರೆ. ಅಲ್ಲಿಪುರದ ರೈತರೊಬ್ಬರು ತಮ್ಮ ಜಮೀನಿನಲ್ಲಿ ಕಾಲುವೆ ನಿರ್ಮಾಣಕ್ಕೆ ಅವಕಾಶ ನೀಡದ ಕಾರಣ ಕಾಲುವೆ ಕಾಮಗಾರಿ ಅರೆಬರೆಯಾಗಿದೆ. ಆದಷ್ಟು ಬೇಗ ರೈತರೊಂದಿಗೆ ಮಾತುಕತೆ ನಡೆಸಿ ತೊಂದರೆಯನ್ನು ಸರಿಪಡಿಸಿ ರೈತರ ಜಮೀನುಗಳಿಗೆ ನೀರಾವರಿ ಸೌಲಭ್ಯ ಒದಗಿಸಲಾಗುವುದು ಎಂದು ಅಧಿಕಾರಿಗಳು ಭರವಸೆ ನೀಡುತ್ತಾರೆ. ಆದರೆ ಯೋಜನೆಗಾಗಿ ಭೂಮಿ ನೀಡಿದ ರೈತರಿಗೆ ಪರಿಹಾರವೂ ಸಿಗದೇ ಇಲ್ಲ ನೀರಾವರಿ ಸೌಲಭ್ಯ ಸಿಗದೇ ಸಂಕಷ್ಟದಲ್ಲಿ ಜೀವನ ಮುಂದೂಡುತ್ತಿದ್ದಾರೆ.
 ಯೋಜನೆಯ ಕಾಲುವೆ ಕಾಮಗಾರಿ ನಿರ್ಮಾಣಕ್ಕಾಗಿ 4(1) ನೋಟಿಸ್ ನೀಡಿರುವ ಸಂದರ್ಭದಲ್ಲಿ ಸಂಬಂಧಿಸಿದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಬೇಕಿತ್ತು. ಯಾವ ಕಾರಣಕ್ಕೂ ರೈತರ ಮೇಲೆ ಒತ್ತಡ ತಂದು ಗುತ್ತಿಗೆದಾರರು ಕಾಲುವೆ ಕಾಮಗಾರಿ ಮಾಡಿಲ್ಲ. ಸಂಬಂಧಪಟ್ಟ ರೈತರಿಂದ ಒಪ್ಪಿಗೆ ಪಡೆದೇ ಗುತ್ತಿಗೆದಾರರು ಕಾಲುವೆ ಮಾಡಿದ್ದಾರೆ.
- ಓದೋ ಗಂಗಪ್ಪ,
ಯೋಜನೆಯ ಎಇ.
 
ಜಮೀನಿನಲ್ಲಿ ಕಾಲುವೆ ನಿರ್ಮಾಣ ಮಾಡಿ 2 ವರ್ಷ ಕಳೆಯುತ್ತಾ ಬಂದರು ಸರ್ಕಾರ ಪರಿಹಾರ ನೀಡುತ್ತಿಲ್ಲ. ಕಾಲುವೆಗಳಿಗೆ ಜಮೀನು ಕಳೆದುಕೊಂಡು ಪರಿಹಾರಕ್ಕೆ ಹೋರಾಟ ಮಾಡಬೇಕಾದ ಪರಿಸ್ಥಿತಿ ಬಂದಿದೆ. ನಮ್ಮ ಭಾಗದ ಬಹು ದೊಡ್ಡ ಯೋಜನೆ ಬೇಗ ಮುಗಿಯಲಿ, ರೈತರಿಗೆ ನೀರು ಸಿಗಲಿ ಎಂಬ ಕಾರಣಕ್ಕೆ ಈವರೆಗೂ ಕಾಲುವೆ ಪರಿಹಾರಕ್ಕಾಗಿ ಹೋರಾಟ ಮಾಡಿಲ್ಲ. ಯೋಜನೆಗೆ ತೊಂದರೆ ಉಂಟು ಮಾಡಿಲ್ಲ. ಆದರಿಂದ ಅಧಿಕಾರಿಗಳು ಎಚ್ಚೆತ್ತು ರೈತರು ಹೋರಾಟ ಮಾಡುವ ಮುನ್ನವೇ ಪರಿಹಾರ ನೀಡಲಿ.
- ಹಗರನೂರು, ಹಿರೇಹಡಗಲಿ,
ಮಾಗಳ, ಅಲ್ಲಿಪುರ ಸಂತ್ರಸ್ತರು.

 ಚಂದ್ರು ಕೊಂಚಿಗೇರಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement