ಅಪಹರಣಕ್ಕೊಳಗಾದ ಬಾಲಕಿ ಪತ್ತೆ: ಆರೋಪಿ ಬಂಧನ
ಕೂಡ್ಲಿಗಿ: ತಾಲೂಕಿನ ಹುರುಡಿಹಳ್ಳಿ ಗ್ರಾಮದ 15 ವರ್ಷದ ಬಾಲಕಿಯನ್ನು ಅಪಹರಿಸಿದ್ದ ತು ಮಕೂರು ಜಿಲ್ಲೆ ಶಿರಾ ತಾಲೂಕಿನ ಕೊಟ್ಟಾಗೇಟ್ ಗ್ರಾಮದ ಪ್ರಕಾಶ್ ಎನ್ನುವವನನ್ನು ಭಾನುವಾರ ಬಂಧಿಸಿ, ಬಾಲಕಿಯನ್ನು ಪೋಷಕರ ವಶಕ್ಕೆ ಗುಡೇಕೋಟೆ ಪೊಲೀಸರು ಒಪ್ಪಿಸಿದ್ದಾರೆ.
ಹುರುಡಿಹಳ್ಳಿ ಗ್ರಾಮದ ಬಾಲಕಿ ಅಪಹರಣದ ಬಗ್ಗೆ ಗುಡೇಕೋಟೆ ಠಾಣೆಯಲ್ಲಿ ಜು. 24ರಂದು ಪ್ರಕರಣ ದಾಖಲಾಗಿತ್ತು. ತನಿಖೆ ಆರಂಭಿಸಿದ ಪೊಲೀಸರು ಆರೋಪಿ ಪ್ರಕಾಶ(21)ನನ್ನು ಶಿರಾ ತಾಲೂಕಿನ ಕೊಟ್ಟಾಗೇಟ್‌ದಲ್ಲಿ ಬಂಧಿಸಿ, ಬಾಲಕಿಯನ್ನು ಪಾಲಕರಿಗೆ ಒಪ್ಪಿಸಿದ್ದಾರೆ. ಆರೋಪಿ ವಿರುದ್ಧ ಅಪಹರಣ ಮತ್ತು ಜಾತಿ ನಿಂದನೆ ದೂರು ದಾಖಲಿಸಲಾಗಿದೆ ಎಂದು ಗುಡೇಕೋಟೆ ಪಿಎಸ್‌ಐ ನವೀನಗೌಡ ತಿಳಿಸಿದ್ದಾರೆ.
ಆರೋಪಿಯ ಮೊಬೈಲ್ ಟವರ್ ಜಾಡು ಹಿಡಿದ ಪೊಲೀಸರು ಪ್ರಕರಣ ಭೇದಿಸಿದ್ದಾರೆ. ಬಾಲಕಿಯನ್ನು ಅಪಹರಿಸಿ ತನ್ನ ಚಿಕ್ಕಪ್ಪನ ಮನೆಯಲ್ಲಿ ಬಂಧಿಸಿಟ್ಟಿದ್ದನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ಅಪಹರಣಕ್ಕೊಳಗಾಗಿದ್ದ ಬಾಲಕಿಯು ತನ್ನನ್ನು ಬಲತ್ಕಾರವಾಗಿ ಅಪಹರಿಸಿಕೊಂಡು ಹೋಗಿ ಅತ್ಯಾಚಾರ ಮಾಡಿ, ಜಾತಿ ನಿಂದನೆ ಮಾಡಲಾಗಿದೆ ಎನ್ನುವ ಹೇಳಿಕೆಯನ್ನು ತೆಗೆದುಕೊಂಡ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿದ್ದಾರೆ.
ಅಪಹರಿಸಿದ್ದು ಹೇಗೆ: ಹುರುಡಿಹಳ್ಳಿಯ ಬಾಲಕಿ ಕಡೆಯವರು ದಾವಣಗೆರೆಗೆ ಕೂಲಿ ಕೆಲಸಕ್ಕೆಂದು ಹೋಗಿದ್ದರು. ಶಿರಾ ತಾಲೂಕು ಕೊಟ್ಟಾಗೇಟ್ ಗ್ರಾಮದ ಪ್ರಕಾಶ್ ಸಹ ಅಲ್ಲಿಗೆ ಕೆಲಸಕ್ಕೆ ಬಂದಿದ್ದನು. ಆಗ ಈ ಬಾಲಕಿ ಪರಿಚಯವಾಗಿದ್ದಳು. ಆಗಿನಿಂದಲೇ ಈ ಬಾಲಕಿಯನ್ನು ಅಪಹರಿಸುವ ಯತ್ನ ಮಾಡಿದ್ದಾನೆ. ಕೆಲಸದಲ್ಲಿ ಪರಿಚಯವಾಗಿದ್ದ ಹುರುಡಿಹಳ್ಳಿಯ ಇತರೆ ಯುವಕರ ಜೊತೆ ಇತ್ತೀಚೆಗೆ ಕೊಟ್ಟಾಗೇಟ್ ಗ್ರಾಮದ ಪ್ರಕಾಶ್ ಕೂಡ್ಲಿಗಿ ತಾಲೂಕಿನ ಹುರುಡಿಹಳ್ಳಿಗೆ ಬಂದಿದ್ದಾನೆ.
ಜು.22ರಂದು ರಾತ್ರಿ 8 ಗಂಟೆಗೆ ಆ ಬಾಲಕಿ ಬಹಿರ್ದೆಸೆಗೆ ಹೋಗಿದ್ದಾಗ ಬಾಲಕಿಯನ್ನು ಹುರುಡಿಹಳ್ಳಿಯಿಂದ ಹಾನಗಲ್ ಮಾರ್ಗವಾಗಿ ತನ್ನ ಊರಾದ ಶಿರಾ ತಾಲೂಕು ಕೊಟ್ಟಾಗೇಟ್ ಗ್ರಾಮಕ್ಕೆ ಕರೆದೊಯ್ದು ಅಲ್ಲಿ ತನ್ನ ಚಿಕ್ಕಪ್ಪನ ಮನೆಯಲ್ಲಿ ಇಟ್ಟಿದ್ದನು. ಗುಡೇಕೋಟೆ ಪೊಲೀಸರು ಈ ಜಾಡನ್ನು ಹಿಡಿದು ಹೊರಟಾಗ ಆರೋಪಿ ಬಲೆಗೆ ಬಿದ್ದಿದ್ದಾನೆ. ಆರೋಪಿ ಪ್ರಕಾಶನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಗುಡೇಕೋಟೆ ಪಿಎಸ್‌ಐ ನವೀನಗೌಡ ತಿಳಿಸಿದ್ದಾರೆ.