ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಜಾತಿಯಡಿ ದೇವ ಮೈಲಾರಲಿಂಗನ ಟೀಕೆ ಸಲ್ಲ

Lingaraj Badiger
Updated On : 29 Jul 2013, 11:40 am

ಕನ್ನಡಪ್ರಭ ವಾರ್ತೆ, ಹೂವಿನಹಡಗಲಿ ಜು. 28
ನಾಡಿನ ಆರಾಧ್ಯ ದೈವ, ಜಾತ್ಯತೀತ ಪರಿಕಲ್ಪನೆ ಹಿನ್ನೆಲೆಯುಳ್ಳ ಪ್ರಸಿದ್ಧ ಸುಕ್ಷೇತ್ರ ಶ್ರೀಮೈಲಾರಲಿಂಗೇಶ್ವರ ದೇವಸ್ಥಾನ ಬಗ್ಗೆ ಕೆಲ ಮುಖಂಡರು ಇಲ್ಲಸಲ್ಲದ ಹೇಳಿಕೆ ನೀಡುತ್ತಿರುವುದನ್ನು ದೇವಸ್ಥಾನದ ಬಾಬುದಾರರು ಖಂಡಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿ, ದೇವಸ್ಥಾನದಲ್ಲಿ ವಂಶಪಾರಂಪರ್ಯದಿಂದ ಧರ್ಮಕರ್ತ ವೆಂಕಪ್ಪಯ್ಯ ಒಡೆಯರ್ ದೇವಸ್ಥಾನದ ಧಾರ್ಮಿಕ ವಿಧಿ-ವಿಧಾನಗಳಿಗೆ ಚ್ಯುತಿ ಬಾರದಂತೆ ನೋಡಿಕೊಂಡು ಹೋಗುತ್ತಿದ್ದಾರೆ. ದೇವ ಮೈಲಾರಲಿಂಗನನ್ನು ಜಾತಿ ಸಂಕೋಲೆಯಲ್ಲಿ ಸಿಲುಕಿಸಲು ಹೊರಟಿರುವುದು ಹಾಸ್ಯಾಸ್ಪದ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮೈಲಾರ ಲಿಂಗನ ಚಾಕರಿ ಕಾಯಕದಲ್ಲಿ 27 ವಿವಿಧ ಜಾತಿಯವರು ಧಾರ್ಮಿಕ ಕಾರ್ಯಗಳನ್ನು ನಡೆಸಿಕೊಂಡು ಹೋಗಲು ಅವಕಾಶ ಕಲ್ಪಿಸಲಾಗಿದೆ. ಸಾವಿರಾರು ವರ್ಷಗಳ ಪೌರಾಣಿಕ ಹಾಗೂ ಐತಿಹಾಸಿಕ ಹಿನ್ನೆಲೆಯುಳ್ಳ ಮೈಲಾರಲಿಂಗೇಶ್ವರ ಸ್ವಾಮಿಯ ಪರಂಪರೆಗೆ ಇತ್ತೀಚಿಗೆ ಜಾತಿ ಸಂಘಟನೆಯಾಗಿ ಹುಟ್ಟಿಕೊಂಡ ಕೆಲ ಪೀಠಗಳು ಜಾತಿ ವಿಷಬೀಜ ಬಿತ್ತುವ ಮೂಲಕ ಶ್ರೀ ಕ್ಷೇತ್ರದ ನೀತಿ, ನಿಯಮ ಹಾಗೂ ಸಂಪ್ರದಾಯಗಳಿಗೆ ಚ್ಯುತಿ ತರುವಂತಹ ಪ್ರಯತ್ನ ನಡೆಸಿರುವುದನ್ನು ಸಹಿಸಲು ಸಾಧ್ಯವಿಲ್ಲ ಎಂದರು.
ಇನ್ನು ಮುಂದಾದರೂ ಜಾತಿ ಬಲ ಮುಂದಿಟ್ಟುಕೊಂಡು ದೇವಸ್ಥಾನದ ಆಂತರಿಕ ವಿಚಾರದಲ್ಲಿ ಪರೋಕ್ಷವಾಗಿ ಹಸ್ತಕ್ಷೇಪ ಮಾಡುವುದನ್ನು ಬಿಡಬೇಕು. ಇಲ್ಲದೇ ಹೋದರೆ ಅವರ ವಿರುದ್ಧ ಕಾನೂನು ಹೋರಾಟ ನಡೆಸಲು ಸಿದ್ಧವಿದ್ದೇವೆ ಎಂದು ದೇವಸ್ಥಾನ ಅರ್ಚಕ ಎಂ. ವಿರೂಪಾಕ್ಷ ಭಟ್ಟ, ಪಂಚಮ ಪೂಜಾರ ಟಿ.ಎಚ್. ಇಟಿಗಿ, ಪಿ.ಎನ್. ಇಟಿಗಿ, ಹೆಗ್ಗಪ್ಪನ ಗುಡಿ ಪೂಜಾರಿ ಗಿಂಡಿ ಗುಡ್ಡಪ್ಪ, ಸರಪಳಿ ಪವಾಡದಾರರಾದ ಡಿ. ಮಾಲತೇಶಪ್ಪ, ಡಿ. ಶಿವಪ್ಪ, ಜಜ್ಜೂರಿ ಕಾಯಕ ಮಾಡುವ ಜಜ್ಜೂರಿ ಗುಡ್ಡಪ್ಪ, ಕೋರಿ ನಿಶಾನಿ ಕಾಯಕದ ನಾಗಪ್ಪ, ಛತ್ರಿ ಕಾಯಕದ ಯಮನೂರಪ್ಪ, ಹಡಪದ ಕಾಯಕ ಮಾಡುವ ಪ್ರಕಾಶ ಎಚ್ಚರಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement