ಉಪ ಸಮಿತಿ ಶಿಫಾರಸುಗಳ ಅನುಮೋದನೆ: ಸಂತಸ
ಬಳ್ಳಾರಿ: ಸಂವಿಧಾನದ 371 (ಜೆ) ಕಲಂ ಅನುಷ್ಠಾನದ ಕುರಿತು ರಾಜ್ಯ ಸಚಿವ ಸಂಪುಟ ಉಪ ಸಮಿತಿಯ ಶಿಫಾರಸುಗಳನ್ನು ರಾಜ್ಯ ಸರ್ಕಾರ ಅನುಮೋದಿಸಿರುವುದು ಹೈ-ಕ ಜನರ ದಶಕಗಳ ಹೋರಾಟಕ್ಕೆ ಸಂದ ಫಲ. ಹೋರಾಟ ಸಮಿತಿಯ ಬಹುತೇಕ ಬೇಡಿಕೆಗಳನ್ನು ಈಡೇರಿಸಲು ಮುಂದಾಗಿರುವುದು ಹರ್ಷದಾಯಕ ಎಂದು ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿ ಬಳ್ಳಾರಿ ಜಿಲ್ಲಾ ಘಟಕದ ಸಂಚಾಲಕ ಸಿರಿಗೇರಿ ಪನ್ನರಾಜ್ ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿಯ ನಿಯೋಗ ಮುಖಂಡ ವೈಜನಾಥ ಪಾಟೀಲ್ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ, ಈ ಭಾಗದ ಅಭಿವೃದ್ಧಿಗೆ ಕೈಗೊಳ್ಳಬಹುದಾದ ಕ್ರಮಗಳ ಕುರಿತು ಮನವಿ ಸಲ್ಲಿಸಲಾಗಿತ್ತು. ಅಂತೆಯೇ ರಾಜ್ಯ ಸರ್ಕಾರದ ಸಚಿವ ಸಂಪುಟ ಉಪ ಸಮಿತಿಯ ಸಂವಿಧಾನ 371 (ಜೆ) ಕಲಂ ಅನುಷ್ಠಾನದ ಶಿಫಾರಸ್ಸುಗಳನ್ನು ಸರ್ಕಾರ ಅನುಮೋದಿಸಿದ್ದು, ಹೋರಾಟ ಸಮಿತಿಯ ಬಹುತೇಕ ಬೇಡಿಕೆಗಳನ್ನು ಈಡೇರಿಸಿರುವುದು ಸಂತಸ ತಂದಿದೆ. ಹೋರಾಟ ಸಮಿತಿಯು ಸಚಿವ ಸಂಪುಟ ಉಪ ಸಮಿತಿಯ ಅಧ್ಯಕ್ಷ ಎಚ್.ಕೆ. ಪಾಟೀಲ್ ಹಾಗೂ ತಂಡಕ್ಕೆ ಹಾಗೂ ಸಿಎಂ ಸಿದ್ದರಾಮಯ್ಯ ಅವರಿಗೂ ಅಭಿನಂದಿಸುತ್ತದೆ ಎಂದು ಪನ್ನರಾಜ್ ತಿಳಿಸಿದ್ದಾರೆ.