ಮಾಧ್ಯಮದಿಂದ ಸಂವಿಧಾನ ಅಂಗಗಳ ಜಾಗೃತಿ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಜು. 28
ಪತ್ರಿಕಾ ಅಂಗವು ತನ್ನದೇ ಆದ ಬದ್ಧತೆ, ಜವಾಬ್ದಾರಿ, ಗೌರವ ಹೊಂದಿದ್ದು, ಸಂವಿಧಾನದ ಮೂರು ಅಂಗಗಳನ್ನು ಜಾಗೃತಿಗೊಳಿಸಲು ಸ್ವಯಂ ಸೇವಾ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಸುದ್ದಿಮೂಲ ಪತ್ರಿಕೆ ಸಂಪಾದಕ ಬಸವರಾಜಸ್ವಾಮಿ ಅಭಿಪ್ರಾಯಪಟ್ಟರು.
ನಗರದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಬಳ್ಳಾರಿ ಮೀಡಿಯಾ ಕ್ಲಬ್ನಿಂದ ನಗರದ ಪೊಲೀಸ್ ಜಿಮ್ಖಾನ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಪೂರ್ವ ಕಾಲದಿಂದಲೂ ಪತ್ರಿಕಾರಂಗ ಸಂವಿಧಾನದ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಈ ಮೂರು ಅಂಗಗಳ ಹಂಗಿಗೆ ಒಳಪಡದೆ, ಜಾಗರೂಕತೆಯಿಂದ ನೋಡಿಕೊಳ್ಳುವ ಸ್ವಯಂ ಸೇವಾ ಸಂಸ್ಥೆಯಾಗಿರುವುದರಿಂದ ಈ ಅಂಗಕ್ಕೆ ವಿಶೇಷ ಗೌರವ ಎಂದರು.
ವೃತ್ತಿ ನೈಪುಣ್ಯ, ಕೌಶಲ್ಯ, ಸಾಮಾಜಿಕ ಕಳಕಳಿ, ಬದ್ಧತೆ ಬೆಳೆಸಿಕೊಂಡು, ಯಾರ ಹಂಗಿನಲ್ಲೂ ಇರದೇ ಹೃದಯವಂತಿಕೆಯಿಂದ ಕೆಲಸ ಮಾಡಿ, ಸಾಮಾಜಿಕ ನ್ಯಾಯಕ್ಕೆ ಬದ್ಧರಾಗಿ, ಸಾಮಾಜಿಕ ಒಳಿತಿಗೆ, ಬಡವರ ಅಭಿವೃದ್ಧಿಗಾಗಿ ಶ್ರಮಿಸುವಂತೆ ಮಾಧ್ಯಮ ಮಿತ್ರರಿಗೆ ಸಲಹೆ ನೀಡಿದರು.
ಗೌರವದಿಂದ ಕಾಣಿ: ಪತ್ರಿಕೆಗಳನ್ನು ವಿತರಿಸುವ, ಹಂಚುವ ಕೆಲಸವನ್ನು ಗೌರವಯುತ ಎಂದು ಭಾವಿಸಬೇಕು. ಹಾಲಿನವನಿಗೆ ಸಿಗುವ ಗೌರವ ಪತ್ರಿಕೆ ಹಂಚುವವರಿಗಿಲ್ಲ. ಹಾಲಿನ ದರ ದುಬಾರಿಯಾದರೂ ವಿರೋಧಿಸದ ಜನರು ಪತ್ರಿಕೆ ದರ ಹೆಚ್ಚಿದರೆ ಮರುದಿನವೇ ಪತ್ರಿಕೆ ನಿಲ್ಲಿಸುತ್ತಾರೆ. ಪತ್ರಿಕೆ ಹಣ ನೀಡಲು 15 ದಿನ ಪತ್ರಿಕೆ ಹಂಚುವವರನ್ನು ಸತಾಯಿಸುವುದೂ ಉಂಟು. ಪತ್ರಿಕೆ ಹಂಚುವವರನ್ನು ಗೌರವದಿಂದ ಕಾಣಬೇಕು ಎಂದರು.
ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿವೆ. ಆದರೆ, ಪತ್ರಕರ್ತರಿಗೆ, ಪತ್ರಿಕೆಗಳಿಗೆ ಬಸ್ಪಾಸ್, ಜಾಹೀರಾತುಗಳನ್ನು ಹೊರತುಪಡಿಸಿದರೆ, ಬೇರೆ ಯಾವುದೇ ಯೋಜನೆಗಳನ್ನು ರೂಪಿಸಿಲ್ಲ. ಸರ್ಕಾರ ಪತ್ರಕರ್ತರಿಗೆ ಬಡ್ಡಿರಹಿತ ಸಾಲ, ಮತ್ತಿತರ ಅಗತ್ಯ ಯೋಜನೆಗಳನ್ನು ರೂಪಿಸಬೇಕು ಎಂದು ಒತ್ತಾಯಿಸಿದರು.
ಪ್ರಸ್ತುತ ದಿನಗಳಲ್ಲಿ ಸ್ವ-ರಕ್ಷಣೆಗೆ ಮಾಧ್ಯಮಗಳನ್ನು ಸೃಷ್ಟಿಸಿಕೊಳ್ಳುತ್ತಿದ್ದು, ಇದರಿಂದ ಮಾಧ್ಯಮಗಳ ಬೆಲೆ ಕಡಿಮೆಯಾಗುತ್ತಿದೆ ಎಂದು ವಿಷಾದಿಸಿದ ಬಸವರಾಜ ಸ್ವಾಮಿ, ಪತ್ರಿಕಾ ಲೋಕ ಕೆಳಮುಖದಲ್ಲಿ ಸಾಗುತ್ತಾ, ಅಳಿವಿನ ಅಪಾಯ ಎದುರಿಸುತ್ತಿದೆ. ಅಮೆರಿಕದಂತಹ ಮುಂದುವರಿದ ದೇಶಗಳಲ್ಲಿ 200ಕ್ಕೂ ಹೆಚ್ಚು ಪತ್ರಿಕೆಗಳು ನಿಂತು ಹೋಗಿವೆ. ಇಂತಹ ಸ್ಥಿತಿ ನಮ್ಮ ದೇಶದಲ್ಲಿ ಮುಂದಿನ 10 ವರ್ಷಗಳಲ್ಲಿ ಬಂದರೂ ಆಶ್ಚರ್ಯ ಪಡಬೇಕಾಗಿಲ್ಲ ಎಂದರು.
