ವಿದ್ಯಾರ್ಥಿಗಳಲ್ಲಿ ಸಂಶೋಧನಾ ಗುಣ ಬೇಕು
ಕುರುಗೋಡು: ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಐತಿಹಾಸಿಕ ಕುರುಹುಗಳು ಸಾಕಷ್ಟಿವೆ. ಇವುಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಸಂಶೋಧನಾ ಗುಣ ಬೆಳೆಯಬೇಕಿದೆ ಎಂದು ಪತ್ರಿಕಾ ಛಾಯಾಗ್ರಾಹಕ, ರಂಗ ಕಲಾವಿದ ಪುರುಷೋತ್ತಮ ಹಂದ್ಯಾಳ ಹೇಳಿದರು. ಕುರುಗೋಡಿನ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾಲೇಜಿನ ಇತಿಹಾಸ ಪರಂಪರೆ ಕೂಟ ಹಾಗೂ ಕಾಲೇಜು ಆಡಳಿತ ಮಂಡಳಿ ಜಂಟಿಯಾಗಿ ಹಮ್ಮಿಕೊಂಡಿದ್ದ ಇತಿಹಾಸದ ಅಳಿವು-ಉಳಿವು ವಿಚಾರ ಸಂಕಿರಣದಲ್ಲಿ ವಿಶೇಷ ಉಪನ್ಯಾಸ ನೀಡಿ ಅವರು ಮಾತನಾಡಿದರು. ನಮ್ಮ ವಾಸ್ತವಿಕ ಜೀವನದೊಡನೆ ನಮ್ಮ ಭವ್ಯ ಐತಿಹಾಸಿಕ ಪರಂಪರೆಯೂ ಮುಖ್ಯ. ನಾಡಿನ ವಿವಿಧೆಡೆ ಮಹತ್ವದ ಶಾಸನ, ಸ್ಮಾರಕಗಳು ನಿರ್ಲಕ್ಷ್ಯದಿಂದ ಅವನತಿಯ ಹಾದಿಯಲ್ಲಿದ್ದು, ಇವುಗಳ ರಕ್ಷಣೆಗೆ ಸರ್ಕಾರದ ಗಮನ ಸೆಳೆಯಲು ವಿದ್ಯಾರ್ಥಿಗಳು ಮುಂದಾಗಬೇಕು ಎಂದರು. ಹಿರಿಯ ಇತಿಹಾಸ ಸಂಶೋಧಕ ವೈ. ಹನುಮಂತ ರೆಡ್ಡಿ ಮಾತನಾಡಿ, ಇತಿಹಾಸದ ಪ್ರಜ್ಞೆ ಇರುವವರಿಗೆ ಮಾತ್ರ ಇತಿಹಾಸ ಕಟ್ಟಲು ಸಾಧ್ಯ ಎಂದು ಇತಿಹಾಸದ ಕುರಿತಾಗಿ ತಿಳಿಸಿದರು. ಕಾಲೇಜು ಪ್ರಾಚಾರ್ಯ ಜಿ. ವೆಂಕಟೇಶಲು ಅಧ್ಯಕ್ಷತೆ ವಹಿಸಿ ಮಾತನಾಡಿ, ಇತಿಹಾಸದ ಅಧ್ಯಯನ ಎಂದರೆ ಒಬ್ಬ ರಾಜನ ಇತಿಹಾಸ ಮಾತ್ರವಲ್ಲ. ಅಂದಿನ ಸಮಾಜದ ಸಂಬಂಧಗಳ ಅಧ್ಯಯನ ಆಗಿರುತ್ತದೆ. ಇಂತಹ ಕುರುಹು ಹೊಂದಿರುವ ಸ್ಮಾರಕ ಹಾಗೂ ಶಾಸನಗಳ ರಕ್ಷಣೆ ಹೊಣೆ ವಿದ್ಯಾರ್ಥಿಗಳ ಮೇಲಿದೆ ಎಂದರು.
ಕಾಲೇಜಿನ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾಲೇಜಿನ ಇತಿಹಾಸ ಉಪನ್ಯಾಸಕ ಎನ್. ಶ್ರೀನಿವಾಸ್ ಹಾಗೂ ಅಂತಿಮ ವರ್ಷದ ಬಿಎ ವಿದ್ಯಾರ್ಥಿನಿ ಶ್ರುತಿ ಕಾರ್ಯಕ್ರಮ ನಿರೂಪಿಸಿದರು.