ಸಮಾಜದ ಅಭಿವೃದ್ಧಿಗೆ ಪ್ರಾಮಾಣಿಕ ಶ್ರಮಿಸುವೆ: ಶಿವರಾಮ ಗುಜ್ಜಲ
ಹೊಸಪೇಟೆ: ವಾಲ್ಮೀಕಿ ನಾಯಕ ಸಮಾಜದ ಅಭಿವೃದ್ಧಿ ಮತ್ತು ಸಂಘಟನೆಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದು ತಾಲೂಕು ನಾಯಕ ವಾಲ್ಮೀಕಿ ಸಂಘದ ಅಧ್ಯಕ್ಷ ಶಿವರಾಮ ಗುಜ್ಜಲ ಹೇಳಿದರು.
ನಗರದ ಟಿ.ಬಿ. ಡ್ಯಾಂನ ಅಯ್ಯಂಗಾರ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಅಧಿಕಾರ ಸ್ವೀಕಾರ ಹಾಗೂ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿ, ತಾಲೂಕಿನಲ್ಲಿ ನಾಯಕ ಸಮುದಾಯದವರು ಹೆಚ್ಚಾಗಿದ್ದು, ಶೈಕ್ಷಣಿಕ, ರಾಜಕೀಯ ಹಾಗೂ ಆರ್ಥಿಕವಾಗಿ ಅಭಿವೃದ್ಧಿ ಹೊಂದಿಲ್ಲ. ಸರ್ಕಾರದ ಸೌಲಭ್ಯಗಳು ಸರಿಯಾಗಿ ತಲುಪದೇ ಇರುವುದೆ ಸಮಾಜದವರು ಆರ್ಥಿಕವಾಗಿ ಹಿಂದುಳಿದಿದ್ದಾರೆ. ಈ ನಿಟ್ಟಿನಲ್ಲಿ ಸಮಾಜದವರಿಗೆ ನ್ಯಾಯಯುತವಾಗಿ ಸಿಗಬೇಕಾದ ಸೌಲಭ್ಯಗಳನ್ನು ಒದಗಿಸಲು ಶಕ್ತಿ ಮೀರಿ ಶ್ರಮಿಸುವೆ ಎಂದರು.
ರೈತ ಸಂಘದ ಮಾಜಿ ಅಧ್ಯಕ್ಷ ಕಿಚಿಡಿ ಲಕ್ಷ್ಮಣ ಮಾತನಾಡಿ, ಸಮಾಜದಲ್ಲಿ ಇನ್ನು ಸಾಕಷ್ಟು ಜನರು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಶಿಕ್ಷಣ ಪಡೆದು ಆರ್ಥಿಕವಾಗಿ ಸಬಲರಾಗುವ ಮೂಲಕ ಇತರೆ ಸಮಾಜದವರಂತೆ ಸಮಾಜದ ಮುಖ್ಯವಾಹಿನಿಗೆ ಯುವಕರು ಬರಬೇಕಾಗಿದೆ. ತಾಲೂಕು ನಾಯಕ ಸಂಘ ಈ ಹಿಂದೆ ಸಾಕಷ್ಟು ಕಾರ್ಯಗಳನ್ನು ಮಾಡಿದೆ. ಆದರೆ ನೂತನ ಪದಾಧಿಕಾರಿಗಳು ಸಮಾಜದ ಸಂಘಟನೆ ಮತ್ತು ಅಭಿವೃದ್ಧಿಗೆ ಮುಂದಾಗಬೇಕು ಎಂದು ಹೇಳಿದರು.
ಕಾರ್ಯದರ್ಶಿ ಗುಜ್ಜಲ ರಾಘವೇಂದ್ರ, ತಾಲೂಕು ನಾಯಕ ನೌಕರರ ಒಕ್ಕೂಟದ ಅಧ್ಯಕ್ಷ ಬಿಸಾಟಿ ತಾಯಪ್ಪ ನಾಯಕ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿಕಟಪೂರ್ವ ಅಧ್ಯಕ್ಷ ಜಂಬಾನಹಳ್ಳಿ ವೆಂಕೋಬಣ್ಣ ಮಾತನಾಡಿದರು.
ರೈತ ಸಂಘದ ಅಧ್ಯಕ್ಷ ತಾರಿಹಳ್ಳಿ ಹುಲುಗಜ್ಜಪ್ಪ, ಸಣ್ಣಕ್ಕಿ ರುದ್ರಪ್ಪ, ಬ್ಯಾಲಾಳು ಪಂಪಾಪತಿ, ನೆನಗಡ್ಲಿ ವೆಂಕೋಬಣ್ಣ, ಬೆಳಗೂಡು ರುದ್ರಪ್ಪ, ಶಿಡ್ಲಯ್ಯನವರ ಮೂರ್ತೆಪ್ಪ, ಎಂ.ಜೆ. ಜೋಗಯ್ಯ, ಸುದರ್ಶನ ನಾಯಕ, ದೇವಲಾಪುರ ವಿರೂಪಾಕ್ಷಿ, ಯಮನೂರಪ್ಪ, ಗುಜ್ಜಲ್ ಚಂದ್ರಶೇಖರ್, ಉಮೇಶ್, ಬಿ. ಪಂಪಾಪತಿ, ಸಣ್ಣ ಹುಲುಗಪ್ಪ, ಜೆ. ಸತ್ಯನಾರಾಯಣ, ಕಿಚಿಡಿ ಶ್ರೀನಿವಾಸ್, ತಾರಿಹಳ್ಳಿ ಶ್ರೀನಿವಾಸ್, ನೀಲಕಂಠ, ಕಟಗಿ ಬಸವರಾಜ್, ಸಣ್ಣಕ್ಕಿ ವೀರಭದ್ರಪ್ಪ, ದೇವರಮನಿ ಯಲ್ಲಪ್ಪ, ಬಾಣದ ಸುದರ್ಶನ, ಗುಡಿಗುಂಟಿ ಮಲ್ಲಿಕಾರ್ಜುನ, ನಿಂಗಪ್ಪ ಸೇರಿದಂತೆ ಹಲವರು ಇದ್ದರು.
ವೆಂಕೋಬ ಪೂಜಾರಿ ಸ್ವಾಗತಿಸಿದರು. ದುರುಗಪ್ಪ ಪೂಜಾರಿ ನಿರೂಪಿಸಿದರು. ಇದೇ ಸಂದರ್ಭದಲ್ಲಿ ತಾಲೂಕು ನಾಯಕ ವಾಲ್ಮೀಕಿ ಸಂಘದ ನೂತನ ಪದಾಧಿಕಾರಿಗಳನ್ನು ಹಾಗೂ ನಿಕಟಪೂರ್ವ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು. ತಾಲೂಕಿನ ಹಲವು ಗ್ರಾಮಗಳಿಂದ ಜನತೆ ಆಗಮಿಸಿದ್ದರು.