ಕಂಪ್ಲಿ-ಗಂಗಾವತಿ ಸೇತುವೆ ಜಲಾವೃತ
ಬಳ್ಳಾರಿ: ತುಂಗಭದ್ರಾ ಜಲಾಶಯದಿಂದ ನದಿಗೆ 1.24 ಲಕ್ಷ ಕ್ಯುಸೆಕ್ ನೀರು ಹರಿ ಬಿಟ್ಟಿರುವ ಹಿನ್ನೆಲೆಯಲ್ಲಿ ಕಂಪ್ಲಿ-ಗಂಗಾವತಿ ಸೇತುವೆ ಸಂಪೂರ್ಣ ಮುಳುಗಡೆಯಾಗಿದ್ದು, ನದಿ ತೀರದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.
ನದಿಗೆ ಇನ್ನು ಹೆಚ್ಚಿನ ನೀರು ಬಿಡುವ ಸಾಧ್ಯತೆ ಇರುವುದರಿಂದ ನದಿ ಪಾತ್ರದ ಜನರು ಎಚ್ಚರದಿಂದ ಇರಬೇಕು ಎಂದು ತುಂಗಭದ್ರಾ ಬೋರ್ಡ್ ಅಧಿಕಾರಿಗಳು ತಿಳಿಸಿದ್ದಾರೆ. ನದಿ ನೀರು ಹೆಚ್ಚಾದ ಹಿನ್ನೆಲೆಯಲ್ಲಿ ಗಂಗಾವತಿ-ಕಂಪ್ಲಿ ನಡುವೆ ಯಾವುದೇ ವಾಹನ ಸಂಚರಿಸಲಾಗದ ಪರಿಸ್ಥಿತಿ ಎದುರುರಾಗಿದೆ.
ಜಲಾಶಯ ಈಗಾಗಲೇ ಗರಿಷ್ಠ ಮಟ್ಟ ತಲುಪುತ್ತಿರುವ ಹಿನ್ನೆಲೆಯಲ್ಲಿ ನದಿಗೆ ಇನ್ನು ಹೆಚ್ಚಿನ ನೀರು ಬಿಡುವ ಸಾಧ್ಯತೆ ಇರುವುದರಿಂದ ಸೇತುವೆಯ ಮೇಲಿನ ವಾಹನ ಸಂಚಾರವನ್ನು ಶನಿವಾರ ಮಧ್ಯಾಹ್ನ 3 ಗಂಟೆಯಿಂದಲೇ ಸ್ಥಗಿತಗೊಳಿಸಲಾಗಿದೆ. ಕಂಪ್ಲಿ- ಗಂಗಾವತಿ ಸೇತುವೆ ಮೇಲೆ ನೀರು ರಭಸವಾಗಿ ಹರಿಯುತ್ತಿರುವ ಪರಿಣಾಮ ನದಿ ಪಕ್ಕದ ಬಾಳೆ ತೋಟ ಮತ್ತು ಬತ್ತದ ಗದ್ದೆಗಳು ನೀರಿನಿಂದ ಆವೃತ್ತವಾಗಿವೆ. ಈಗಾಗಲೇ ನದಿ ಪಾತ್ರದ ಹಳ್ಳಿಗಳಲ್ಲಿ ಡಂಗುರ ಸಾರಿ ಸಾರ್ವಜನಿಕರಿಗೆ ಮುನ್ನೆಚ್ಚರಿಕೆ ನೀಡಲಾಗಿದೆ. ಪ್ರವಾಹ ಇಳಿಮುಖವಾಗುವ ವರೆಗೆ ಮೀನುಗಾರರು ನದಿಗೆ ಇಳಿಯಬಾರದು, ನದಿ ತೀರದ ಪಂಪ್‌ಸೆಟ್‌ಗಳನ್ನು ರೈತರು ಈಗಾಗಲೇ ಸುರಕ್ಷಿತ ಪ್ರದೇಶಗಳಿಗೆ ಕೊಂಡೊಯ್ದಿದ್ದಾರೆ. ಸೇತುವೆ ಸಮೀಪ ಕಂಪ್ಲಿ ಪುರಸಭೆ ವತಿಯಿಂದ ವಿದ್ಯುತ್ ದೀಪದ ವ್ಯವಸ್ಥೆ ಮಾಡಲಾಗಿದೆ. ಉಪತಹಸೀಲ್ದಾರ್ ಕೆ. ಬಾಲಪ್ಪ ಸೇರಿದಂತೆ ಕಂಪ್ಲಿ ಪೊಲೀಸ್ ಠಾಣೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದರು.
ಕಂಪ್ಲಿ ಸೇತುವೆ ಮೇಲೆ ನೀರು ಹರಿಯುತ್ತಿರುವ ಪರಿಣಾಮ ಕಂಪ್ಲಿ ಸಂಪರ್ಕ ಕಡಿತಗೊಂಡಿದೆ. ಕಂಪ್ಲಿ-ಗಂಗಾವತಿ ಮೂಲಕ ಸಂಚರಿಸುತ್ತಿರುವ ಪ್ರಯಾಣಿಕರು, ಇದೀಗ ಸೇತುವೆ ಮೇಲೆ ಸಂಚಾರ ನಿಷೇಧವಾದ ಹಿನ್ನೆಲೆಯಲ್ಲಿ 10 ಕಿ.ಮೀ ಪ್ರಯಾಣಿಸಬೇಕಾದ ಪ್ರಯಾಣಿಕರು, ಹೊಸಪೇಟೆ ಮಾರ್ಗವಾಗಿ 40 ಕಿ.ಮೀ ಸಂಚರಿಸಬೇಕಾಗಿದೆ.