ಸಹಸಂಪಾದಕ ಗೋಪಾಲಕೃಷ್ಣ ಹೆಗಡೆ ಮಾತನಾಡಿ, ಸಾರ್ವಜನಿಕರಿಗೆ ಒಳಿತಾಗುವ, ಸಮಸ್ಯೆಗಳನ್ನು ನಿವಾರಿಸುವಂತಹ ವಿಷಯಗಳ ಬೆನ್ನತ್ತಿ ಸುದ್ದಿ ಬರೆಯಬೇಕು. ಪತ್ರಿಕಾ ಸ್ವಾತಂತ್ರ್ಯವೆಂದರೆ ಅದು ನಮ್ಮ ಸ್ವಾತಂತ್ರ್ಯವಲ್ಲ. ಅದರು ಜನರಿಗೆ ಇರುವ ಅಧಿಕಾರದ ಭಾಗವಿದ್ದಂತೆ ಎಂದರು.
ಪೊಲೀಸ್ ವರಿಷ್ಠಾಧಿಕಾರಿ ಡಾ. ಚೇತನ್ ಸಿಂಗ್ ರಾಥೋರ್ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿಕೊಟ್ಟ ದಿನಗಳಿಂದಲೂ ಪತ್ರಿಕಾ ಮಾಧ್ಯಮ ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸುತ್ತಾ ಬಂದಿದೆ. ಸ್ವಾತಂತ್ರ್ಯ ಹೋರಾಟಗಾರರು, ನಾಯಕರು ಪತ್ರಿಕೆಗಳಲ್ಲಿ ಅಂಕಣ-ಲೇಖನಗಳನ್ನು ಬರೆದು, ಸ್ವಾತಂತ್ರ್ಯ ಹೋರಾಟದ ಕಿಚ್ಚು ಹಚ್ಚಿದ್ದಾರೆ. ಮಾಧ್ಯಮ ಪ್ರತಿನಿಧಿಯೂ ಸಾಮಾಜಿಕ ಕಳಕಳಿ, ಅಭಿವೃದ್ಧಿಪರ ದೃಷ್ಟಿಕೋನ ಬೆಳೆಸಿಕೊಳ್ಳಬೇಕು ಎಂದರು.
ಹಿರಿಯ ಪತ್ರಕರ್ತ ಎಂ. ಅಹಿರಾಜ್ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಸಿರಿಗೇರಿ ಪನ್ನರಾಜ್, ಕೆ.ಎ. ರಾಮಲಿಂಗಪ್ಪ, ಕೆ. ಸೋಮಶೇಖರ್, ಸೋಮಶೇಖರಗೌಡ, ಪ್ರಭುದೇವ ಕಪ್ಪಗಲ್, ಅಡವಿಸ್ವಾಮಿ, ಚಾನಾಳ್ ಶೇಖರ್, ಮಹೇಶ್, ಪತ್ರಕರ್ತರಾದ ಶಶಿಧರ ಮೇಟಿ, ರವಿ, ಕಾಡ್ಲೂರು ಮಧುಸೂದನ್, ಎಂ.ಬಿ. ಗಿರೀಶ್, ನಾಗರಾಜಸ್ವಾಮಿ, ಇಮಾಮ್ ಗೋಡೇಕಾರ್, ವೀರೇಶ್ ದಾನಿ, ವಿಶ್ವನಾಥ್ ಹೂಗಾರ್, ಪ್ರಕಾಶ್, ಅನಂತಪದ್ಮನಾಭರಾವ್, ಪ್ರಕಾಶ್, ಕ್ಯಾಮೆರಾಮೆನ್ ಮುರಳಿ, ಶಿವಕುಮಾರ್, ಶ್ರೀನಿವಾಸ ಶೆಟ್ಟಿ, ದಿವಾಕರ್, ಛಾಯಾಗ್ರಾಹಕರಾದ ಪುರುಷೋತ್ತಮ ಹಂದ್ಯಾಳ್, ಸಿದ್ದಲಿಂಗಸ್ವಾಮಿ, ಟಿ. ರಾಜನ್, ಶ್ರೀಧರ ಇದ್ದರು.
ಮಂಜುನಾಥ್ ಸಾಲಿ, ಶರಣುಹಂಪಿ ಗಣ್ಯರನ್ನು ಪರಿಚಯಿಸಿದರು. ಸಿದ್ದಯ್ಯ ಹಿರೇಮಠ ಕಾರ್ಯಕ್ರಮ ನಿರೂಪಿಸಿದರು. ನರಸಿಂಹಮೂರ್ತಿ ಕುಲಕರ್ಣಿ ವಂದಿಸಿದರು.
ಕೆ.ಎಂ. ಮಂಜುನಾಥ್, ವೀರಭದ್ರಗೌಡ, ಬಸವರಾಜ್ ಹಾರ್ನಳ್ಳಿ ಗಣ್ಯರಿಗೆ ನೆನಪಿನ ಕಾಣಿಕೆ ನೀಡಿದರು.